ಶಿವಮೊಗ್ಗ : ಕೊಲೆ ಆರೋಪಿ ಬಂಧನ

ಶಿವಮೊಗ್ಗ, ಎ. ೧೭: ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಡಣಾಯಕಪುರ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದ್ದ ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಡಣಾಯಕಪುರದ ನಿವಾಸಿ ಚೌಡಪ್ಪ (೨೭) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಆಪಾದಿತನನ್ನು ಪೊಲೀಸರು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಎ. ೧೨ ರಂದು ಬಸಪ್ಪ (೫೪) ಎಂಬುವರನ್ನು ಕಲ್ಲಿನಿಂದ ತಲೆ ಹಾಗೂ ಮುಖಕ್ಕೆ ಜಜ್ಜಿ, ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಪ್ರಕರಣ ಸಂಪೂರ್ಣ ನಿಗೂಢವಾಗಿತ್ತು. ಮೃತ ಬಸಪ್ಪರವರ ಪುತ್ರ ನೀಡಿದ ದೂರಿನ ಆಧಾರದ ಮೇಲೆ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾತ್ತು.

ಪ್ರಕರಣದ ಕ್ಷಿಪ್ರ ತನಿಖೆ ನಡೆಸಿದ ಪೊಲೀಸರು, ಕೊಲೆಗೀಡಾದ ಬಸಪ್ಪಗೆ ಪರಿಚಯವಿದ್ದ ಚೌಡಪ್ಪನನ್ನು ಎ.೧೬ ರಂದು ಬಂಧಿಸಿದ್ದಾರೆ. ಹಣಕ್ಕಾಗಿ ಈ ಕೊಲೆ ಮಾಡಿದ್ದಾಗಿ ಆರೋಪಿಯು ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.