ಶಿವಮೊಗ್ಗದಲ್ಲಿದ್ದರೂ ಸಿಎಂ ಪಾಲ್ಗೊಂಡಿದ್ದ ಸಮಾರಂಭಗಳಿಗೆ ಭಾಗಿಯಾಗದ ಜಿಲ್ಲಾ ಉಸ್ತುವಾರಿ ಸಚಿವ!


ಶಿವಮೊಗ್ಗ, ಅ. ೨೭: ನಗರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾಗವಹಿಸಿದ್ದ ವಿವಿಧ ಕಾರ್ಯಕ್ರಮಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಗೈರು ಹಾಜರಾಗಿದ್ದು, ರಾಜಕೀಯ ವಲಯದಲ್ಲಿ ನಾನಾ ರೀತಿಯ ಚರ್ಚೆಗೆ ಗ್ರಾಸವಾಗಿದೆ. ಮುಖ್ಯಮಂತ್ರಿಗಳು ಗೋಪಿಶೆಟ್ಟಿಕೊಪ್ಪದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕಟ್ಟಡ, ಸರ್ಕಾರಿ ನೌಕರರ ಸಂಘದ ಸಭಾಂಗಣ ಉದ್ಘಾಟನೆ, ಪ್ರೆಸ್ ಟ್ರಸ್ಟ್ ಕಟ್ಟಡದ ಶಿಲಾನ್ಯಾಸ ಸಮಾರಂಭ ಹಾಗೂ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರ ಅಹವಾಲು ಸಭೆಯಲ್ಲಿ ಭಾಗವಹಿಸಿದ್ದರು. ಮಾಜಿ ಸಿಎಂ ದಿವಂಗತ ಎಸ್.ಬಂಗಾರಪ್ಪ ಜನ್ಮ ದಿನಾಚರಣೆ ಅಂಗವಾಗಿ, ನಗರದ ಪ್ರವಾಸಿ ಮಂದಿರದಲ್ಲಿ ವರ್ಚುವಲ್ ವೀಡಿಯೋ ಮೂಲಕ ಸೊರಬ ಪಟ್ಟಣದ ಉದ್ಯಾನವನ ಲೋಕಾರ್ಪಣೆ, ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಬಿ.ಎಸ್.ಯಡಿಯೂರಪ್ಪ ಭಾಗವಹಿಸಿದ್ದರು. ನಂತರ ಹೆಲಿಕ್ಯಾಪ್ಟರ್ ಮೂಲಕ ಮೈಸೂರಿಗೆ ನಿರ್ಗಮಿಸಿದ್ದರು. ಆದರೆ ಈ ಎಲ್ಲ ಕಾರ್ಯಕ್ರಮಗಳಿಂದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ದೂರ ಉಳಿದಿದ್ದರು. ಶಿವಮೊಗ್ಗದ ಮನೆಯಲ್ಲಿಯೇ ಇದ್ದರೂ ಯಾವುದೇ ಸಮಾರಂಭಗಳಲ್ಲಿಯೂ ಭಾಗವಹಿಸಲಿಲ್ಲ. ಆದರೆ ಸಂಜೆ ಕುಟುಂಬ ಸದಸ್ಯರ ಜೊತೆಗೆ ನಗರದ ಕೋಟೆ ಆಂಜನೇಯ ಸ್ವಾಮಿ ದೇವಾಲಯಕ್ಕೆ ಭೇಟಿಯಿತ್ತು ಪೂಜೆ ಸಲ್ಲಿಸಿದರು. ಕೆಎಸ್‌ಇ ರವರ ಈ ನಡೆಯು ಸ್ಥಳೀಯ ಬಿಜೆಪಿ ಪಾಳೇಯದಲ್ಲಿ ಹಲವು ರೀತಿಯ ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು.
ಅಸಮಾಧಾನ?: ಶಿವಮೊಗ್ಗ ಜಿಲ್ಲೆಯ ಕೆಲ ವಿಷಯಗಳಿಗೆ ಸಂಬಂಧಿಸಿದಂತೆ ಕೆಎಸ್‌ಇ ಮುನಿಸಿಕೊಂಡಿದ್ದಾರೆ. ಈ ಕಾರಣದಿಂದ ಅವರು ಸಿಎಂ ಭಾಗವಹಿಸಿದ್ದ ಕಾರ್ಯಕ್ರಮಗಳಿಂದ ಉದ್ದೇಶಪೂರ್ವಕವಾಗಿಯೇ ದೂರ ಉಳಿದಿದ್ದಾರೆ. ಈ ಮೂಲಕ ತಮ್ಮ ಅಸಮಾಧಾನ ತೋರ್ಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಕಳೆದ ಹಲವು ವರ್ಷಗಳಿಂದ ಜಿಲ್ಲಾ ಬಿಜೆಪಿಯಲ್ಲಿ ಬಿಎಸ್‌ವೈ ಹಾಗೂ ಕೆಎಸ್‌ಇ ಬಣಗಳಿರುವುದು ಸುಳ್ಳಲ್ಲ. ಪ್ರಸ್ತುತ ಬಿ.ಎಸ್.ಯಡಿಯೂರಪ್ಪ ಮತ್ತು ಬಿ.ವೈ.ರಾಘವೇಂದ್ರ ಬೆಂಬಲಿಗರು, ಸರ್ಕಾರ ಹಾಗೂ ಪಕ್ಷದ ಆಯಕಟ್ಟಿನ ಸ್ಥಾನಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಜೊತೆಗೆ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದತ್ತ ಬಿ.ವೈ.ರಾಘವೇಂದ್ರ ಸಾಕಷ್ಟು ಚಿತ್ತ ಹರಿಸಿದ್ದಾರೆ. ಕೇಂದ್ರ-ರಾಜ್ಯ ಸರ್ಕಾರಗಳಿಂದ ಹಲವು ಯೋಜನೆ, ನೂರಾರು ಕೋಟಿ ರೂ. ಅನುದಾನ ಮಂಜೂರು ಮಾಡಿಸಿಕೊಂಡು ಬರುತ್ತಿದ್ದಾರೆ. ಅಭಿವೃದ್ದಿ ವಿಚಾರಗಳ ಕುರಿತಂತೆ ಮಹತ್ವದ ನಿರ್ಣಯ ಕೈಗೊಳ್ಳುತ್ತಿದ್ದಾರೆ. ಅವರ ಹಿಡಿತ ಹೆಚ್ಚಾಗುತ್ತಿದೆ. ಇದು ಸಹಜವಾಗಿಯೇ ಕೆಎಸ್‌ಇ ಬಣದ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಎಲ್ಲ ಕಾರಣಗಳಿಂದ ಕೆಎಸ್‌ಇರವರು ಶಿವಮೊಗ್ಗ ನಗರದಲ್ಲಿ ಸಿಎಂ ಭಾಗವಹಿಸಿದ್ದ ಸಭೆಗಳಿಂದ ದೂರ ಉಳಿದಿದ್ದಾರೆ ಎಂದು ಮಾತನಾಡಿಕೊಳ್ಳಲಾಗುತ್ತಿದೆ. ಒಂದು ವೇಳೆ ಇದು ನಿಜವಾಗಿದ್ದರೇ, ಈ ಇಬ್ಬರು ನಾಯಕರ ನಡುವೆ ಮತ್ತೊಂದು ಸುತ್ತಿನ ಹೈಡ್ರಾಮಾಕ್ಕೆ ವೇದಿಕೆ ಸಿದ್ದವಾಗುವುದು ಖಚಿತವಾಗಿದೆ.
ಪೋಟೋ-೧೩,೧೪