ಶಿವಮೊಗ್ಗದಲ್ಲಿ ಉಪ ಸಭಾಪತಿ ಮರಣೋತ್ತರ ಪರೀಕ್ಷೆ

ಶಿವಮೊಗ್ಗ, ಡಿ. 29: ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಗುಣಸಾಗರದ ಬಳಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಉಪಸಭಾಪತಿ ಎಸ್.ಎಲ್. ಧರ್ಮೇಗೌಡರ ಮೃತದೇಹದ ಮರಣತ್ತೋರ ಪರೀಕ್ಷೆಯನ್ನು ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆಸಲಾಯಿತು.ತಡರಾತ್ರಿಯೇ ಕಡೂರಿನಿಂದ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಸರ್ಕಾರಿ ಆಂಬ್ಯುಲೆನ್ಸ್ ನಲ್ಲಿ ಮೃತದೇಹ ತರಲಾಯಿತು. ‌ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾರಕ್ಷಾಧಿಕಾರಿ ಕೆ.ಎಂ.ಶಾಂತರಾಜುರವರು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಮೆಗ್ಗಾನ್ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿದ್ದ, ಬಂದೋಬಸ್ತ್ ಮೇಲುಸ್ತುವಾರಿ ನೋಡಿಕೊಂಡರು. ಧರ್ಮೇಗೌಡರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಜೆಡಿಎಸ್ ಸೇರಿದಂತೆ ವಿವಿಧ ಪಕ್ಷ, ಸಂಘಸಂಸ್ಥೆಗಳ ಮುಖಂಡರು ಆಸ್ಪತ್ರೆಯ ಮರಣೋತ್ತರ ವಿಭಾಗದ ಬಳಿ ದೌಡಾಯಿಸಿದ್ದರು.ಸಂತಾಪ: ಧರ್ಮೇಗೌಡರ ನಿಧನಕ್ಕೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್ ಸೇರಿದಂತೆ ಮೊದಲಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.
ರದ್ದು:  ಶಿವಮೊಗ್ಗ ನಗರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಗಳ ಪರಿಶೀಲನೆಗೆ ಆಗಮಿಸಿದ್ದ ಸಚಿವ ಭೈರತಿ ಬಸವರಾಜ್ ರವರು ತಮ್ಮೆಲ್ಲ ಪೂರ್ವ ನಿಗದಿತ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ.