ಶಿವಮೊಗ್ಗದ ಒಂದೇ ಕುಟುಂಬದ ನಾಲ್ವರಿಗೆ ಬ್ರಿಟನ್ ಸೋಂಕು

ಶಿವಮೊಗ್ಗ, ಡಿ. ೩೦:ದೇಶದಲ್ಲಿ ಕಾಣಿಸಿಕೊಂಡಿರುವ ರೂಪಾಂತರಿ ಕೊರೊನಾ ವೈರಸ್ ಶಿವಮೊಗ್ಗಕ್ಕೂ ಕಾಲಿಟ್ಟಿದೆ! ಬ್ರಿಟನ್ ದೇಶದಿಂದ ಹಿಂದಿರುಗಿದ್ದ ಒಂದೇ ಕುಟುಂಬದ ನಾಲ್ವರು ಸೋಂಕಿಗೆ ತುತ್ತಾಗಿರುವುದು ದೃಢಪಟ್ಟಿದೆ.

ಬ್ರಿಟನ್ ಗೆ ತೆರಳಿದ್ದ ಈ ಕುಟುಂಬದವರು ಬೆಂಗಳೂರಿಗೆ ಆಗಮಿಸಿ, ಅಲ್ಲಿಂದ ನೇರವಾಗಿ ಡಿ. ೨೨ ರಂದು ಶಿವಮೊಗ್ಗಕ್ಕೆ ಹಿಂದಿರುಗಿದ್ದರು. ಈ ಬಗ್ಗೆ ಮಾಹಿತಿ ಅರಿತ ಜಿಲ್ಲಾಡಳಿತ ಡಿ. ೨೩ ರಂದು ಇವರನ್ನು ಕೋವಿಡ್ ಪರೀಕ್ಷೆಗೊಳಪಡಿಸಿತ್ತು. ಎಲ್ಲರಲ್ಲಿಯೂ ಕೊರೋನ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ನಂತರ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ಇವರ ಗಂಟಲ ದ್ರವ ಹಾಗೂ ರಕ್ತದ ಮಾದರಿಯನ್ನು ಹೆಚ್ಚಿನ ತಪಾಸಣೆಗಾಗಿ ಬೆಂಗಳೂರಿನ ನಿಮಾನ್ಸ್ ಗೆ ರವಾನಿಸಲಾಗಿತ್ತು. ನಂತರ ಪೂನಾದ ವೈರಾಣು ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿಕೊಡಲಾಗಿತ್ತು. ಇದೀಗ ಇವರಲ್ಲಿ ಬ್ರಿಟನ್ ರೂಪಾಂತರಿ ಕೊರೊನಾ ವೈರಸ್ ಕಾಣಿಸಿಕೊಂಡಿರುವುದನ್ನು ಸರ್ಕಾರ ದೃಢಪಡಿಸಿದೆ. ಇವರಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.

ಪಾಸಿಟಿವ್: ಇವರ ಪ್ರಾಥಮಿಕ ಸಂಪರ್ಕಕ್ಕೆ ಬಂದವರ ಮಾಹಿತಿ ಸಂಗ್ರಹಿಸಿದ ಆರೋಗ್ಯ ಇಲಾಖೆ ಅವರನ್ನು ಕೂಡ ಕೋವಿಡ್ ಪರೀಕ್ಷೆಗೊಳಪಡಿಸಿತ್ತು. ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ ೭ ಜನರಲ್ಲಿ ಮೂವರಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಆದರೆ ಇದು ಬ್ರಿಟನ್ ರೂಪಾಂತರಿ ವೈರಸ್ ಹೌದೋ, ಅಲ್ಲವೋ ಎಂಬುವುದು ಇನ್ನಷ್ಟೆ ಸ್ಪಷ್ಟವಾಗಬೇಕಾಗಿದೆ.

ಸೀಲ್ ಡೌನ್: ಕೋವಿಡ್-೧೯ ಸೋಂಕು ದೃಡಪಡುತ್ತಿದ್ದಂತೆ ಸೋಂಕಿತ ಕುಟುಂಬದ ಮನೆ ಸೀಲ್ ಡೌನ್ ಜೊತೆಗೆ ಮನೆ ಸ್ಯಾನಿಟೈಸ್ ಮಾಡಲಾಗಿತ್ತು. ಆ ಮನೆಯ ಸುತ್ತಮುತ್ತಲಿನ ಮನೆಗಳ ಬಳಿಯು ಸ್ಯಾನಿಟೈಸ್ ಗೊಳಪಡಿಸಲಾಗಿದೆ. ಹಾಗೆಯೇ ಆ ಮನೆಯ ಕೆಲ ನಿವಾಸಿಗಳನ್ನು ಕೋವಿಡ್ ಪರೀಕ್ಷೆಗೊಳಪಡಿಸಲು ಆರೋಗ್ಯ ಇಲಾಖೆ ಮುಂದಾಗಿದೆ.

ತಗ್ಗಿದ ಪ್ರಮಾಣ: ಶಿವಮೊಗ್ಗದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಮಾಣ ಸಂಪೂರ್ಣ ತಗ್ಗಿದೆ. ಜನತೆ ಕೂಡ ಕೊರೊನಾ ಆತಂಕ, ಗೊಂದಲದಿಂದ ಹೊರ ಬರುತ್ತಿದ್ದಾರೆ. ಈ ವೇಳೆ ಬ್ರಿಟನ್ ದೇಶದ ರೂಪಾಂತರಿ ಕೊರೊನಾ ವೈರಸ್ ಕಾಣಿಸಿಕೊಂಡಿರುವುದು ಸಹಜವಾಗಿಯೇ ನಾಗರೀಕರಲ್ಲಿ ಕೊಂಚ ಆತಂಕ, ಗೊಂದಲವಿದೆ. ಬುಧವಾರ ನಗರದ ಜನಜೀವನ ಸಹಜವಾಗಿಯೇ ಇದ್ದಿದ್ದು ಕಂಡುಬಂದಿತು.

೨೩ ಮಂದಿ ಆಗಮನ: ಶಿವಮೊಗ್ಗಕ್ಕೆ ಲಂಡನ್ ನಿಂದ ಒಟ್ಟಾರೆ ೨೩ ಮಂದಿ ಆಗಮಿಸಿದ್ದರು. ಇವರೆಲ್ಲರ ಬಗ್ಗೆ ಆರೋಗ್ಯ ಇಲಾಖೆ ಕಾಲಮಿತಿಯಲ್ಲಿ ಮಾಹಿತಿ ಸಂಗ್ರಹಿಸಿ ಎಲ್ಲರನ್ನೂ ಕೋವಿಡ್ ಪರೀಕ್ಷೆಗೊಳಪಡಿಸಿತ್ತು ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸುತ್ತವೆ.

ಸಭೆ ಸಾಧ್ಯತೆ: ಬ್ರಿಟನ್ ದೇಶದ ರೂಪಾಂತರಿ ಕೊರೊನಾ ವೈರಸ್ ಶಿವಮೊಗ್ಗದಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಜಿಲ್ಲಾಡಳಿತ ನಗರದಲ್ಲಿ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ ಎಂಬುವುದು ಇನ್ನಷ್ಟೆ ಸ್ಪಷ್ಟವಾಗಬೇಕಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸಭೆ ನಡೆಸಿ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ.