ಶಿವಮೊಗ್ಗದಲ್ಲಿ ಭಾರೀ ಮಳೆಗೆ ನೂರಾರು ಮನೆಗಳಿಗೆ ನುಗ್ಗಿದ ನೀರು!

ಶಿವಮೊಗ್ಗ, ಜು. 30: ಶಿವಮೊಗ್ಗ ನಗರದಲ್ಲಿ ಜಲ ಗಂಡಾಂತರಕ್ಕೆ ಸದ್ಯಕ್ಕೆ ಮುಕ್ತ ದೊರಕುವ ಲಕ್ಷಣಗಳು ಗೋಚರವಾಗುತ್ತಿಲ್ಲವಾಗಿದೆ. ಕಳೆದ ಬುಧವಾರ ರಾತ್ರಿ ಬಿದ್ದ ಭಾರೀ ಮಳೆಗೆ ನಗರದ ನೂರಾರು ಮನೆಗಳು ಜಲಾವೃತಕ್ಕೀಡಾಗಿದ್ದವು. ಇದೀಗ ಶನಿವಾರ ಮುಂಜಾನೆ ಬಿದ್ದ ವ್ಯಾಪಕ ವರ್ಷಧಾರೆಗೆ, ಮತ್ತೆ ನಗರದ ಹಲವು ಪ್ರದೇಶಗಳು ಜಲಾವೃತವಾಗಿದ್ದವು.
ಮುಂಜಾನೆ ಸವಿ ನಿದ್ರೆಯಲ್ಲಿದ್ದ ನಾಗರೀಕರು ತೀವ್ರ ತೊಂದರೆ ಪಡುವಂತಾಯಿತು. ಶ್ರೀರಾಮನಗರ, ಅಣ್ಣಾ ನಗರ, ಮಿಳಘಟ್ಟ, ಗೋಪಾಳಗೌಡ ಸೇರಿದಂತೆ ಹಲವು ಏರಿಯಾಗಳಲ್ಲಿ ಚರಂಡಿ – ರಾಜಕಾಲುವೆ ಅವ್ಯವಸ್ಥೆಯಿಂದ ನೂರಾರು ಮನೆಗಳು ಜಲಾವೃತವಾಗಿದ್ದವು.ಶ್ರೀರಾಮನಗರ ಬಡಾವಣೆಯಲ್ಲಿ ಯುಜಿಡಿ ನೀರು ಮನೆಗಳಿಗೆ ನುಗ್ಗಿತ್ತು. ಕೆಲವು ಮನೆಗಳಲ್ಲಿ ಸುಮಾರು ಎರಡರಿಂದ ಮೂರು ಅಡಿಯಷ್ಟು ನೀರು ನಿಂತಿತ್ತು. ಇದರಿಂದ ಮನೆಯಲ್ಲಿದ್ದ ಸರಕು-ಸರಂಜಾಮುಗಳು ನೀರು ಪಾಲಾಗುವಂತಾಗಿದೆ ಎಂದು ನಿವಾಸಿಗಳು ಅಳಲು ತೊಡಿಕೊಂಡಿದ್ದಾರೆ.
ನಿರ್ಲಕ್ಷ್ಯ: ಮಹಾನಗರ ಪಾಲಿಕೆ ಆಡಳಿತದ ನಿರ್ಲಕ್ಷ್ಯಕ್ಕೆ, ಸ್ಮಾರ್ಟ್ ಸಿಟಿ ಆಡಳಿತದ ಅವೈಜ್ಞಾನಿಕ ಕಾಮಗಾರಿಗೆ ನಾಗರೀಕರು ಹಿಡಿಶಾಪ ಹಾಕಿದರು. ಉಳಿದಂತೆ ಹಲವು ರಸ್ತೆಗಳ ಮೇಲೆಯೇ ಭಾರೀ ಪ್ರಮಾಣದ ಮಳೆ ನೀರು ಹರಿದು ಹೋಗುತ್ತಿತ್ತು.‘ಕಳೆದ ಮೂರ್ನಾಲ್ಕು ವರ್ಷಗಳಿಂದ ಜಲಾವೃತ ಸಮಸ್ಯೆ ಸೃಷ್ಟಿಯಾಗುತ್ತಿದೆ. ನಮ್ಮಗಳ ಅಹವಾಲು ಕೇಳುವವರೇ ಯಾರೂ ಇಲ್ಲವಾಗಿದ್ದಾರೆ. ಪಾಲಿಕೆ ಆಡಳಿತದ ನಿರ್ಲಕ್ಷ್ಯಕ್ಕೆ ನಾವುಗಳು ತೊಂದರೆ ಪಡುತ್ತಿದ್ದೆವೆ.ನೀರು ನುಗ್ಗಿದ ವೇಳೆ ನೀವು ಕೊಡುವ ಪರಿಹಾರ ನಮಗೆ ಬೇಡ. ನಾವುಗಳು ದುಡಿದು ತಿನ್ನುತ್ತೆವೆ. ಸರಾಗವಾಗಿ ಮಳೆ ನೀರು ಹರಿದು ಹೋಗುವ ವ್ಯವಸ್ಥೆ ಮಾಡಿ’ ಎಂದು ಅಣ್ಣಾ ನಗರದ ನಾಗರೀಕರು ಆಗ್ರಹಿಸಿದ್ದಾರೆ.ಮಳೆ ನೀರು ನುಗ್ಗಿ ಇಷ್ಟೆಲ್ಲ ಅವಾಂತರ ಸೃಷ್ಟಿಯಾಗಿದೆ. ಆದರೆ ಇಲ್ಲಿಯವರೆಗೂ ಸ್ಥಳೀಯ ಕಾರ್ಪೋರೇಟರ್ ಗಳು ಸ್ಥಳಕ್ಕಾಗಮಿಸಿ ನಮ್ಮಗಳ ಅಹವಾಲು ಆಲಿಸುತ್ತಿಲ್ಲ. ಇನ್ನಾದರೂ ಪಾಲಿಕೆ ಆಡಳಿತ ಸೂಕ್ತ ಪರಿಹಾರ ಕ್ರಮಕೈಗೊಳ್ಳಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