ಶಿವಮೊಗ್ಗದಲ್ಲಿ ಮಾದರಿ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಸಿಎಂ ನಿರ್ಧಾರ!

 • ವರದಿ : ಬಿ. ರೇಣುಕೇಶ್
  ಶಿವಮೊಗ್ಗ, ಸೆ. ೨: ತವರೂರು ಶಿವಮೊಗ್ಗ ನಗರದಲ್ಲಿ, ಇಡೀ ರಾಜ್ಯಕ್ಕೆ ಮಾದರಿಯಾದ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರ್ಧರಿಸಿದ್ದಾರೆ. ಎಲ್ಲ ಅಂದುಕೊಂಡಂತೆ ನಡೆದರೆ, ಕೆಲ ತಿಂಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ಕೂಡ ನೆರವೇರಿಸಲಿದ್ದಾರೆ ಎಂದು ಸರ್ಕಾರದ ಉನ್ನತ ಮೂಲಗಳು ಮಾಹಿತಿ ನೀಡಿವೆ.
  ಬಿ.ಹೆಚ್.ರಸ್ತೆಯ ಜಿಲ್ಲಾ ರಕ್ಷಣಾಧಿಕಾರಿ ಕಚೇರಿ ಹಿಂಭಾಗದಲ್ಲಿರುವ ಸರ್ಕಾರಿ ಜಾಗದಲ್ಲಿ, ನೂತನ ಜಿಲ್ಲಾಡಳಿತ ಭವನ ನಿರ್ಮಿಸಲು ಯೋಚಿಸಲಾಗಿದೆ. ನಗರದ ಹೃದಯಭಾಗದಲ್ಲಿ ಈ ಪ್ರದೇಶವಿದ್ದು, ಸುಮಾರು ೧೧.೫೦ ಎಕರೆ ವಿಶಾಲ ಪ್ರದೇಶದಲ್ಲಿ ಕಟ್ಟಡ ನಿರ್ಮಾಣದ ರೂಪುರೇಷೆ ಸಿದ್ದಪಡಿಸಲಾಗಿದೆ ಎಂದು ತಿಳಿದುಬಂದಿದೆ.
  ’ಈ ಬಗ್ಗೆ ಮುಖ್ಯಮಂತ್ರಿಗಳು ವಿಶೇಷ ಆಸಕ್ತಿವಹಿಸಿದ್ದಾರೆ. ಕಳೆದ ಕೆಲ ತಿಂಗಳುಗಳ ಹಿಂದೆಯೇ ಸೂಕ್ತ ಪ್ರಸ್ತಾವನೆ ಕಳುಹಿಸಿ ಕೊಡುವಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ಗೆ ಸೂಚಿಸಿದ್ದರು. ಈಗಾಗಲೇ ಜಿಲ್ಲಾಡಳಿತ ಕೂಡ ಸರ್ಕಾರಕ್ಕೆ ಪ್ರಸ್ತಾವನೆ ರವಾನಿಸಿದೆ.
  ಕೊರೊನಾ-ಲಾಕ್‌ಡೌನ್ ಹಿನ್ನೆಲೆಯಲ್ಲಿ, ಈ ಪ್ರಸ್ತಾವನೆಗೆ ಸರ್ಕಾರದ ಅನುಮೋದನೆ ದೊರಕುವಲ್ಲಿ ವಿಳಂಬವಾಗಿತ್ತು. ಸದ್ಯದಲ್ಲಿಯೇ ಮುಖ್ಯಮಂತ್ರಿಗಳು ಭವನ ನಿರ್ಮಾಣಕ್ಕೆ ಅನುಮೋದನೆ ನೀಡುವುದರ ಜೊತೆಗೆ, ಅಗತ್ಯ ಅನುದಾನ ಬಿಡುಗಡೆ ಮಾಡಲಿದ್ದಾರೆ’ ಎಂದು ಅವರ ಆಪ್ತ ಮೂಲಗಳು ಹೇಳುತ್ತವೆ.
  ಸ್ಥಳಾವಾಕಾಶ: ಪ್ರಸ್ತುತ ಡಿಸಿ ಕಚೇರಿ ಕಟ್ಟಡದಲ್ಲಿ ವಿವಿಧ ವಿಭಾಗಗಳು ಕಾರ್ಯನಿರ್ವಹಿಸುತ್ತಿವೆ. ದಿನದಿಂದ ದಿನಕ್ಕೆ ಕಟ್ಟಡವು ಕಿಷ್ಕಂಧೆಯಾಗುತ್ತಿದೆ. ಕಚೇರಿ ಹೊರಾಂಗಣದಲ್ಲಿ ವಾಹನಗಳ ನಿಲುಗಡೆಗೆ ಸೂಕ್ತ ಸ್ಥಳಾವಾಕಾಶವಿಲ್ಲವಾಗಿದೆ.
