’ಶಿವಮೊಗ್ಗ ಗ್ರಾಮಾಂತರ ತಾಲೂಕು ರಚನೆಗೆ ಸಿಎಂಗೆ ಮನವಿ’ : ಶಾಸಕ ಕೆ.ಬಿ.ಅಶೋಕನಾಯ್ಕ್


ಶಿವಮೊಗ್ಗ, ನ. ೩: ’ಶಿವಮೊಗ್ಗ ಗ್ರಾಮಾಂತರ ತಾಲೂಕು ರಚನೆ ಸಂಬಂಧ ಆದಷ್ಟು ಶೀಘ್ರದಲ್ಲಿ ಮುಖ್ಯಮಂತ್ರಿ ಬಳಿಗೆ ನಿಯೋಗ ಕೊಂಡೊಯ್ಯಲಾಗುವುದು’ ಎಂದು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಬಿ.ಅಶೋಕನಾಯ್ಕ್‌ರವರು ತಿಳಿಸಿದ್ದಾರೆ. ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಶಿವಮೊಗ್ಗ ತಾಲೂಕು ವ್ಯಾಪ್ತಿಯಲ್ಲಿ ಅತೀ ಹೆಚ್ಚು ಜನಸಂಖ್ಯೆಯಿದೆ. ಕಾರ್ಯಬಾಹುಳ್ಯ ಹೆಚ್ಚಿದೆ. ಶಿವಮೊಗ್ಗ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಿಗೆ ಪ್ರತ್ಯೇಕ ತಾಲೂಕು ಕಚೇರಿಯ ಅಗತ್ಯವಿದೆ. ಇದರಿಂದ ಜನಸಾಮಾನ್ಯರ ಕೆಲಸಕಾರ್ಯಗಳು ಸುಗಮವಾಗಲಿದೆ. ಕಚೇರಿಗೆ ಅಲೆದಾಡುವುದು ತಪ್ಪಲಿದೆ ಎಂದು ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ಈಗಾಗಲೇ ತಾವು ಪ್ರತ್ಯೇಕ ಶಿವಮೊಗ್ಗ ಗ್ರಾಮಾಂತರ ತಾಲೂಕು ಕೇಂದ್ರ ರಚಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರಿಗೆ ಮನವಿ ಮಾಡಿದ್ದೆನೆ. ಅವರು ಕೂಡ ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೊರೊನಾ ಸೋಂಕಿನ ತೀವ್ರತೆ ಕಡಿಮೆಯಾದ ನಂತರ ಮತ್ತೊಮ್ಮೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಚರ್ಚಿಸಲಾಗುವುದು.
ಶತಾಯಗತಾಯ ಪ್ರತ್ಯೇಕ ಗ್ರಾಮೀಣ ತಾಲೂಕು ರಚನೆಗೆ ತಮ್ಮ ಅಧಿಕಾರಾವಧಿಯಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತೆನೆ. ಇಷ್ಟರಲ್ಲಿಯೇ ಪಕ್ಷದ ಹಿರಿಯರು, ತಾಲೂಕಿನ ಪ್ರಮುಖರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗುವುದು. ನಂತರ ಸಿಎಂ ಬಳಿಗೆ ನಿಯೋಗ ಕೊಂಡೊಯ್ಯಲಾಗುವುದು ಎಂದು ಕೆ.ಬಿ.ಅಶೋಕನಾಯ್ಕ್‌ರವರು ತಿಳಿಸಿದ್ದಾರೆ.