ಶಿವಮೂರ್ತಿ ನಿಧನಕ್ಕೆ ಸಂತಾಪ


ಬ್ಯಾಡಗಿ,ಎ.26: ತುಮಕೂರು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಕಾರ್ಯದರ್ಶಿ ಸಿ.ಶಿವಮೂರ್ತಿ ಅವರ ನಿಧನಕ್ಕೆ ಹಾವೇರಿ ಜಿಲ್ಲಾ ಅಮೇಚೂರ್ ಕಬಡ್ಡಿ ಅಸೋಸಿಯೇಶನ್ ಪದಾಧಿಕಾರಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
ಭಾನುವಾರ ನಡೆದ ಸಂತಾಪ ಸೂಚಕ ಸಭೆಯಲ್ಲಿ ಮೃತರ ನಿಧನಕ್ಕೆ ಎರಡು ನಿಮಿಷ ಮೌನಾಚರಣೆಯನ್ನು ನಡೆಸಿ ಗೌರವವನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಮಂಜಣ್ಣ ಎಲಿ, ಕಬಡ್ಡಿ ಕ್ರೀಡೆಯನ್ನೇ ತಮ್ಮ ಉಸಿರಾಗಿಸಿಕೊಂಡಿದ್ದ ಶಿವಮೂರ್ತಿ ಅವರು ಕಳೆದ ನಾಲ್ಕು ದಶಕದಿಂದ ತುಮಕೂರು ಜಿಲ್ಲೆಯಲ್ಲಿ ಕಬಡ್ಡಿ ಕ್ರೀಡೆಯ ಅಭ್ಯುದಯಕ್ಕೆ ಅವಿರತವಾಗಿ ಶ್ರಮಿಸಿದ್ದರು, ಆದರೆ ಶಿವಮೂರ್ತಿಯವರ ಅಕಾಲಿಕ ನಿಧನದಿಂದ ಜಿಲ್ಲೆಯ ಕ್ರೀಡಾಪಟುಗಳಿಗೆ ತುಂಬಲಾರದ ನಷ್ಟವಾಗಿದೆ ಎಂದರು.
ಖಜಾಂಚಿ ಗಂಣ್ಣ ಎಲಿ ಮಾತನಾಡಿ, ರಾಜ್ಯ ಕಬಡ್ಡಿ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದ ಶಿವಮೂರ್ತಿ, ನೇರ ನಿಷ್ಠುರ ಮಾತುಗಾರರಾಗಿದ್ದು, ಆಡಳಿತ ಮಂಡಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡುವ ಮೂಲಕ ರಾಜ್ಯದಲ್ಲಿ ಕಬಡ್ಡಿ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾಗಿ ಸ್ಮರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ತೀರ್ಪುಗಾರರ ಮಂಡಳಿ ಛೇರಮನ್ ಸಿ.ಜಿ.ಚಕ್ರಸಾಲಿ, ಅಸೋಸಿಯೇಶನ್ ಕಾರ್ಯದರ್ಶಿ ಶಿವಾನಂದ ಮಲ್ಲನಗೌಡರ, ಪದಾಧಿಕಾರಿಗಳಾದ ಮಲ್ಲಿಕಾರ್ಜುನ ಬಳ್ಳಾರಿ, ನಂದೀಶ ದಳವಾಯಿ, ಮಾರುತಿ ಜನ್ನು, ಎಂ.ಆರ್.ಕೋಡಿಹಳ್ಳಿ, ಎ.ಟಿ.ಪೀಠದ, ಕಿರಣಕುಮಾರ ಕಂಬಳಿ, ಶಿವಯೋಗಿ ಎಲಿ, ಮಲ್ಲಿಕಾರ್ಜುನ ಅಂಗಡಿ, ಪಾರ್ವತಿ ಕುರುವತ್ತೇರ, ವಿಜಯ ಮಾಳಗಿ, ಕೋಚ್ ಮಂಜುಳಾ ಭಜಂತ್ರಿ, ತೀರ್ಪುಗಾರರಾದ ಮಾರುತಿ ಚೌಹಾಣ, ಜಿನ್ನಾ ಹಲಗೇರಿ, ಎ.ಬಿ.ಕಲ್ಮನಿ, ಎಂ.ಕೆ.ಹೊಸಮನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.