ಶಿವಭಕ್ತಿ, ಮಿತ ಆಹಾರ ಶಿವಕುಮಾರ ಶ್ರೀಗಳ ಆರೋಗ್ಯದ ಗುಟ್ಟು

ತುಮಕೂರು: ಪರಮಪೂಜ್ಯ ಡಾ. ಶ್ರೀ ಶಿವಕುಮಾರ ಶ್ರೀಗಳು ಮನುಕುಲದ ಸುಧಾರಕರು, ತಮ್ಮ ತ್ರಿವಿಧ ದಾಸೋಹದಿಂದ ಸಮಾಜದಲ್ಲಿ ಶಿಕ್ಷಣ ಯಜ್ಞವನ್ನು ಬೆಳಗಿ ಸಮಾಜಕ್ಕೆ ಅತ್ಯುತ್ತಮ ವಿದ್ಯಾರ್ಥಿಗಳನ್ನು ಕೊಟ್ಟವರು. ಆ ಮೂಲಕ ಶಿಕ್ಷಣವೇ ಉತ್ತಮ ಸಮಾಜದ ಕೀಲಿಕೈ ಎಂಬುದು ಅವರ ನಂಬಿಕೆಯಾಗಿತ್ತು. ಸದೃಢ ಕಾಯದೊಂದಿಗೆ ಸಮಾಜದ ಒಳಿತಿಗೆ ಕಾಯಕ ಮಾಡಬೇಕು ಎಂದು ಸದಾ ಹೇಳುತ್ತಿದ್ದರು. ಅವರ ನಿಷ್ಠೆಯುಳ್ಳ ಜೀವನ, ಶಿವಭಕ್ತಿ, ಮಿತ ಆಹಾರ ಶ್ರೀಗಳ ಆರೋಗ್ಯದ ಪ್ರಮುಖ ಗುಟ್ಟಾಗಿತ್ತು. ಅವರು ಇದ್ದಷ್ಟು ಕಾಲವೂ ಅಹಾರದಲ್ಲಿ ಪತ್ಯ ಅನುಸರಿಸುತ್ತಿದ್ದರು.
ಶರೀರಕ್ಕೆ ಎಷ್ಟು ಆಹಾರ ಬೇಕು ಅದನ್ನ ಮಾತ್ರ ಸ್ವೀಕರಿಸುತ್ತಿದ್ದರು. ಶರೀರವನ್ನು ಕಾಪಾಡಿಕೊಳ್ಳುವುದಕ್ಕೆ ಮಾತ್ರ ಅಹಾರ ಸ್ವೀಕರಿಸಬೇಕು ಎನ್ನುವುದು ಶ್ರೀಗಳ ಗುರಿಯಾಗಿತ್ತು. ಶ್ರೀಗಳಿಗೆ ದಕ್ಷಿಣ ಭಾರತದ ಅಹಾರವೆಂದರೆ ಬಹಳಷ್ಟು ಪ್ರಿಯವಾಗಿತ್ತು.

ಕಾಲ ಕಾಲಕ್ಕೆ ದೊರೆಯುವ ಹಣ್ಣುಗಳನ್ನು ಸ್ವೀಕರಿಸುವುದು ಬಹಳ ಪ್ರಿಯ. ಮಠಕ್ಕೆ ಬರುವ ಭಕ್ತರು ಯಥೇಚ್ಛವಾಗಿ ಕಾಳುಗಳನ್ನು ನೀಡುತ್ತಿದ್ದರು. ಅದರಲ್ಲೇ ಕಾಳುಗಳ ಸಲಾಡ್‌ನ್ನು ಶ್ರೀಗಳು ಬಹಳಷ್ಟು ಇಷ್ಟವಾಗಿ ಸ್ವೀಕರಿಸುತ್ತಿದ್ದರು. ಶ್ರೀಗಳು ಸದಾ ಕಾಳಿನ ಸಾರೆಂದರೆ ಬಹಳಷ್ಟು ಪ್ರಿಯ. ಆ ಸಾರು ಇದ್ದರೆ ಮೂರು ಹೊತ್ತು ಅದನ್ನು ನೀಡಿದರೂ ಸ್ವೀಕರಿಸುತ್ತಿದ್ದರು. ಅವರಿಗೆ ಬೇಯಿಸಿದ ಕಡಲೆಬೀಜ ಹಲಸಿನ ತೊಳೆ, ಮಾವಿನ ಹಣ್ಣು ಶ್ರೀಗಳ ಪ್ರಿಯವಾದ ಹಣ್ಣುಗಳಾಗಿತ್ತು. ಶ್ರೀಗಳು ಯಾವತ್ತೂ ಸೇಬು ದ್ರಾಕ್ಷಿ ಕಿತ್ತಲೆ ನಂತರ ಹಣ್ಣುಗಳಿಗಿಂತ ರೈತರ ತೋಟದಲ್ಲಿ ಸಿಗುತ್ತಿದ್ದ ಹಲಸು ಮಾವು ಹೆಚ್ಚಾಗಿ ಸ್ವೀಕರಿಸುತ್ತಿದ್ದರು.
