ಶಿವಮೊಗ್ಗದಲ್ಲಿ 11 ಕ್ಕೂ ಅಧಿಕ ಕಾರುಗಳ ಗಾಜು ಪುಡಿಗೈದ ಕಿಡಿಗೇಡಿಗಳು!


ಶಿವಮೊಗ್ಗ, ಮೇ 20: ಶಿವಮೊಗ್ಗ ನಗರದಲ್ಲಿ ತಡರಾತ್ರಿ ಗಾಂಧಿಬಜಾರ್ ಸುತ್ತಮುತ್ತಲಿನ ರಸ್ತೆಗಳಲ್ಲಿ ಮನೆ ಮುಂಭಾಗ ನಿಲ್ಲಿಸಿದ್ದ ಕಾರುಗಳ ಗಾಜುಗಳನ್ನು ಕಿಡಿಗೇಡಿಗಳು ಪುಡಿಗೈದಿರುವ ಘಟನೆ ವರದಿಯಾಗಿದೆ. ಗಾಂಧಿಬಜಾರ್, ಸಿದ್ದಯ್ಯ ರಸ್ತೆ, ಎಂಕೆಕೆ ರಸ್ತೆ, ಮಂಜುನಾಥ ಟಾಕೀಸ್ ರಸ್ತೆಗಳ ಮನೆ ಮುಂಭಾಗ ಹಾಗೂ ರಸ್ತೆ ಬದಿ ನಿಲ್ಲಿಸಿದ್ದ ಸುಮಾರು 11 ಕಾರುಗಳ ಗಾಜುಗಳನ್ನು ಕಿಡಿಗೇಡಿಗಳು ಹಾನಿ ಮಾಡಿದ್ದಾರೆ. ಈ ವೇಳೆ ಒಂದು ಆಟೋದ ಗಾಜನ್ನು ಕೂಡ ಹೊಡೆದು ಹಾಕಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸಿದ್ದಯ್ಯ ರಸ್ತೆಯ ಮನೆಯೊಂದರಲ್ಲಿ ಹಾಕಲಾಗಿರುವ ಸಿಸಿ ಕ್ಯಾಮರಾದಲ್ಲಿ ಕಿಡಿಗೇಡಿಯೋರ್ವ ಎರಡು ಕಾರುಗಳ ಗಾಜುಗಳನ್ನು ಸರಳಿನಿಂದ ಹೊಡೆದು ಪುಡಿಗೈಯುತ್ತಿರುವ ದೃಶ್ಯ ದಾಖಲಾಗಿದೆ. ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷರಿಗೆ ಸೇರಿದ ಕಾರಿನ ಗಾಜನ್ನು ಕೂಡ ಹಾಳು ಮಾಡಲಾಗಿದೆ. ಘಟನೆಯ ಬಗ್ಗೆ ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಿಡಿಗೇಡಿಗಳ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಬೇಕು. ವಾಹನ ಮಾಲೀಕರಿಗೆ ನಷ್ಟ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ. ಮತ್ತೊಂದೆಡೆ, ಪ್ರಕರಣದ ಕುರಿತಂತೆ ದೊಡ್ಡಪೇಟೆ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಅನುಮಾನದ ಮೇರೆಗೆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.