ಶಿವಮೊಗ್ಗದಲ್ಲಿ ಬಿರುಗಾಳಿ ಮಳೆ : ಆಸ್ತಿಪಾಸ್ತಿಗೆ ಧಕ್ಕೆ-  ಸಿಡಿಲಿಗೆ ಮಹಿಳೆ ಬಲಿ!

ಶಿವಮೊಗ್ಗ, ಮೇ 30: ಶಿವಮೊಗ್ಗ ನಗರದಲ್ಲಿ ಸೋಮವಾರ ಸಂಜೆ ಬಿರುಗಾಳಿ, ಗುಡುಗು ಸಹಿತ ಭಾರೀ ವರ್ಷಧಾರೆಯಾಯಿತು. ಈ ವೇಳೆ ಸಿಡಿಲು ಬಡಿದು ಮಹಿಳೆಯೋರ್ವರು ಮೃತಪಟ್ಟಿದ್ಧಾರೆ. ಹಲವೆಡೆ ಮರಗಳು ಉರುಳಿ ಬಿದ್ದು, ಸಾರ್ವಜನಿಕ ಆಸ್ತಿಪಾಸ್ತಿಗೆ ಧಕ್ಕೆಯಾಗಿದೆ.ಬೊಮ್ಮನಕಟ್ಟೆ ಬಡಾವಣೆ ಆಶ್ರಯ ಕಾಲೋನಿಯಲ್ಲಿ ಲಕ್ಷ್ಮೀಬಾಯಿ (28) ಎಂಬ ವಿವಾಹಿತ ಮಹಿಳೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಕುರಿಗಳಿಗೆ ಮೇವು ತರಲು ಮನೆಯಿಂದ ಹೊರತೆರಳಿದ್ದ ವೇಳೆ ಈ ದುರಂತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಪೊಲೀಸರು, ಅಧಿಕಾರಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.ಹಾನಿ: ಹಲವೆಡೆ ಮರಗಳು ಬಿದ್ದು ನಾಗರೀಕರು ತೊಂದರೆ ಅನುಭವಿಸಿದ್ದಾರೆ. ಸುರಭಿ ಹೋಟೆಲ್ ಬಳಿ ತೆಂಗಿನ ಮರವೊಂದು ಬಿದ್ದ ಮರಿಣಾಮ ಎರಡು ಕಾರುಗಳು ಜಖಂಗೊಂಡಿವೆ. ಹೊಸಮನೆ ಬಡಾವಣೆಯಲ್ಲಿ ತೆಂಗಿನ ಮರ ಬಿದ್ದು ಮನೆಯೊಂದರ ಕಾಂಪೌಂಡ್ ಗೋಡೆ ಬಿದ್ದಿದೆ.ಸೋಮಿನಕೊಪ್ಪ ಬಡಾವಣೆಯಲ್ಲಿ ಬಿರುಗಾಳಿಗೆ ಮನೆಯೊಂದರ ಮೇಲ್ಛಾವಣಿ ಹಾರಿ ಹೋಗಿದೆ. ಕೆ.ಹೆಚ್.ಬಿ. ಪ್ರೆಸ್ ಕಾಲೋನಿಯಲ್ಲಿ ಲೇಔಟ್ ವೊಂದರ ಶೆಡ್ ಕುಸಿದು ಬಿದ್ದಿದೆ. ಜಾನುವಾರು ಕೊಟ್ಟಿಗೆ ಹಾಗೂ ಮನೆಯೊಂದರ ಮೇಲ್ಭಾಗದ ತಗಡಿನ ಹೊದಿಕೆಗಳು ಕಿತ್ತು ಹೋದ ಘಟನೆ ನಡೆದಿದೆ.ಹಾಗೆಯೇ ಬೊಮ್ಮನಕಟ್ಟೆ ಬಡಾವಣೆಯಲ್ಲಿ ಆರ್.ಸಿ.ಸಿ. ಮೇಲ್ಭಾಗದಲ್ಲಿ ಹಾಕಿದ್ದ ಶೀಟ್ ಸ್ಲ್ಯಾಬ್ ಹಾರಿ ಹೋಗಿದೆ. ತಾಲೂಕಿನ ಹುಣಸೋಡು ಗ್ರಾಮದಲ್ಲಿ ಬೃಹದಾಕಾರದ ಮರವೊಂದು ಮನೆಯ ಮೇಲೆಯೇ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರಿಗೆ ಯಾವುದೇ ತೊಂದರೆಯಾಗಿಲ್ಲ.ಶಾಸಕರ ಭೇಟಿ: ಮಳೆಯಿಂದ ಹಾನಿಗೀಡಾದ ಸ್ಥಳಗಳಿಗೆ ಶಾಸಕ ಚನ್ನಬಸಪ್ಪ ಅವರು ಸೋಮವಾರ ರಾತ್ರಿ ಭೇಟಿಯಿತ್ತು ಪರಿಶೀಲನೆ ನಡೆಸಿದರು. ಸಂತ್ರಸ್ತರ ಅಹವಾಲು ಆಲಿಸಿದರು.ಆಗ್ರಹ: ಶಿವಮೊಗ್ಗ ನಗರದಲ್ಲಿ ಸೋಮವಾರ ಸಂಜೆ ಬಿರುಗಾಳಿ ಸಹಿತ ಬಿದ್ದ ಮಳೆಗೆ ಹಲವೆಡೆ ಮರಗಳು, ರಂಬೆಕೊಂಬೆಗಳು ಬಿದ್ದು ಸಾರ್ವಜನಿಕ ಆಸ್ತಿಪಾಸ್ತಿಗೆ ಧಕ್ಕೆಯಾಗಿದೆ. ಈ ಕಾರಣದಿಂದ ಅಪಾಯಕಾರಿ ಸ್ಥಿತಿಯಲ್ಲಿರುವ, ಒಣಗಿರುವ ಮರಗಳು ಹಾಗೂ ರಂಬೆಕೊಂಬೆಗಳ ತೆರವಿಗೆ ಮಹಾನಗರ ಪಾಲಿಕೆ ಆಡಳಿತ ಕ್ರಮಕೈಗೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ಕೆ.ರಂಗನಾಥ್ ಅವರು ಆಗ್ರಹಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಗರೀಕರಿಗೆ ತೊಂದರೆಯಾಗುವುದಕ್ಕೂ ಮುನ್ನ ಆಡಳಿತ ಸೂಕ್ತ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.