ಅವರೆಕಾಳಿನ ಕಾಲ ಬಂತು ಎಂದರೆ ಶ್ರೀಗಳ ಅಡುಗೆ ಮನೆಯಿಂದ ಸದಾ ಅವರೆ ಕಾಳಿನ ಸಾಂಬಾರಿನ ವಾಸನೆ ಸದಾ ಬರುತ್ತಿತ್ತು. ಅವರೆಕಾಯಿಯ ಕಾಲ ಮುಗಿಯುವವರೆಗೂ ಶ್ರೀಗಳು ಅದನ್ನು ಬಿಟ್ಟರೆ ಬೇರೆ ಯಾವ ಸಾರಿನ ಬಗ್ಗೆಯೂ ಹೆಚ್ಚಿನ ಅಪೇಕ್ಷೆ ಹೊಂದಿದವರಲ್ಲ. ಅವರೆ ಕಾಯಿಯ ಕಾಲ ಮುಗಿದರೆ ಶೇಖರಿಸಿಟ್ಟ ಉರುಳಿಕಾಳಿನ ಸಾಂಬರ್ ಬಯಸುತ್ತಿದ್ದರು. ಇದಷ್ಟೇ ಅಲ್ಲದೆ ಶ್ರೀಗಳಿಗೆ ಆಯಾ ಹಬ್ಬಗಳಿಗೆ ಮಾಡುತ್ತಿದ್ದ ವಿಶೇಷ ಖಾದ್ಯಗಳ ಬಗ್ಗೆ ಆಸಕ್ತಿ ಇರುತ್ತಿತ್ತು. ಜತೆಗೆ ಸಿಹಿ ಖಾದ್ಯಗಳನ್ನು ಏನೇ ಮಾಡಲಿ ಅದನ್ನ ಸಿದ್ಧಗಂಗಾ ಮಠದ ಎಲ್ಲಾ ಮಕ್ಕಳಿಗೂ ಮಾಡಲೇಬೇಕಿತ್ತು.
ಯುಗಾದಿ ಸಮಯದಲ್ಲಿ ಒಬ್ಬಟ್ಟು ತಯಾರಿಸಿದರೆ ಅದನ್ನೇ ಮಠದ ಎಲ್ಲಾ ಮಕ್ಕಳಿಗೂ ಮಾಡಬೇಕಿತ್ತು. ಅದಕ್ಕೆಂತಲೇ ಬೇರೆ ಊರುಗಳಿಂದ ಅಡುಗೆಯವರನ್ನು ಕರೆಸುತ್ತಿದ್ದರು. ಲಡ್ಡು ಮಾಡಿದರೂ, ಮೈಸೂರು ಪಾಕ್ ಮಾಡಿದರೂ ಅದು ಮಕ್ಕಳಿಗೆ ಕೊಟ್ಟಿದ್ದಾರೆ ಎಂದು ಖುದ್ದಾಗಿ ಮಕ್ಕಳ ಪಂಕ್ತಿಯಲ್ಲಿ ಗಮನಿಸುತ್ತಿದ್ದರು. ಮಕ್ಕಳ ಪ್ರಸಾದವಾಗಿದೆ ಎಂದು ಅವರ ಶಿಷ್ಯಂದಿರು ಹೇಳಿಯೇ ಊಟಕ್ಕೆ ಶ್ರೀಗಳನ್ನು ಅಣಿ ಮಾಡುತ್ತಿದ್ದರು. ಶ್ರೀಗಳಿಗೆ ಶಾವಿಗೆ ಮತ್ತು ರೆವೆಯ ಉಂಡೆ ಎಂದರೆ ಎಲ್ಲಾ ಸಿಹಿ ಪದಾರ್ಥಗಳಿಂಗಿಂತ ಅಚ್ಚುಮೆಚ್ಚು. ಮಕ್ಕಳ ಯೋಗಕ್ಷೇಮ ಹೊರತುಪಡಿಸಿ ಇನ್ಯಾವ ಆಸೆಯನ್ನೂ ಹೊಂದಿರದ ಶ್ರೀಗಳಿಗೆ ಇಂದು ಮಠದಲ್ಲಿ ಶಾವಿಗೆ ರೆವೆ ಉಂಡೆ ಮಾಡಿದ್ದಾರೆ ಎಂದರೆ ಮಕ್ಕಳಿಗೆ ಸಂಬಂಧಿಸಿದ ವಿಶೇಷವೇನೋ ನಡೆದಿದೆ ಎಂತಲೇ ನಾವು ಅಂದುಕೊಳ್ಳುತ್ತಿದ್ದೆವು.


ಸೆಪ್ಪೆ ಸೆಪ್ಪೆ ಊಟ ಶ್ರೀಗಳ ಅಡುಗೆಯಲ್ಲಿರಬೇಕಿದ್ದ ರುಚಿ. ಯಾವುದೂ ಕೂಡ ಹೆಚ್ಚಿರಬಾರದಿತ್ತು. ಮಸಾಲೆ ಪದಾರ್ಥಗಳು, ಕರಿದ ಪದಾರ್ಥಗಳಿಂದ ಶ್ರೀಗಳು ದೂರವಿರುತ್ತಿದ್ದರು. ಶ್ರೀಗಳ ಆಹಾರ ಕ್ರಮವೂ ಕೂಡ ಅಷ್ಟೇ ಕಟ್ಟುನಿಟ್ಟಾಗಿತ್ತು. ಬೆಳಿಗ್ಗೆ ಶ್ರೀಗಳು ಶಿವಪೂಜೆ ಮುಗಿಸಿದಾಗ ಶಿವಮಂದಿರದಲ್ಲಿಯೇ ಆಹಾರ ಸ್ವೀಕರಿಸುತ್ತಿದ್ದರು. ಇಡ್ಲಿ, ಕಾಯಿಚಟ್ನಿ, ಸಿಹಿ ಚಟ್ನಿ ಜತೆಗೆ ದಾಲ್ ಅನ್ನ ಮಾತ್ರ ಬೆಳಗಿನ ಉಪಹಾರವಿರುತ್ತಿತ್ತು. ಅದನ್ನ ತಿಂದು ಬೇವಿನ ಕಷಾಯ ಕುಡಿದರೆಂದರೆ ಇನ್ನು ಮಧ್ಯಾಹ್ನ ಶಿವಪೂಜೆಯ ನಂತರವಷ್ಟೇ ಶ್ರೀಗಳು ಆಹಾರ ಸ್ವೀಕರಿಸುತ್ತಿದ್ದರು.
