ಶಿವಮೊಗ್ಗ, ಅ. ೨: ಶಿವಮೊಗ್ಗದ ರಾಗಿಗುಡ್ಡ ಬಡಾವಣೆಯಲ್ಲಿ ಭಾನುವಾರ ಈದ್ ಮಿಲಾದ್ ಮೆರವಣಿಗೆ ವೇಳೆ ನಡೆದ ಅಹಿತಕರ ಘಟನೆಗೆ ಸಂಬಂಧಿಸಿದಂತೆ, ೨೪ ಪ್ರಕರಣ ದಾಖಲಾಗಿದೆ. ೬೦ ಜನರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ತಿಳಿಸಿದ್ದಾರೆ.
ಈ ಕುರಿತಂತೆ ಅವರು ಮಾಹಿತಿ ನೀಡಿರುವ ಅವರು, ಘಟನೆಯಲ್ಲಿ ೪ ವಾಹನಗಳು ಜಖಂಗೊಂಡಿವೆ. ೭ ಮನೆಗಳ ಕಿಟಕಿ ಗಾಜುಗಳಿಗೆ ಹಾನಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ರಾಗಿಗುಡ್ಡದಲ್ಲಿ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ಶಾಂತ ಪರಿಸ್ಥಿತಿ ಮನೆ ಮಾಡಿದೆ. ಘಟನೆ ನಡೆದ ಅರ್ಧ ಗಂಟೆಯಲ್ಲಿಯೇ ಪರಿಸ್ಥಿತಿ ತಹಬದಿಗೆ ತರಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಶಾಂತ ಸ್ಥಿತಿ: ಭಾನವಾರ ಸಂಜೆ ನಡೆದ ಘಟನೆಗಳು ಹೊರತುಪಡಿಸಿದರೆ, ಉಳಿದಂತೆ ರಾಗಿಗುಡ್ಡದಲ್ಲಿ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ. ಸಂಪೂರ್ಣ ಶಾಂತ ಸ್ಥಿತಿ ನೆಲೆಸಿದೆ. ಜನಜೀವನ ಸಹಜ ಸ್ಥಿತಿಗೆ ಮರಳಲಾರಂಭಿಸಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಬಡಾವಣೆಯ ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಪೊಲೀಸ್ ಪಹರೆ ಮುಂದುವರಿಸಲಾಗಿದೆ. ಗಸ್ತು ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ.