ಶಿವಮೊಗ್ಗ – ಕುಸಿದು ಬಿದ್ದ ಮನೆ ಗೋಡೆ : ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತ


ಶಿವಮೊಗ್ಗ, ಜು. 15: ನಗರದ ಸೋಮಿನಕೊಪ್ಪ ಬಡಾವಣೆ ಮಸೀದಿ ರಸ್ತೆಯಲ್ಲಿ ಮಳೆಯ ಕಾರಣದಿಂದ ಶುಕ್ರವಾರ ಮುಂಜಾನೆ ಮನೆಯೊಂದರ ಗೋಡೆ ಕುಸಿದು ಬಿದ್ದಿದ್ದು, ಮನೆಯಲ್ಲಿ ನಿದ್ರಿಸುತ್ತಿದ್ದ ಕುಟುಂಬದವರು ಕೂದಲೆಳೆ ಅಂತರದಲ್ಲಿ ಅನಾಹುತದಿಂದ ಪಾರಾಗಿದ್ದಾರೆ. 
ಕೂಲಿ ಕೆಲಸ ಮಾಡಿ ಜೀವನ ನಿರ್ವಹಿಸುವ, ಬಡ ವರ್ಗದ ಅಬ್ಬುಲ್ ಜಬ್ಬಾರ್ ಬಿನ್ ಅಬ್ದುಲ್ ಮಾಲೀಕ್ ಎಂಬುವರಿಗೆ ಈ ಮನೆ ಸೇರಿದ್ದಾಗಿದೆ. ‘
‘ಇತ್ತೀಚೆಗೆ ಬೀಳುತ್ತಿರುವ ಭಾರೀ ಮಳೆಯಿಂದ ಮನೆಯ ಗೋಡೆ ನೆನೆದಿತ್ತು. ಮುಂಜಾನೆ 2 ಗಂಟೆ ಸುಮಾರಿಗೆ ಏಕಾಏಕಿ ಕುಸಿದು ಬೀಳಲಾರಂಭಿಸಿತ್ತು. ಗೋಡೆ ಏನಾದರೂ ಒಳಭಾಗದಲ್ಲಿ ಬಿದ್ದಿದ್ದರೆ ಪಕ್ಕದಲ್ಲಿಯೇ ಮಲಗಿದ್ದ ಕುಟುಂಬ ಸದಸ್ಯರಿಗೆ ತೊಂದರೆಯಾಗುತ್ತಿತ್ತು. ಸ್ವಲ್ಪದರಲ್ಲಿಯೇ ಅನಾಹುತ ತಪ್ಪಿದೆ’ ಎಂದು ಅಬ್ದುಲ್ ಜಬ್ಬಾರ್ ತಿಳಿಸಿದ್ದಾರೆ. 
ಕುಟುಂಬಕ್ಕೆ ಆಧಾರವಾಗಿದ್ದ ಮನೆಯೇ ಕುಸಿದು ಬಿದ್ದಿದೆ. ಉಳಿದ ಗೋಡೆಯೂ ಅಪಾಯಕಾರಿ ಸ್ಥಿತಿಯಲ್ಲಿದೆ. ಬಡ ಕುಟುಂಬಕ್ಕೆ ತಕ್ಷಣವೇ ಜಿಲ್ಲಾಡಳಿತ ಸೂಕ್ತ ಪರಿಹಾರ ಕಲ್ಪಿಸಬೇಕು. ವಾಸಕ್ಕೆ ಮನೆ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.