ಶ್ರೀಗಳ ಬೆಳಗಿನ ಆಹಾರಗಳಲ್ಲಿ ಬಹಳ ಮುಖ್ಯವಾದದ್ದು ಎಂದರೆ ಅದು ಬೇವಿನ ಚೆಕ್ಕೆಯಲ್ಲಿ ಮಾಡುತ್ತಿದ್ದ ಕಷಾಯ. ಮಠದ ಆವರಣದಲ್ಲಿಯೇ ಬೆಳೆದಿದ್ದ ಬೇವಿನ ಮರದ ತೊಗಟೆಯನ್ನು ತಂದು ಅದನ್ನ ಹಾಲಿನಲ್ಲಿ ಬೇಯಿಸಿ ಸ್ವಲ್ಪ ಬೆಲ್ಲವನ್ನು ಹಾಕಿ ತಯಾರು ಮಾಡಲಾಗುತ್ತಿತ್ತು. ಕಹಿ ಪದಾರ್ಥಗಳು ಶ್ರೀಗಳ ಇಮ್ಯುನಿಟಿ ಪವರ್ ಹೆಚ್ಚಾಗಲೂ ಸಹಕರಿಸುತ್ತದೆ. ಅಷ್ಟೊಂದು ಕಹಿಯಾಗಿದ್ದ ಕಷಾಯ ಸ್ವೀಕರಿಸುತ್ತಿದ್ದ ನಾಲಿಗೆಗೆ ಕಹಿಯಾಗಿದ್ದು ಹೊಟ್ಟೆಗೆ ಸಿಹಿ ಕಣೋ ಎಂದು ಹೇಳುತ್ತಿದ್ದರು. ದಿನದ ಮೂರು ಅವಧಿಯಲ್ಲೂ ಶ್ರೀಗಳ ಆಹಾರದಲ್ಲಿ ಒಂದೇ ತೆರೆನಾದ ತೂಕವಿರುತ್ತಿತ್ತು. ಹೆಚ್ಚು ಹಸಿವಾದರೆ ಹೆಚ್ಚು ಆಹಾರ ಎನ್ನುವುದೇ ಇರಲಿಲ್ಲ. ಒಂದು ಗ್ರಾಂ ಆಹಾರ ಹೆಚ್ಚಾದರೂ ಕೂಡ ಆ ಬಗ್ಗೆ ತಮ್ಮ ಶಿಷ್ಯರಿಗೆ ಹೇಳುತ್ತಿದ್ದರು. ಅನೇಕ ಬಾರಿ ಹೆಚ್ಚಾದ ಆಹಾರವನ್ನು ಹಾಗೆಯೇ ಬಿಟ್ಟು ಗೋವುಗಳಿಗೆ ನೀಡಿ ಎನ್ನುತ್ತಿದ್ದರು.
ಇನ್ನೊಂದು ಪ್ರಮುಖ ವಿಚಾರ ಅಂದರೆ ಶ್ರೀಗಳು ಎಲ್ಲಿಯೇ ಹೋದರೂ ಅಲ್ಲಿ ಪ್ರಸಾದ ಸ್ವೀಕರಿಸುತ್ತಿರಲಿಲ್ಲ. ಏಕೆಂದರೆ ಶಿವನಿಗೆ ಪ್ರಸಾದ ಆ ನಂತರ ನನ್ನ ಪ್ರಸಾದ ಎನ್ನುವುದು ಅವರು ಪಾಲಿಸಿಕೊಂಡು ಬಂದ ನಿಯಮ. ಅದೆಷ್ಟೇ ದೂರ ಹೋಗಿರಲಿ, ಮತ್ತೆ ಸಿದ್ಧಗಂಗಾ ಮಠಕ್ಕೆ ಬಂದು ತಮ್ಮ ಪ್ರಿಯ ಶಿವನಿಗೆ ಪೂಜೆಯ ಪ್ರಸಾದ ಅರ್ಪಿಸಿ ನಂತರ ತಮ್ಮ ಆಹಾರ ಸ್ವೀಕರಿಸುತ್ತಿದ್ದರು.
