ಶಿವಮೊಗ್ಗ ತಾಲೂಕಿನ ಹಳ್ಳಿಗಳಲ್ಲಿ ಶೌಚಗುಂಡಿ ಸ್ವಚ್ಚಗೊಳಿಸುವ ಯಂತ್ರಗಳೇ ಇಲ್ಲ!

ಶಿವಮೊಗ್ಗ, ಜ.೫; ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ತವರೂರು, ಶಿವಮೊಗ್ಗ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಶೌಚಗುಂಡಿ ಹಾಗೂ ಮ್ಯಾನ್ಹೋಲ್ ಸ್ವಚ್ಚತೆಗೆ ಬೇಕಾದ ಸಕ್ಕಿಂಗ್, ಜೆಟ್ಟಿಂಗ್, ರಾಡಿಂಗ್ ಮಷಿನ್ ಗಳೇ ಇಲ್ಲ..!ಹೌದು. ಇದು ಸತ್ಯ! ಶಿವಮೊಗ್ಗ ತಾಲೂಕು ವ್ಯಾಪ್ತಿಯ 42 ಗ್ರಾಮ ಪಂಚಾಯ್ತಿಗಳಲ್ಲಿ, ಒಂದೇ ಒಂದೂ ಕಡೆಯು ಶೌಚಗುಂಡಿ ಸ್ವಚ್ಚಗೊಳಿಸುವ ಸಕ್ಕಿಂಗ್ ಯಂತ್ರಗಳಿಲ್ಲ. ಇದರಿಂದ ಗ್ರಾಮೀಣ ಭಾಗದಲ್ಲಿ ಶೌಚಗುಂಡಿ, ಯುಜಿಡಿ ಗುಂಡಿಗಳು ಭರ್ತಿಯಾದರೆ ಯಾವ ರೀತಿಯಲ್ಲಿ ಸ್ವಚ್ಚಗೊಳಿಸಲಾಗುತ್ತದೆ ಎಂಬುವುದು ಪ್ರಶ್ನಾರ್ಹವಾಗಿದೆ!
ನಿಷೇಧ:ಒಂದೆಡೆ ಕೇಂದ್ರ-ರಾಜ್ಯ ಸರ್ಕಾರಗಳು, ಮಲ ಹೊರುವ (ಮ್ಯಾನುವೆಲ್ ಸ್ಕ್ಯಾವೆಂಜಿಂಗ್) ಅನಿಷ್ಠ ಪದ್ದತಿ ನಿಷೇಧಿಸಿವೆ. 2013 ರ ಮ್ಯಾನುವೆಲ್ ಸ್ಕ್ಯಾವೆಂಜಿಂಗ್ ಕಾನೂನು ಪ್ರಕಾರ ಶೌಚಗುಂಡಿ, ಒಳಚರಂಡಿ, ತೆರೆದ ಗುಂಡಿ, ಗಟಾರಗಳನ್ನು ಬರಿಗೈಯಿಂದ ಸ್ವಚ್ಚ ಮಾಡುವ ಅಮಾನವೀಯ ಪದ್ದತಿ ರಾಜ್ಯದಲ್ಲಿ ಸಂಪೂರ್ಣ ನಿಷೇಧಿತವಾಗಿದೆ.  ನಿಯಮ ಉಲ್ಲಂಘಿಸುವ ಆಡಳಿತ, ವ್ಯಕ್ತಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲು ಹಾಗೂ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಈ ಕಾರಣದಿಂದಲೇ ಕಡ್ಡಾಯವಾಗಿ ನಗರ, ಪಟ್ಟಣ ಹಾಗೂ ಗ್ರಾಮೀಣ ಸ್ಥಳೀಯಾಡಳಿತಗಳು ಸಕ್ಕಿಂಗ್ ಯಂತ್ರ ಖರೀದಿಸುವ ಸೂಚನೆಗಳನ್ನು ಸರ್ಕಾರ ನೀಡುತ್ತದೆ. ಶಿವಮೊಗ್ಗ ತಾಲೂಕಿನಲ್ಲಿಲ್ಲ:ಗ್ರಾಮೀಣ ಭಾಗದಲ್ಲಿ ಬಯಲು ಮಲ ವಿಸರ್ಜನೆಗೆ ಕಡಿವಾಣ ಹಾಕಲು, ಪ್ರತಿಯೊಂದು ಮನೆಗೂ ಶೌಚಾಲಯ ನಿರ್ಮಾಣಕ್ಕೆ ಸರ್ಕಾರಗಳು ಆದ್ಯತೆ ನೀಡಿವೆ. ಶೌಚಾಲಯ ನಿರ್ಮಾಣಕ್ಕೆ ಸಹಾಯಧನ ನೀಡುತ್ತಿವೆ. ಇದರಿಂದ ಗ್ರಾಮೀಣ ಭಾಗಗಳ ಪ್ರತಿಯೊಂದು ಮನೆಯಲ್ಲಿ ಶೌಚಾಲಯಗಳಿವೆ. ಶಿವಮೊಗ್ಗ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಶೌಚ ಗುಂಡಿಗಳು ಭರ್ತಿಯಾದ ವೇಳೆ, ಸ್ವಚ್ಚತೆಗೆ ಗ್ರಾಪಂ ಆಡಳಿತಗಳಲ್ಲಿ ಸಕ್ಕಿಂಗ್- ಜೆಟ್ಟಿಂಗ್-ರಾಡಿಂಗ್ ಯಂತ್ರಗಳಿಲ್ಲ. ಗ್ರಾಪಂಗಳಿಗೆ ಸ್ವಚ್ಚತಾ ಯಂತ್ರಗಳ ಖರೀದಿಗೆ ಅಗತ್ಯ ಅನುದಾನದ ಲಭ್ಯತೆಯಿಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ಸಿಬ್ಬಂದಿಗಳಿಲ್ಲ. ತಾಲೂಕು ಪಂಚಾಯ್ತಿ ಮೂಲಕ ಗ್ರಾಪಂಗಳಿಗೆ ಮಷಿನ್ ಖರೀದಿಸಿ ಕೊಡುವ ಅವಕಾಶವಿದ್ದರೂ, ಶಿವಮೊಗ್ಗ ತಾಲೂಕು ಪಂಚಾಯ್ತಿಯಿಂದ ಯಾವುದೇ ಗ್ರಾಪಂಗೂ ಮಷಿನ್ ಲಭ್ಯವಾಗಿಲ್ಲ. ತೊಂದರೆ:ಶಿವಮೊಗ್ಗ ನಗರಕ್ಕೆ ಹೊಂದಿಕೊಂಡಂತೆ ಹಲವು ಗ್ರಾಮ ಪಂಚಾಯ್ತಿಗಳಿವೆ. ಹೊಸದಾಗಿ ಬಡಾವಣೆಗಳು ರಚನೆಯಾಗಿವೆ. ಈ ಎಲ್ಲ ಬಡಾವಣೆಗಳಲ್ಲಿಯೂ ಯುಜಿಡಿ ವ್ಯವಸ್ಥೆಯಿದೆ. ಇಂತಹ ಕಡೆಗಳಲ್ಲಿ ಯುಜಿಡಿಗಳು ಕಟ್ಟಿಕೊಂಡಾಗ, ಇವುಗಳ ಸ್ವಚ್ಚತೆಗೆ ಗ್ರಾ.ಪಂ. ಆಡಳಿತಗಳು ಹರಸಾಹಸ ಪಡುವಂತಾಗಿದೆ. ಸಕಾಲದಲ್ಲಿ ಸಮಸ್ಯೆ ಪರಿಹಾರವಾಗದೆ ನಿವಾಸಿಗಳು ತಾಪತ್ರಯ ಹೇಳತೀರದಾಗಿದೆ.
ಶಾಸಕರು ಗಮನಿಸಲಿ: ಶಿವಮೊಗ್ಗ ತಾಲೂಕು ವ್ಯಾಪ್ತಿಯ ಯಾವುದೇ ಗ್ರಾಮ ಪಂಚಾಯ್ತಿಗಳಲ್ಲಿ ಶೌಚಗುಂಡಿ ಸ್ವಚ್ಚಗೊಳಿಸಲು ಅಗತ್ಯವಾದ ಸಕ್ಕಿಂಗ್, ಜೆಟ್ಟಿಂಗ್, ರಾಡಿಂಗ್ ಮಷಿನ್ಗಳಿಲ್ಲದಿರುವ ಬಗ್ಗೆ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕ ಕೆ.ಬಿ.ಅಶೋಕನಾಯ್ಕ್ರವರು ಆದ್ಯ ಗಮನಹರಿಸಬೇಕಾಗಿದೆ.ಮಲ ಹೊರುವ ಪದ್ದತಿ ನಿಷೇಧಿಸಿ ಹಲವು ವರ್ಷಗಳೇ ಆಗುತ್ತಾ ಬಂದರೂ ಇಲ್ಲಿಯವರೆಗೂ ಶೌಚಗುಂಡಿ ಸ್ವಚ್ಚತೆಗೆ ಅಗತ್ಯ ಯಂತ್ರಗಳ ಖರೀದಿಸಲು ಸಾಧ್ಯವಾಗದಿರುವುದೇಕೆ ಎಂಬುವುದರ ಬಗ್ಗೆ, ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಬೇಕಾಗಿದೆ. ಸಾಧ್ಯವಾದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಜೊತೆ ಚರ್ಚಿಸಿ ಸ್ವಚ್ಚತಾ ಯಂತ್ರಗಳ ಖರೀದಿಗೆ ಸರ್ಕಾರದಿಂದ ಅಗತ್ಯ ಅನುದಾನ ಬಿಡುಗಡೆ ಮಾಡಿಸಬೇಕಾಗಿದೆ.ಇನ್ನಾದರೂ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪರವರು ಇತ್ತ ಗಮನಹರಿಸಬೇಕಾಗಿದೆ. ಶಿವಮೊಗ್ಗ ತಾಲೂಕು ಮಾತ್ರವಲ್ಲದೆ, ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಶೌಚಗುಂಡಿ ಸ್ವಚ್ಚತೆಗೆ ಅಗತ್ಯವಿರುವ ಯಂತ್ರಗಳ ಖರೀದಿಗೆ ಅಗತ್ಯ ಕ್ರಮಕೈಗೊಳ್ಳಲಿದ್ದಾರೆಯೇ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.