ಶಿವಮೊಗ್ಗದಲ್ಲಿ ವಾಣಿಜ್ಯ ಉದ್ದೇಶಕ್ಕೆ ಆಕ್ಸಿಜನ್ ಸಿಲಿಂಡರ್ ಮಾರಾಟ ನಿಷೇಧ!

ಶಿವಮೊಗ್ಗ, ಮೇ 4; ‘ವಾಣಿಜ್ಯ ಉದ್ದೇಶಕ್ಕೆ ಆಕ್ಸಿಜನ್ ಸಿಲಿಂಡರ್ ಮಾರಾಟದ ಮೇಲೆ ನಿರ್ಬಂಧ… ತಾಲೂಕುಗಳಲ್ಲಿ ಸಮಸ್ಯೆ ಉದ್ಭವವಾಗದಂತೆ ನೋಡಿಕೊಳ್ಳಲು ಆಕ್ಸಿಜನ್ ಸಿಲಿಂಡರ್ ಗಳ ರವಾನೆಗೆ ವಿಶೇಷ ವಾಹನಗಳ ವ್ಯವಸ್ಥೆ… ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯಾಗದಂತೆ ಆರೋಗ್ಯ ಇಲಾಖೆಯಿಂದ ನಿಗಾ… ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ಕೋವಿಡ್ ವಾರ್ಡ್’ ಗಳಲ್ಲಿ ವೆಂಟಿಲೇಟರ್, ಆಕ್ಸಿಜನ್ ಬೆಡ್ ಗಳ ಸಂಖ್ಯೆಯಲ್ಲಿ ಹೆಚ್ಚಳ..!’
ಇದು, ಶಿವಮೊಗ್ಗ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯು ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಬಳಲುತ್ತಿರುವ ಹಾಗೂ ಇತರೆ ರೋಗಿಗಳಿಗೆ, ವೈದ್ಯಕೀಯ ಆಕ್ಸಿಜನ್ ಕೊರತೆಯಾಗದಂತೆ ಮಾಡಿಕೊಂಡಿರುವ ಪೂರ್ವಸಿದ್ದತೆಗಳ ಪ್ರಮುಖ ಹೈಲೈಟ್ಸ್ ಗಳು… ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ, ಕೊರೊನಾ ಸೋಂಕಿತರು ಸೇರಿದಂತೆ 24 ರೋಗಿಗಳು
ಸಾವನ್ನಪ್ಪಿದ ಘಟನೆಯೂ ಇಡೀ ರಾಜ್ಯವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ. ವೈದ್ಯಕೀಯ ನಿರ್ಲಕ್ಷ್ಯದ ಬಗ್ಗೆ ವ್ಯಾಪಕ ಜನಾಕ್ರೋಶ ವ್ಯಕ್ತವಾಗುತ್ತಿದೆ. ಆದರೆ ಶಿವಮೊಗ್ಗ ಜಿಲ್ಲಾಡಳಿತವು ಕಳೆದ ಹಲವು ದಿನಗಳ ಹಿಂದಿನಿಂದಲೇ, ಆಕ್ಸಿಜನ್ ಕೊರತೆಯಾಗದಂತೆ ವ್ಯಾಪಕ ಸಕಾಲಿಕ ಮುನ್ನೆಚ್ಚರಿಕೆ ಕ್ರಮಕೈಗೊಂಡು ರಾಜ್ಯದ ಗಮನ ಸೆಳೆದಿದೆ. ಆಕ್ಸಿಜನ್ ಲಭ್ಯತೆಯ ಮೇಲುಸ್ತುವಾರಿಗಾಗಿಯೇ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ, ಡಿಹೆಚ್ಓ, ಸರ್ಕಾರಿ ಮೆಡಿಕಲ್ ಕಾಲೇಜು ಡೀನ್, ಆಸ್ಪತ್ರೆ ಮುಖ್ಯಸ್ಥರ ಪ್ರತ್ಯೇಕ ಸಮಿತಿ ರಚಿಸಲಾಗಿದೆ. ಈ ಸಮಿತಿಯು ಆಕ್ಸಿಜನ್ ಲಭ್ಯತೆಯ ಬಗ್ಗೆ ನಿರಂತರವಾಗಿ ಪರಿಶೀಲನೆ ನಡೆಸುತ್ತಿದೆ.