ಒಮ್ಮೆ ದೂರದ ಗುಲ್ಬರ್ಗಾದಲ್ಲಿ ಧಾರ್ಮಿಕ ಕಾರ್ಯಕ್ರಮವಿತ್ತು. ಬೆಳಿಗ್ಗೆ ಶಿವಪೂಜೆ ಮುಗಿಸಿ ಪ್ರಸಾದ ಸ್ವೀಕರಿಸಿ ಹೊರಟ ಶ್ರೀಗಳು ಅಂದು ಮಾರನೆಯ ದಿನ ಬೆಳಿಗ್ಗೆ ಬರುವವರೆಗೂ ಯಾವುದೇ ಪ್ರಸಾದವನ್ನು ಸ್ವೀಕರಿಸುತ್ತಿರಲಿಲ್ಲ. ಜತೆಗೆ ಒಂದು ತೊಟ್ಟು ನೀರನ್ನೂ ಕೂಡ ಶ್ರೀಗಳು ಕುಡಿಯುತ್ತಿರಲಿಲ್ಲ. ಮೊದಲೆಲ್ಲಾ ಶ್ರೀಗಳು ಶಿವಪೂಜೆಗೆಂದು ತೆರಳಿದರೆ ಅಲ್ಲಿ ಪೂಜೆ ಮುಗಿದ ನಂತರ ಇವರ ಮೆನು ಏನಿತ್ತು ಅದನ್ನೇ ತಯಾರಿಸಲು ಹೇಳಿ ತಿನ್ನುತ್ತಿದ್ದರು. ಶ್ರೀಗಳು ೯೦ ವಸಂತ ದಾಟಿದ ನಂತರ ಭಕ್ತರ ಮನೆಯಲ್ಲಿ ಶಿವಪೂಜೆ ಮಾಡುವುದು ಕಡಿಮೆಯಾಗುತ್ತಾ ಬಂತು.
ಅಲ್ಲಿಂದ ಎಲ್ಲಿಯೇ ಹೋದರೂ ವಾಪಸ್ ಮಠಕ್ಕೆ ಬರುವವರೆಗೂ ಆಹಾರ ಸ್ವೀಕರಿಸುತ್ತಿರಲಿಲ್ಲ. ಶ್ರೀಗಳಿಗೆ ಆಹಾರವೆಂದರೆ ಅದು ದೇಹವನ್ನು ಸಾಗಿಸಲು ಬೇಕಾದ ಒಂದು ಸಾಧನವಷ್ಟೇ. ಮಿತವಾದ ಆಹಾರವೇ ಕಾಯಕದ ಶಕ್ತಿ. ಆಹಾರಕ್ಕಾಗಿ ಮನುಷ್ಯ ಜೀವನ ಪೂರ್ತಿ ಹೋರಾಡುತ್ತಾನೆ. ಅದಕ್ಕಾಗಿಯೇ ಬದುಕಿದವನಂತೆ ವರ್ತಿಸುತ್ತಾನೆ. ಆದರೆ ಒಮ್ಮೆ ಆತ ಅಹಾರ ಮತ್ತು ಬದುಕಿನ ಭೋಗಗಳ ಬಗ್ಗೆ ನಿರಾಸಕ್ತಿ ಬೆಳಸಿಕೊಂಡರೆ ಆತ ಬದುಕಿನಲ್ಲಿ ಹೊಸದನ್ನು ಕಾಣುತ್ತಾನೆ. ವ್ಯಾಮೋಹಗಳು ಮನುಷ್ಯನನ್ನು ಬಂಧಿಸಿದಷ್ಟು ಆತ ಮಹಾತ್ಮನಾಗುವ ಎಲ್ಲಾ ಅವಕಾಶಗಳನ್ನು ಕಳೆದುಕೊಳ್ಳುತ್ತಾ ಹೋಗುತ್ತಾನೆ ಎಂಬುದು ಶ್ರೀಗಳು ಸದಾ ಹೇಳುತ್ತಿದ್ದ ಮಾತುಗಳಾಗಿತ್ತು.