  ಕಚೇರಿ ಆವರಣದಲ್ಲಿ, ಬೃಹತ್ ಪ್ರತಿಭಟನೆಗಳು ನಡೆದ ವೇಳೆ ಜನ-ವಾಹನ ಸಂಚಾರ ಅಸ್ತವ್ಯಸ್ತವಾಗುತ್ತಿದೆ. ಮತ್ತೊಂದೆಡೆ, ಹಲವು ಸರ್ಕಾರಿ ಕಚೇರಿಗಳು ನಗರದ ವಿವಿಧ ಬಡಾವಣೆಗಳಲ್ಲಿವೆ. ಕೆಲವು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ.
  ಇದರಿಂದ ನಾಗರೀಕರು ತೀವ್ರ ತೊಂದರೆ ಪಡುವಂತಾಗಿದೆ. ಈ ಕಾರಣದಿಂದ ಸುಸಜ್ಜಿತ ಜಿಲ್ಲಾಡಳಿತ ಭವನ ನಿರ್ಮಿಸಬೇಕು. ವಿವಿಧ ಬಡಾವಣೆಗಳಲ್ಲಿರುವ ಹಾಗೂ ಬಾಡಿಗೆ ಕಟ್ಟಡದಲ್ಲಿರುವ ಕಚೇರಿಗಳನ್ನು, ಒಂದೇ ಸ್ಥಳದಲ್ಲಿ ತರಬೇಕೆಂಬ ಬೇಡಿಕೆಯಿತ್ತು.
  ಇದೀಗ ಸ್ವತಃ ಬಿ.ಎಸ್.ಯಡಿಯೂರಪ್ಪರವರೇ, ತಮ್ಮ ಅಧಿಕಾರಾವಧಿ ವೇಳೆ ತವರೂರು ಶಿವಮೊಗ್ಗ ನಗರದಲ್ಲಿ ಸುಸಜ್ಜಿತ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ವಿಶೇಷ ಆಸಕ್ತಿವಹಿಸಿದ್ದಾರೆ. ಜಿಲ್ಲಾಡಳಿತದಿಂದ ಪ್ರಸ್ತಾವನೆ ಕೂಡ ತರಿಸಿಕೊಂಡಿದ್ದಾರೆ.
  ಇದರಿಂದ ಕಾಲಮಿತಿಯಲ್ಲಿ ಕಟ್ಟಡ ನಿರ್ಮಾಣ ಆರಂಭವಾಗುವ ಸಾಧ್ಯತೆಗಳು ಗೋಚರವಾಗುತ್ತಿವೆ.

ತೆರವಾಗಲಿದೆ ಎಸ್‌ಪಿ ಕಚೇರಿ ಕಟ್ಟಡ?
ಜಿಲ್ಲಾ ರಕ್ಷಣಾಧಿಕಾರಿ ಕಚೇರಿ ಕಟ್ಟಡವನ್ನು ನೆಲಸಮಗೊಳಿಸಿ, ಹೊಸ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದೆ. ಕಚೇರಿ ಕಟ್ಟಡವು ಹಳೇಯದಾಗಿದೆ. ಆಗಾಗ್ಗೆ ದುರಸ್ತಿಯಾಗುತ್ತಿದೆ. ಈ ಕಾರಣದಿಂದ ಹೊಸ ಕಟ್ಟಡ ನಿರ್ಮಾಣ ಮಾಡಬೇಕೆಂಬ ಬೇಡಿಕೆಯಿತ್ತು. ಆದರೆ ರಾಜ್ಯ ಸರ್ಕಾರದ ಅನುಮತಿ ದೊರಕಿರಲಿಲ್ಲ. ಅನುದಾನವೂ ಬಿಡುಗಡೆಯಾಗಿರಲಿಲ್ಲ. ಜಿಲ್ಲಾಡಳಿತ ಭವನ ನಿರ್ಮಾಣದ ವೇಳೆ, ಹಳೇಯ ಕಟ್ಟಡ ತೆರವುಗೊಳಿಸಿ, ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ಹೇಳಲಾಗಿದೆ. ಆದರೆ ಇದು ಇನ್ನಷ್ಟೆ ಅದಿಕೃತವಾಗಬೇಕಾಗಿದೆ.