ಶಿವಮೊಗ್ಗದಲ್ಲಿ ಗುಡುಗು ಸಹಿತ ವರ್ಷಧಾರೆ

ಶಿವಮೊಗ್ಗ, ಮೇ ೨: ಶಿವಮೊಗ್ಗ ಜಿಲ್ಲೆಯ ಹಲವೆಡೆ ಕೆಲ ದಿನಗಳಿಂದ ಬೀಳುತ್ತಿರುವ ಮುಂಗಾರು ಪೂರ್ವ ವರ್ಷಧಾರೆ ಮುಂದುವರಿದಿದೆ. ಕೆಲ ತಾಲೂಕುಗಳಲ್ಲಿ ಚದುರಿದಂತೆ ಗುಡುಗು, ಬಿರುಗಾಳಿ ಸಹಿತ ಮಳೆಯಾಗಿದೆ. ಶಿವಮೊಗ್ಗ ನಗರ ಸೇರಿದಂತೆ ತಾಲೂಕಿನ ಕೆಲವೆಡೆ ಸಂಜೆ ಹಾಗೂ ರಾತ್ರಿ ಉತ್ತಮ ಮಳೆಯಾಯಿತು. ಕೆಲ ಗ್ರಾಮಗಳಲ್ಲಿ ಗಾಳಿಯ ಪ್ರಮಾಣ ಹೆಚ್ಚಿತ್ತು. ಇನ್ನೂ ಒಂದೆರೆಡು
ದಿನಗಳ ಕಾಲ ಅಕಾಲಿಕ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆ ಮೂಲಗಳು ಮಾಹಿತಿ ನೀಡಿವೆ.
ನಿಟ್ಟುಸಿರು: ಇತ್ತೀಚೆಗೆ ಬೀಳುತ್ತಿರುವ ಅಕಾಲಿಕ ಮಳೆಯು, ಜಿಲ್ಲೆಯ ನಾಗರೀಕರಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಪ್ರಸ್ತುತ ಬಿಸಿಲಿನ ಬೇಗೆ ಹೆಚ್ಚಿದೆ. ಶಿವಮೊಗ್ಗ ನಗರ ಸೇರಿದಂತೆ ಕೆಲ ತಾಲೂಕುಗಳಲ್ಲಿ, ಕನಿಷ್ಠ ತಾಪಮಾನ ೩೫ ಡಿಗ್ರಿಗೂ ಹೆಚ್ಚು ದಾಖಲಾಗುತ್ತಿದೆ.
ಉಷ್ಣಾಂಶದಿಂದ ನಾಗರೀಕರು ಎದುಸಿರು ಬಿಡುವಂತಾಗಿದೆ. ಭೂಮಿಯು ಕಾದ ಕಾವಲಿಯಂತಾಗುತ್ತಿದೆ. ಆದರೆ ಅಕಾಲಿಕ ಮಳೆಯಿಂದ ತಣ್ಣನೆ ವಾತಾವರಣ ನೆಲೆಸುವುದರ ಜೊತೆಗೆ, ಧಗೆಯ ಪ್ರಮಾಣ ಕಡಿಮೆಯಾಗಿಸಿದೆ. ಹಾಗೆಯೇ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ತಗ್ಗುವಂತೆ ಮಾಡಿದೆ.
ಏಪ್ರಿಲ್ ತಿಂಗಳಲ್ಲಿ ಆಗಾಗ್ಗೆ ಬೀಳುತ್ತಿರುವ ವರ್ಷಧಾರೆಯಿಂದ, ಒಣಗಿ ಹೋಗಿದ್ದ ಹಸಿರು ಮತ್ತೆ ಚಿಗುರಲಾರಂಭಿಸಿದೆ. ಇದರಿಂದ ಜಾನುವಾರುಗಳಿಗೆ ಕೊಂಚ ಮೇವಿನ ಕೊರತೆ ನೀಗುವಂತಾಗಿದೆ. ಹಾಗೆಯೇ ಬೇಸಿಗೆ ವೇಳೆ ಕೈಗೊಂಡಿರುವ ಕೃಷಿ ಚಟುವಟಿಕೆಗೆ ಮಳೆ ಪೂರಕವಾಗಿದೆ ಎಂದು ರೈತರು ಅಭಿಪ್ರಾಯಪಡುತ್ತಾರೆ.