ಶಿವಮೊಗ್ಗ : ಕೊನೆಗೂ ಸಾಗರ ಪೊಲೀಸರಿಗೆ ಸಿಕ್ಕಿಬಿದ್ದ ಅಡಕೆ ಕಳ್ಳರು!

ಸಂಜೆವಾಣಿ ವಾರ್ತೆ

ಶಿವಮೊಗ್ಗ, ಮೇ 29: ಸಾಗರ, ಸೊರಬ ತಾಲೂಕಿನ ವಿವಿಧೆಡೆ ಅಡಕೆ ಕಳವು ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪದ ಮೇರೆಗೆ ಐವರನ್ನು ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸುವಲ್ಲಿ ಸಫಲರಾಗಿದ್ದಾರೆ.ಶಿಕಾರಿಪುರ ತಾಲೂಕು ಹರಗುವಳ್ಳಿಯ ನಿವಾಸಿ ತುಕ್’ರಾಜ್ (24), ಹನುಮಂತಪ್ಪ (24), ರಾಕೇಶ್ (20), ಅಭಿಷೇಕ್ (20) ಹಾಗೂ ಶಿವಕುಮಾರ್ (23) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.ಆರೋಪಿಗಳ ಬಂಧನದಿಂದ ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ 3 ಪ್ರಕರಣ, ಆನಂದಪುರ ಠಾಣೆ ವ್ಯಾಪ್ತಿಯ 3, ಕಾರ್ಗಲ್ ಪೊಲೀಸ್ ಠಾಣೆ ಹಾಗೂ ಸೊರಬ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ ತಲಾ 1 ಅಡಕೆ ಕಳವು ಪ್ರಕರಣಗಳು ಬೆಳಕಿಗೆ ಬಂದಂತಾಗಿದೆ.ಬಂಧಿತರಿಂದ 8,19,000 ರೂ. ಮೌಲ್ಯದ ಅಡಕೆ, 50 ಸಾವಿರ ನಗದು, ಕೃತ್ಯಕ್ಕೆ ಬಳಸಿದ್ದ ಟಾಟಾ ಏಸ್ ವಾಹನ, ಮಹೇಂದ್ರ ಪಿಕ್ ಅಪ್ ವಾಹನ ವಶಕ್ಕೆ ಪಡೆಯಲಾಗಿದೆ.ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಕಾರಿಯಪ್ಪ ಎ ಜಿ, ಸಾಗರ ಡಿವೈಎಸ್ಪಿ ಗೋಪಾಲಕೃಷ್ಣ ನಾಯ್ಕ್ ಟಿ ಮಾರ್ಗದರ್ಶನದಲ್ಲಿ ಸಾಗರ ಗ್ರಾಮಾಂತರ ಠಾಣೆ ಇನ್ಸ್’ಪೆಕ್ಟರ್ ಮಹಾಬಲೇಶ್ವರ ಎಸ್.ಎನ್., ಸಬ್ ಇನ್ಸ್’ಪೆಕ್ಟರ್ ಮುಂದಿನಿಮನಿ,ಸಿಬ್ಬಂದಿಗಳಾದ ಸಿ.ಹೆಚ್.ಸಿ ಸನಾವುಲ್ಲಾ ಶೇಕ್, ಫೈರೋಜ್ ಅಹಮದ್, ಸಿಪಿಸಿಗಳಾದ ರವಿಕುಮಾರ್, ಪ್ರವೀಣ್ ಕುಮಾರ್, ಗುರುಬಸವರಾಜ್, ಗಿರೀಶ್ ಬಾಬು ಅವರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಸಫಲರಾಗಿದ್ದಾರೆ. ಈ ಕುರಿತಂತೆ ಶಿವಮೊಗ್ಗ ನಗರದ ಡಿಎಆರ್ ಸಭಾಂಗಣದಲ್ಲಿ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿದರು. ಅಡಕೆ ಕಳವು ತಂಡದ ಬಂಧನದ ಕುರಿತಂತೆ ಮಾಹಿತಿ ನೀಡಿದರು. ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಸಫಲರಾದ ಪೊಲೀಸ್ ಅಧಿಕಾರಿ – ಸಿಬ್ಬಂದಿಗಳ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.