ಶಿವಮೊಗ್ಗ : ಚರಂಡಿ ಸ್ಲ್ಯಾಬ್ ಕುಸಿದು ಬಿದ್ದು ವ್ಯಕ್ತಿ ಸ್ಥಳದಲ್ಲಿಯೇ ಸಾವು!

ಶಿವಮೊಗ್ಗ, ಜ.30: ಚರಂಡಿ ಮೇಲಿನ ಸ್ಲ್ಯಾಬ್ (ಹೊದಿಕೆ) ಕುಸಿದು ಬಿದ್ದ ಪರಿಣಾಮ, ಅದರ ಮೇಲೆ ನಿಂತಿದ್ದ ವ್ಯಕ್ತಿಯೋರ್ವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶಿವಮೊಗ್ಗದ ವಿನೋಬನಗರ ಬಡಾವಣೆ ವೀರಣ್ಣನ ಲೇಔಟ್ ಬಳಿ ಸೋಮವಾರ ಬೆಳಿಗ್ಗೆ ನಡೆದಿದೆ.ಬೊಮ್ಮನಕಟ್ಟೆ ನಿವಾಸಿ ಮುತ್ತಪ್ಪ (45) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಮುತ್ತಪ್ಪ ಅವರು ಚರಂಡಿ ಸ್ಲ್ಯಾಬ್ ಮೇಲೆ ನಿಂತು ಮೂತ್ರ ವಿಸರ್ಜನೆ ಮಾಡುತ್ತಿದ್ದ ವೇಳೆ ಏಕಾಏಕಿ ಸ್ಲ್ಯಾಬ್ ಕುಸಿದು ಬಿದ್ದಿದೆ.ಇದರಿಂದ ಮುತ್ತಪ್ಪ ಅವರು ಚರಂಡಿಯೊಳಗೆ ಬಿದ್ದಿದ್ದು ಅವರ ಮೇಲೆಯೆ ಸ್ಲ್ಯಾಬ್ ಗಳು ಬಿದ್ದಿವೆ. ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಅಸುನೀಗಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.ಚರಂಡಿಯಿಂದ ಶವ ಮೇಲಕ್ಕೆತ್ತಿ ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ವಿನೋಬನಗರ ಠಾಣೆ ಇನ್ಸ್’ಪೆಕ್ಟರ್ ಚಂದ್ರಕಲಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.