ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ : ಸಂಸದ ಬಿ.ವೈ.ರಾಘವೇಂದ್ರ

ಸಂಜೆವಾಣಿ ವಾರ್ತೆ

ಶಿವಮೊಗ್ಗ, ಜೂ.೬:  ಪರಿಸರ ಉಳಿಸಿಕೊಂಡು ಕ್ಷೇತ್ರದ ಅಭಿವೃದ್ಧಿ ಮಾಡುವುದಕ್ಕೆ ಆದ್ಯತೆ ಕೊಡಲಾಗುವುದು. ಮಲೆನಾಡಿನ ಸಂಸ್ಕೃತಿ, ಪರಿಸರಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಕಾರ್ಯ ನಿರ್ವಹಿಸುವುದಾಗಿಯೂ ಜಿಲ್ಲೆಯಲ್ಲಿ ಹೆಚ್ಚಿರುವ ಮಾದಕ ವಸ್ತುಗಳ ಹಾವಳಿ ತಡೆಗಟ್ಟವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಂಡು, ಜನರ ಪ್ರೀತಿಯನ್ನು ಉಳಿಸಿಕೊಂಡು ಅಭಿವೃದ್ಧಿ ಮಾಡುವುದಾಗಿ ಸಂಸತ್ ಸದಸ್ಯ ಬಿ ವೈ ರಾಘವೇಂದ್ರ ಹೇಳಿದರು.ಲೋಕಸಭಾ ಕ್ಷೇತ್ರದಲ್ಲಿ ನಾಲ್ಕನೇ ಬಾರಿಗೆ ಆಯ್ಕೆಯಾಗಿರುವ ರಾಘವೇಂದ್ರ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಗಮನ ಹರಿಸುವ ಕೆಲಸ ಮಾಡುತ್ತೇನೆ. ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ, ಬಗರ್‌ಹುಕುಂ ಸಮಸ್ಯೆಯನ್ನು ಪರಿಹರಿಸಬೇಕಿದೆ. ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ಕೊಡಲಾಗುವುದು. ಮುಂಗಾರು ಮಳೆ ಈ ಬಾರಿ ಕೈಕೊಡುವಂತೆ ಕಾಣುತ್ತಿದೆ. ಮತ್ತೆ ಬರಗಾಲ ಎದುರಾಗಬಹುದು. ಈ ಎಲ್ಲವನ್ನೂ ಸರಕಾರದೊಟ್ಟಿಗೆ ಕೈ ಜೋಡಿಸಿ ಸಮರ್ಥವಾಗಿ ಕಾರ್ಯನಿರ್ವಹಿಸುವ ಭರವಸೆ ನೀಡಿದರು.ಎನ್‌ಡಿಎ ಮೈತ್ರಿ ಕೂಟ ೨೯೩ ಸ್ಥಾನ ಗೆದ್ದು ಸಾಧನೆ ಮಾಡಿದೆ. ಸ್ವಾತಂತ್ರ ನಂತರ ಕಾಂಗ್ರೆಸ್ಸೇತರ ಪಕ್ಷವಾಗಿ ಮೂರನೇ ಬಾರಿಗೆ ಎನ್ ಡಿಎ ಅಧಿಕಾರಕ್ಕೆ ಬರುತ್ತಿದೆ. ರಾಜ್ಯದಲ್ಲಿ ಡಬಲ್ ಡಿಜಿಟ್ ದಾಟುತ್ತೇವೆ ಅಂತ ಸಿಎಂ,ಡಿಸಿಎA ಹೇಳುತ್ತಿದ್ದರು. ರಾಜ್ಯದಲ್ಲಿ ಎನ್ಡಿಎ ೧೯ ಸ್ಥಾನ ಗೆದ್ದಿದೆ. ಕಾಂಗ್ರೆಸ್‌ಗೆ  ಮುಖಭಂಗವಾಗಿದೆ ಎಂದ ಅವರು, ಶಿವಮೊಗ್ಗ ಕ್ಷೇತ್ರದ ಮತದಾರರು ತಮಗೆ ಬೆಂಬಲ ಸೂಚಿಸಿದ್ದಾರೆ. ನನ್ನ ಗೆಲುವನ್ನು ಮತದಾರರಿಗೆ ಹಾಗೂ ಕಾರ್ಯಕರ್ತರಿಗೆ ಸಮರ್ಪಣೆ ಮಾಡುತ್ತೇನೆ ಎಂದರು.ವಿರೋಧ ಪಕ್ಷಗಳಿಂದ ಅಪಪ್ರಚಾರಗಳು ನಡೆದವು. ಮತದಾನದ ಮೂಲಕ ಜನ ಅಪಪ್ರಚಾರಗಳಿಗೆ ಉತ್ತರ ಕೊಟ್ಟಿದ್ದಾರೆ. ಹೆಚ್ಚಿನ ಅಂತರದಲ್ಲಿ ಗೆಲ್ಲಿಸಿದ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ,  ಕುಮಾರಸ್ವಾಮಿ ಹಾಗೂ ಜೆಡಿಎಸ್ ಮುಖಂಡರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.  ಸಂಘಪರಿವಾರದ ಪ್ರಮುಖರು ಆಶೀರ್ವಾದ ಮಾಡಿದ್ದಾರೆ ಅವರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಟಿ ಡಿ ಮೇಘರಾಜ್ ಸಹಿತ  ಎಂಎಲ್‌ಎ, ಎಂಎಲ್ಸಿ, ಜಿಲ್ಲಾ ಮುಖಂಡರು ಹಾಜರಿದ್ದರು.