ಶಿವಮೊಗ್ಗ ಜಿಲ್ಲೆಯಲ್ಲಿ ರಣ ಬಿಸಿಲು : ಬರಿದಾಗುತ್ತಿರುವ ಕೆರೆಕಟ್ಟೆಗಳು – ಶುರುವಾಗುತ್ತಿದೆ ಕುಡಿಯುವ ನೀರಿಗೆ ಹಾಹಾಕಾರ!

ಶಿವಮೊಗ್ಗ, ಮಾ. 21: ಇತ್ತೀಚಿನ ವರ್ಷಗಳಲ್ಲಿ ಕಂಡುಬರದ ರಣ ಬಿಸಿಲಿಗೆ ಪ್ರಸ್ತುತ ವರ್ಷ ಶಿವಮೊಗ್ಗ ಜಿಲ್ಲೆ ಸಾಕ್ಷಿಯಾಗುತ್ತಿದೆ. ಬಯಲು ಸೀಮೆಯ ರೀತಿಯಲ್ಲಿ ಮಲೆನಾಡಿನಲ್ಲಿ ತಾಪಮಾನ ದಾಖಲಾಗುತ್ತಿದೆ. ಇದು ನಾಗರೀಕರನ್ನು ಹೈರಾಣಾಗುವಂತೆ ಮಾಡಿದೆ!ಒಂದೆಡೆ ದಿನದಿಂದ ದಿನಕ್ಕೆ ಬಿಸಿಲ ಬೇಗೆ ಹೆಚ್ಚಾಗುತ್ತಿದೆ. ಮತ್ತೊಂದೆಡೆ, ಕಳೆದ ಎರಡ್ಮೂರು ತಿಂಗಳಿನಿಂದ ಮಳೆ ಕಣ್ಮರೆಯಾಗಿದೆ. ಇದೆಲ್ಲದರ ನೇರ ಪರಿಣಾಮ ನದಿ, ಕೆರೆಕಟ್ಟೆ, ನೀರಿನ ಸಂಗ್ರಹದ ಮೇಲೆ ಬೀರಲಾರಂಭಿಸಿದೆ. ಅಂತರ್ಜಲ ಮಟ್ಟ ಕುಸಿಯಲಾರಂಭಿಸಿದೆ.ಈಗಾಗಲೇ ಜಿಲ್ಲೆಯ ಹಲವೆಡೆ ಜಲಮೂಲಗಳು ಸಂಪೂರ್ಣ ಬರಿದಾಗಿವೆ. ಉಳಿದೆಡೆಯೂ ಕೂಡ ಉಷ್ಣಾಂಶದ ತೀವ್ರತೆಗೆ ಜಲ ಸಂಗ್ರಹ ಮಟ್ಟ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಲಾರಂಭಿಸಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮುಂದಿನ ತಿಂಗಳ ವೇಳೆಗೆ ಗಂಭೀರ ಸ್ವರೂಪದ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಗಳು ಗೋಚರವಾಗುತ್ತಿವೆ.ಈಗಾಗಲೇ ಹಲವು ಗ್ರಾಮಗಳಲ್ಲಿ ಬೋರ್ ವೆಲ್, ಬಾವಿಗಳಲ್ಲಿ ಅಂತರ್ಜಲ ಕುಸಿತವಾಗುತ್ತಿರುವುದರಿಂದ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುವಂತಾಗಿದೆ. ತಾಪಮಾನದ ಪ್ರಮಾಣ ಇದೇ ರೀತಿ ಮುಂದುವರಿದರೆ ಜೀವ ಜಲಕ್ಕೆ ತೀವ್ರ ಸ್ವರೂಪದ ತತ್ವಾರ ಎದುರಾಗುವುದು ನಿಶ್ಚಿತವಾಗಿದೆ.ಕಣ್ಮರೆಯಾದ ಬೇಸಿಗೆ ಮಳೆ : ಕಳೆದ ವರ್ಷ ಆಗಾಗ್ಗೆ ಬೀಳುತ್ತಿದ್ದ ಬೇಸಿಗೆ ಮಳೆಯಿಂದ ಜನ – ಜಾನುವಾರುಗಳಿಗೆ ಸಾಕಷ್ಟು ಅನುಕೂಲವಾಗಿತ್ತು. ಪ್ರಸ್ತುತ ಮಳೆಯೇ ಇಲ್ಲವಾಗಿದೆ. ಇದರಿಂದ ಜಾನುವಾರುಗಳು ಮೇವಿಗೆ ಅಲೆದಾಡುವಂತಾಗಿದೆ. ಹಸಿವಿನಿಂದ ಕಸಕಡ್ಡಿ, ಪ್ಲಾಸ್ಟಿಕ್ ತಿನ್ನುವಂತಹ ದಾರುಣ ದೃಶ್ಯಗಳು ಹಲವೆಡೆ ಕಂಡುಬರುತ್ತಿವೆ.