
ಶಿವಮೊಗ್ಗ, ಏ.೮- ವಿಧಾನಸಭಾ ಚುನಾವಣೆಗೆ ‘ಜಂಗೀ ಕುಸ್ತಿಗೆ ಅಖಾಡ ರೆಡಿಯಾಗಿದೆ? ಆದರೆ ಪೈಲ್ವಾನರುಗಳೇ ಸಿದ್ಧವಾಗಿಲ್ಲ…’ ಇದು, ಶಿವವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಸದ್ಯದ ಚುನಾವಣಾ ರಾಜಕಾರಣದ ಚಿತ್ರಣ?!
ಹೌದು. ವಿಧಾನಸಭೆ ಚುನಾವಣೆ ಘೋಷಣೆಯಾಗಿ ಹಲವೇ ದಿನಗಳೇ ಕಳೆದಿದೆ. ನಾಮಪತ್ರ
ಸಲ್ಲಿಕೆಗೆ ದಿನಗಣನೆ ಆರಂಭವಾಗಿದೆ. ಆದರೆ ಇಲ್ಲಿಯವರೆಗೂ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಗಳು ಯಾರೆಂಬುದು ಖಚಿತವಾಗಿಲ್ಲ.
ಯಾವ ಪಕ್ಷದಿಂದ ಯಾರು ಕಣಕ್ಕಿಳಿಯುತ್ತಾರೆ ಎಂಬುವುದು ಸಂಪೂರ್ಣ ನಿಗೂಢವಾಗಿ
ಪರಿಣಮಿಸಿದೆ. ಇದರಿಂದ ಅಭ್ಯರ್ಥಿಗಳ ಆಯ್ಕೆ ಚರ್ಚೆಗಳಿಗೆ ತೆರೆ ಬಿದ್ದಿಲ್ಲ.
ಬಿಜೆಪಿ -ಕಾಂಗ್ರೆಸ್‌ನಲ್ಲಿ ಟಿಕೆಟ್‌ಗೆ ಪೈಪೋಟಿಯಿದೆ. ಎರಡೂ ಪಕ್ಷಗಳಲ್ಲಿ ರಾಜಕೀಯ
ಚಟುವಟಿಕೆಗಳು ಬಿರುಸುಗೊಂಡಿವೆ. ಆದರೆ ಜೆಡಿಎಸ್ ಪಾಳೇಯದಲ್ಲಿ ಮಾತ್ರ ಯಾವ
ಚಟುಟಿಕೆಗಳು ಗೋಚರವಾಗುತ್ತಿಲ್ಲ. ಕಳೆದೆರೆಡು ದಿನಗಳಿಂದ ಆ ಪಕ್ಷದ ಕಾರ್ಯಕರ್ತರು
ಕರಪತ್ರ ವಿತರಣೆಗೆ ಚಾಲನೆ ನೀಡಿರುವುದಷ್ಟೆ ಹೊಸ ಬೆಳವಣಿಗೆಯಾಗಿದೆ.
ಬಿಜೆಪಿ: ಆಡಳಿತಾರೂಢ ಬಿಜೆಪಿ ಪಕ್ಷದಿಂದ, ಹಾಲಿ ಶಾಸಕ ಕೆ.ಎಸ್.ಈಶ್ವರಪ್ಪ
ಸ್ಪರ್ಧಿಸಲಿದ್ದಾರಾ? ಇಲ್ಲವೇ ಅವರ ಪುತ್ರ ಕೆ.ಇ.ಕಾಂತೇಶ್ ಗೆ ಅವಕಾಶ ಸಿಗಲಿದೆಯಾ?
ಅಪ್ಪ- ಮಗನ ಹೊರತಾಗಿ ಬೇರೆಯವರು ಅಖಾಕ್ಕಿಳಿಯಲಿದ್ದಾರಾ? ಎಂಬ ಕುತೂಹಲವಿದೆ. ಯಾರುಅಭ್ಯರ್ಥಿಯಾಗಲಿದ್ದಾರೆ ಎಂದು ಸ್ಪಷ್ಟವಾಗಿ ಹೇಳಲಾಗದಂತಹ ಸ್ಥಿತಿ ಬಿಜೆಪಿಯಲ್ಲಿದೆ.
