ಶಿವಮೊಗ್ಗದಲ್ಲಿ ವಿಳಂವಾದ ರೈಲ್ವೆ ಮೇಲ್ಸೇತುವೆಗಳ ನಿರ್ಮಾಣ ಕಾಮಗಾರಿ!


ಶಿವಮೊಗ್ಗ, ಮೇ 14: ಶಿವಮೊಗ್ಗ ನಗರದ ಮೂರು ಕಡೆ, ರೈಲ್ವೆ ಮೇಲ್ಸೇತುವೆಗಳ
ನಿರ್ಮಾಣವಾಗುತ್ತಿವೆ. ಆದರೆ ಕಾಶೀಪುರ ಹಾಗೂ ಸವಳಂಗ ರಸ್ತೆ ರೈಲ್ವೆ ಗೇಟ್ ಬಳಿ,
ಸಮರೋಪಾದಿಯಲ್ಲಿ ಸಾಗುತ್ತಿದ್ದ ಕಾಮಗಾರಿಯು ಇತ್ತೀಚೆಗೆ ವಿಳಂಬವಾಗುತ್ತಿರುವ ದೂರು
ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.
ಇದರಿಂದ ಮಳೆಗಾಲ ಆರಂಭವಾಗುವುದರೊಳಗೆ, ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳುವುದು
ಬಹುತೇಕ ಅಸಾಧ್ಯವಾಗಿದೆ. ಇದರಿಂದ ಈ ರಸ್ತೆಗಳು ಹಾಗೂ ಇದಕ್ಕೆ ಹೊಂದಿಕೊಂಡಂತಿರುವ
ಸಮಾನಂತರ ರಸ್ತೆಗಳಲ್ಲಿ ಪ್ರಸ್ತುತ ಎದುರಾಗಿರುವ ಸಂಚಾರ ಅವ್ಯವಸ್ಥೆ ಮುಂದುವರಿಯಲಿದೆ.
ದಿಢೀರ್ ವಿಳಂಬ: ಕಾಶೀಪುರ ರೈಲ್ವೆ ಗೇಟ್ ಬಳಿ ಕಳೆದ ಒಂದೂವರೆ ವರ್ಷಕ್ಕೂ ಹೆಚ್ಚು
ಅವಧಿಯಿಂದ ಕಾಮಗಾರಿ ನಡೆಯುತ್ತಿದೆ. ಕಳೆದ ಕೆಲ ತಿಂಗಳುಗಳಿಂದ ಭರದಿಂದ ಕೆಲಸಕಾರ್ಯಗಳು
ನಡೆಯುತ್ತಿದ್ದವು. ದೊಡ್ಡ ಸಂಖ್ಯೆಯ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದರು.
ಈಗಾಗಲೇ ಫಿಲ್ಲರ್ ಗಳ ನಿರ್ಮಾಣ ಪೂರ್ಣಗೊಂಡಿದೆ.
ಮೇ ತಿಂಗಳಾಂತ್ಯದ ವೇಳೆ ಕಾಮಗಾರಿ ಪೂರ್ಣದ ವಿಶ್ವಾಸ ವ್ಯಕ್ತಪಡಿಸಲಾಗಿತ್ತು. ಆದರೆ
ಕಳೆದ ಒಂದೂವರೆ ತಿಂಗಳಿನಿಂದ ದಿಢೀರ್ ಆಗಿ ಕಾಮಗಾರಿ ವಿಳಂಬಗೊಂಡಿದೆ. ಆಮೆಗತಿಯಲ್ಲಿ
ಕೆಲಸಕಾರ್ಯಗಳು ನಡೆಯುತ್ತಿವೆ. ಇದೇ ರೀತಿ ಕಾಮಗಾರಿ ನಡೆದರೆ ಮಳೆಗಾಲ ಮುಗಿದರೂ ಕೆಲಸ
ಪೂರ್ಣಗೊಳ್ಳುವುದಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.
ಅದೇ ಕಥೆ: ಸವಳಂಗ ರಸ್ತೆಯಲ್ಲಿಯೂ ಇದೇ ಸ್ಥಿತಿಯಿದೆ. ಸಮರೋಪಾದಿಯಲ್ಲಿ ನಡೆಯುತ್ತಿದ್ದ
ಕೆಲಸಕಾರ್ಯಗಳು ಕಳೆದ ಹಲವು ವಾರಗಳಿಂದ ಸಂಪೂರ್ಣ ವಿಳಂಬಗೊಂಡಿದೆ. ಬೆರಳೆಣಿಕೆಯ
ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡುತ್ತಾರೆ.
ಸವಳಂಗ ರಸ್ತೆ ರೈಲ್ವೆ ಗೇಟ್ ಬಳಿ ವಾಹನಗಳ ಸಂಚಾರ ನಿರ್ಬಂಧದಿಂದ, ಸುತ್ತಮುತ್ತಲಿನ
ಬಡಾವಣೆಗಳಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿದೆ. ನಿವಾಸಿಗಳು ಇನಿಲ್ಲದ ಸಮಸ್ಯೆ
ಎದುರಿಸುತ್ತಿದ್ದಾರೆ. ವಾಹನ ಸವಾರರು ತೀವ್ರ ತೊಂದರೆ ಎದುರಿಸುವಂತಾಗಿದೆ.ಈ ಕಾರಣದಿಂದ ಕಾಲಮಿತಿಯೊಳಗೆ ಫ್ಲೈ ಓವರ್ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು
ಕ್ರಮಕೈಗೊಳ್ಳಬೇಕು ಎಂದು ಸುತ್ತಮುತ್ತಲಿನ ಬಡಾವಣೆ ನಿವಾಸಿಗಳು ಆಗ್ರಹಿಸುತ್ತಾರೆ.

Attachments areaReplyForward