ಶಿವಮೊಗ್ಗದಲ್ಲಿ ಧಾರಾಕಾರ ಮಳೆಗೆ ತಗ್ಗು ಪ್ರದೇಶಗಳು ಜಲಾವೃತ : ಭದ್ರಾ ಡ್ಯಾಂ ಭರ್ತಿಗೆ ೩ ಅಡಿ ಬಾಕಿ


ಶಿವಮೊಗ್ಗ, ಸೆ. ೪: ಶಿವಮೊಗ್ಗ ನಗರದಲ್ಲಿ ಎಡೆಬಿಡದೆ ಸುರಿದ ಧಾರಾಕಾರ ವರ್ಷಧಾರೆಗೆ ತಗ್ಗು ಪ್ರದೇಶಗಳು ಜಲಾವೃತವಾಗಿದ್ದವು.
ಗೋಪಾಳ, ಆರ್‌ಎಂಎಲ್ ನಗರ, ಮಿಳಘಟ್ಟ, ಸಾಗರ ರಸ್ತೆ ಸೇರಿದಂತೆ ಹಲವು ಏರಿಯಾಗಳಲ್ಲಿ ಚರಂಡಿ ಹಾಗೂ ರಾಜಕಾಲುವೆಗಳು ಉಕ್ಕಿ ಹರಿದವು. ಇದರಿಂದ ತಗ್ಗು ಪ್ರದೇಶದಲ್ಲಿನ ರಸ್ತೆ, ಮನೆ, ಅಂಗಡಿ-ಮುಂಗಟ್ಟುಗಳಿಗೆ ನೀರು ನುಗ್ಗಿತ್ತು.
ಗೋಪಾಳದ ಕೃಷ್ಣ ಮಠ ರಸ್ತೆಯಲ್ಲಿ ಸುಮಾರು ೨ ಅಡಿಗೂ ಹೆಚ್ಚು ನೀರು ರಸ್ತೆಯ ಮೇಲೆ ಹರಿಯುತ್ತಿತ್ತು. ಸಾಗರ ರಸ್ತೆಯ ಆಟೋ ಕಾಂಪ್ಲೆಕ್ಸ್ ಬಳಿಯಲ್ಲಿ ರಸ್ತೆಯ ಮೇಲೆಯೇ ನೀರು ಹರಿದ ಪರಿಣಾಮ, ಜನ-ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.
ವರ್ಷಧಾರೆ: ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕುಗೊಂಡಿದೆ. ಕಳೆದ ಮೂರು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಇದರಿಂದ ನದಿಗಳ ನೀರಿನ ಹರಿವಿನಲ್ಲಿ ಏರಿಕೆ ಕಂಡುಬಂದಿದೆ. ಶುಕ್ರವಾರ ಬೆಳಿಗ್ಗೆಯ ಮಾಹಿತಿಯಂತೆ, ಲಿಂಗನಮಕ್ಕಿ ಡ್ಯಾಂನ ನೀರಿನ ಮಟ್ಟ ೧೮೦೬.೮೫ (ಗರಿಷ್ಠ ಮಟ್ಟ : ೧೮೧೯) ಅಡಿಯಿದೆ.
೧೨,೨೮೬ ಕ್ಯೂಸೆಕ್ ಒಳಹರಿವಿದ್ದು, ಹೊರಹರಿವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಮಳೆ ನೀರನ್ನೇ ವಿದ್ಯುತ್ ಉತ್ಪಾದನೆಗೆ ಬಳಕೆ ಮಾಡಲಾಗುತ್ತಿದೆ. ಕಳೆದ ವರ್ಷ ಈ ವೇಳೆಗಾಗಲೇ ಜಲಾಶಯ ಗರಿಷ್ಠ ಮಟ್ಟ ತಲುಪಿತ್ತು. ಡ್ಯಾಂನಿಂದ ನೀರು ಹೊರ ಬಿಡಲಾಗುತ್ತಿತ್ತು.
ಭದ್ರಾ ಡ್ಯಾಂನ ನೀರಿನ ಮಟ್ಟ ೧೮೩.೩ (ಗರಿಷ್ಠ ಮಟ್ಟ : ೧೮೬) ಅಡಿಯಿದೆ. ೮೫೦೨ ಕ್ಯೂಸೆಕ್ ಒಳಹರಿವಿದ್ದು, ೨೫೮೮ ಕ್ಯೂಸೆಕ್ ಹೊರಹರಿವಿದೆ. ಉಳಿದಂತೆ ತುಂಗಾ ಡ್ಯಾಂನ ಒಳಹರಿವು ೧೨,೮೮೨ ಕ್ಯೂಸೆಕ್ ಇದ್ದು, ಅಷ್ಟೇ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ.

ಶಿವಮೊಗ್ಗದಲ್ಲಿ ೩೪.೪೦ ಮಿಮೀ ಮಳೆ
*** ಶುಕ್ರವಾರ ಬೆಳಿಗ್ಗೆ ೮ ಗಂಟೆಗೆ ಕೊನೆಗೊಂಡಂತೆ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ೭ ತಾಲೂಕು ಕೇಂದ್ರಗಳಲ್ಲಿ ಬಿದ್ದ ಒಟ್ಟಾರೆ ಸರಾಸರಿ ಮಳೆಯ ಪ್ರಮಾಣ ೨೦.೫೭ ಮಿಲಿ ಮೀಟರ್ (ಮಿ.ಮೀ.) ಆಗಿದೆ. ಶಿವಮೊಗ್ಗದಲ್ಲಿ ೩೪.೪೦ ಮಿ.ಮೀ., ಭದ್ರಾವತಿ ೨೧.೬೦ ಮಿ.ಮೀ., ತೀರ್ಥಹಳ್ಳಿ ೧೨.೮೦ ಮಿ.ಮೀ., ಸಾಗರ ೨೨.೦೨ ಮಿ.ಮೀ., ಶಿಕಾರಿಪುರ ೭ ಮಿ.ಮೀ., ಸೊರಬ ೭ ಮಿ.ಮೀ. ಹಾಗೂ ಹೊಸನಗರದಲ್ಲಿಲ ೩೯.೨೦ ಮಿ.ಮೀ. ವರ್ಷಧಾರೆಯಾಗಿದೆ.