ಈ ಹಿಂದೆ ಶ್ರೀಗಳು ಮಠವನ್ನು ಕಟ್ಟುವಾಗ ಅದೆಷ್ಟು ಬಾರಿ ಹಸಿದುಕೊಂಡು ಮಲಗಿಕೊಂಡಿದ್ದರು ಎಂಬುದು ಯಾರಿಗೂ ಗೊತ್ತಾಗುತ್ತಿರಲಿಲ್ಲ. ಎಲ್ಲಾ ಇದ್ದರೂ ಶ್ರೀಗಳಿಗೆ ಮಠದ ಮಕ್ಕಳ ನಾಳೆಗಳಿಗೂ ಆಹಾರ ಶೇಖರಣೆಯಾಗಬೇಕಿತ್ತು. ಅದರ ಬಗ್ಗೆಯೇ ಹೆಚ್ಚಿನ ಯೋಚನೆ ಅವರಲ್ಲಿ ಸುಳಿದಾಡುತ್ತಿತ್ತು. ಹಸಿವಾದಾಗ ಏನಾದರೂ ಆಹಾರ ಸ್ವೀಕರಿಸಲೇಬೇಕು ಎನ್ನುವುದು ನಿಯಮವಲ್ಲ ಆಹಾರ ಬೇಕಾದ ಸಮಯದಲ್ಲಿ ಶಿವನ ಧ್ಯಾನದಲ್ಲಿ ಮುಳುಗಿದರೆ ಸಾಕು ಶಿವನ ನಾಮಮೃತದ ಮುಂದೆ ಇನ್ನಾವುದೇ ಅಹಾರಗಳು ಬೇಕೆನಿಸದು ಎಂದು ಶ್ರೀಗಳು ಹೇಳುತ್ತಿದ್ದರು.
ಆಹಾರಕ್ಕಾಗಿಯೇ ಬದುಕಿ ಮಕ್ಕಳು ಮೊಮ್ಮೊಕ್ಕಳು ಮುಂದಿನ ಮೂರು ತಲೆಮಾರಿಗೂ ಮಿಗುವಂತೆ ಆಸ್ತಿ ಮಾಡುವವರೇ ಜಾಸ್ತಿ. ಉಳ್ಳವರ ಮುಂದೆ ಜೋಳಿಗೆ ಹಿಡಿದು ಹೊರಟ ಈ ತಪಸ್ವಿ ತನಗಿಂತ ಮಕ್ಕಳಿಗಾಗಿ ಬೇಡುತ್ತಿದ್ದರು. ಉಳಿದಂತೆ ನಿರಮ್ಮಳವಾಗಿ ಕುಳಿತು ಶಿವನ ಧ್ಯಾನ ಮಾಡುತ್ತಾ ಮಕ್ಕಳ ಹಸಿವನ್ನು ನೀಗಿಸಿದ ಸಂತೃಪ್ತಿಯಲ್ಲಿ ಕಳೆಯುತ್ತಿದ್ದರು. ಆಹಾರ ಶಿವನದ್ದು, ಅವನು ಎಲ್ಲರಿಗೂ ಎಲ್ಲೆಡೆಯಲ್ಲಿಯೂ ಅದರ ಸಂಪನ್ಮೂಲಗಳನ್ನು ಇಟ್ಟಿರುತ್ತಾನೆ. ಅದು ಒಂದು ಕೈಯಿಂದ ಇನ್ನೊಂದು ಹೊಟ್ಟೆಗೆ ತಲುಪಿಸುವುದೇ ದಾಸೋಹ ಎಂದು ನಂಬಿದ್ದ ಶ್ರೀಗಳು ಅದನ್ನೇ ನಿಜ ಮಾಡಿದ್ದರು.
ಶ್ರೀಗಳ ಜನ್ಮ ಜಯಂತಿ ದಿನವಾದ ಇಂದು ಶ್ರೀಗಳ ಮಿತ ಆಹಾರದ ಪ್ರಜ್ಞೆ ನಮಗೆ ಬಂದರೆ ಅದೇ ಶ್ರೀಗಳ ಸ್ಮರಣೆಗೂ ಅರ್ಥ ಕೊಟ್ಟಂತಾಗುತ್ತದೆ.

  • ಡಾ. ಎಸ್. ಪರಮೇಶ್
    ವ್ಯವಸ್ಥಾಪಕ ನಿರ್ದೇಶಕರು
    ಸಿದ್ದಗಂಗಾ ಆಸ್ಪತ್ರೆ, ತುಮಕೂರು