ಈ ನಡುವೆ ಆ ಪಕ್ಷದ ವಿಧಾನ ಪರಿಷತ್ ಶಾಸಕ ಆಯನೂರು ಮಂಜುನಾಥ್ ಬಂಡಾಯದ ಕಹಳೆ ಮೊಳಗಿಸಿದ್ದಾರೆ. ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಯಾವ ಪಕ್ಷದಿಂದ
ಎಂಬುವುದು ಇನ್ನಷ್ಟೆ ಸ್ಪಷ್ಟವಾಗಬೇಕಾಗಿದೆ.
ಕಾಂಗ್ರೆಸ್: ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಕೋರಿ ೧೧ ಜನ ಅರ್ಜಿ ಸಲ್ಲಿಸಿದ್ದಾರೆ.
ಕಳೆದೆರೆಡು ವಾರಗಳ ಹಿಂದೆ ಟಿಕೆಟ್ ಪೈಪೋಟಿ ಆ ಪಕ್ಷದಲ್ಲಿ ಜೋರಾಗಿತ್ತು. ಕೆಲ
ಸ್ಪರ್ಧಾಕಾಂಕ್ಷಿಗಳು ಭಾರೀ ಲಾಬಿ ನಡೆಸಿದ್ದರು. ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್,
ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್, ಕಾರ್ಪೋರೇಟರ್ ಹೆಚ್.ಸಿ.ಯೋಗೇಶ್ ಹೆಸರುಗಳು
ಪ್ರಮುಖವಾಗಿ ಕೇಳಿಬಂದಿದ್ದವು.
ಈ ನಡುವೆ ದಿಢೀರ್ ಆಗಿ ಬಿಜೆಪಿ ಬಂಡಾಯ ನಾಯಕ ಆಯನೂರು ಮಂಜುನಾಥ್ ಹೆಸರು
ಕೇಳಿಬರಲಾರಂಭಿಸಿದೆ. ಇದು ಕೆಲ ಟಿಕೆಟ್ ಆಕಾಂಕ್ಷಿಗಳ ನಿದ್ದೆಗೆಡಿಸಿದೆ. ಇದರಿಂದ
ಕಾಂಗ್ರೆಸ್ ವರಿಷ್ಠರು ಯಾರ ‘ಕೈ’ ಹಿಡಿಯಲಿದ್ದಾರೆಂಬುವುದು ಗೊತ್ತಾಗುತ್ತಿಲ್ಲ.
ಜೆಡಿಎಸ್: ಬಿಜೆಪಿ-ಕಾಂಗ್ರೆಸ್ ನಲ್ಲಿ ಟಿಕೆಟ್ ರಾಜಕಾರಣ ಕಾವೇರಿದ್ದರೆ, ಜೆಡಿಎಸ್
ನಲ್ಲಿ ಇವ್ಯಾವ ಪೈಪೋಟಿಯೂ ಕಂಡುಬರುತ್ತಿಲ್ಲ. ಇದರಿಂದ ಜೆಡಿಎಸ್ ಅಭ್ಯರ್ಥಿ
ಕಣಕ್ಕಿಳಿಸುತ್ತಾ? ಇಲ್ಲವೇ? ಎಂಬ ಚರ್ಚೆಗಳು ಸ್ಥಳೀಯ ರಾಜಕೀಯ ವಲಯದಲ್ಲಿ
ನಡೆಯುವಂತಾಗಿದೆ!
ಆದರೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಅಭ್ಯರ್ಥಿಗಳ ಹೆಸರು ಘೋಷಣೆಯಾದ ನಂತರ, ತನ್ನ ಪಕ್ಷದ ಹುರಿಯಾಳು ಪ್ರಕಟಿಸಲು ಜೆಡಿಎಸ್ ವರಿಷ್ಠರು
ಚಿಂತಿಸುತ್ತಿದ್ದಾರೆ. ಟಿಕೆಟ್ ಸಿಗದೆ ಅಸಮಾಧಾನಗೊಂಡು ಪಕ್ಷದ ಕದ ತಟ್ಟುವ
‘ಪ್ರಭಾವಿ’ಗಳಿಗೆ ಮಣೆ ಹಾಕುವ ಸಾಧ್ಯಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.