ಕೊರತೆಯಿಲ್ಲ: ‘ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ, ಆಕ್ಸಿಜನ್ ಕೊರತೆಯಾಗದಂತೆ ವ್ಯಾಪಕ ಮುನ್ನೆಚ್ಚರಿಕೆ ವಹಿಸಲಾಗಿದೆ. ವಾಣಿಜ್ಯ ಉದ್ದೇಶಕ್ಕೆ ಆಕ್ಸಿಜನ್ ಮಾರಾಟ ಮಾಡದಂತೆ, ಎರಡು ಖಾಸಗಿ ಸಂಸ್ಥೆಗಳಿಗೆ ಈಗಾಗಲೇ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಶ್ ಸುರಗೀಹಳ್ಳಿರವರು ತಿಳಿಸಿದ್ದಾರೆ.
ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ‘ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಆಕ್ಸಿಜನ್ ಸ್ಟೋರೇಜ್ ಟ್ಯಾಂಕ್ ವ್ಯವಸ್ಥೆಯಿದೆ. ಇಲ್ಲಿ 13 ಕೆಡಿಎಲ್ ಆಕ್ಸಿಜನ್ ಸಂಗ್ರಹಿಸಬಹುದಾಗಿದೆ. ಪ್ರತಿ ಎರಡು ದಿನಗಳಿಗೊಮ್ಮೆ ಬಳ್ಳಾರಿಯಿಂದ ಇಲ್ಲಿಗೆ ಟ್ಯಾಂಕರ್ ಮೂಲಕ ಆಕ್ಸಿಜನ್ ಪೂರೈಕೆಯಾಗುತ್ತಿದೆ’ ಎಂದು ಹೇಳಿದ್ದಾರೆ.
ಖಾಸಗಿ ಆಸ್ಪತ್ರೆಗಳಲ್ಲಿಯೂ ಕೊರೊನಾ ರೋಗಿಗಳಿಗೆ ಆಕ್ಸಿಜನ್ ಕೊರತೆಯಾಗದಂತೆ ನಿಗಾವಹಿಸಲಾಗಿದೆ. ಆಕ್ಸಿಜನ್ ಅಗತ್ಯವಿದ್ದರೆ, ತಕ್ಷಣವೇ ಆರೋಗ್ಯ ಇಲಾಖೆಯ ಗಮನಕ್ಕೆ ತರುವಂತೆ ಕಟ್ಟುನಿಟ್ಟಿನ ಸೂಚನೆಯನ್ನು ಖಾಸಗಿ ಆಸ್ಪತ್ರೆಗಳಿಗೆ ರವಾನಿಸಲಾಗಿದೆ ಎಂದು ಡಿ.ಹೆಚ್.ಓ.ರವರು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಹೆಚ್ಚಳ: ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ಕೋವಿಡ್ ವಾರ್ಡ್  ಗಳಲ್ಲಿನ ಬಹುತೇಕ ಎಲ್ಲ ಬೆಡ್’ಗಳನ್ನು ಆಕ್ಸಿಜನ್ ಬೆಡ್’ಗಳಾಗಿ ಪರಿವತರ್ಿಸಲಾಗಿದೆ. ನಾನಾ ಕೋವಿಡ್ ವಾರ್ಡ್ ಗಳಲ್ಲಿಯೂ ಆಕ್ಸಿಜನ್ ಬೆಡ್ ಸಂಖ್ಯೆ ಹೆಚ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚಾದರೆ, ಈ ವಾರ್ಡ್ ಗಳನ್ನು ಕೋವಿಡ್ ರೋಗಿಗಳಿಗೆ ಬಳಕೆ ಮಾಡಿಕೊಳ್ಳುವ ಉದ್ದೇಶ ಇದರಲ್ಲಿದೆ. ಒಟ್ಟಾರೆ 800 ಕ್ಕೂ ಅಧಿಕ ಬೆಡ್ ಗಳ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಮೆಗ್ಗಾನ್ ಆಸ್ಪತ್ರೆಯಲ್ಲಿ 35 ವೆಂಟಿಲೇಟರ್’ಗಳಿವೆ. ಪ್ರಸ್ತುತ ಮತ್ತೆ ಹೊಸದಾಗಿ 15 ವೆಂಟಿಲೇಟರ್ಗಳನ್ನು ಅಳವಡಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಆರೋಗ್ಯ ಇಲಾಖೆ ಸುಪರ್ದಿಯಲ್ಲಿರುವ ಬೆಡ್’ಗಳು ಬಹುತೇಕ ಭರ್ತಿಯಾಗಿವೆ ಎಂದು ಇದೇ ವೇಳೆ ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.