ಶಿವಪುರ ಪಂಚಾಯಿತಿ ವ್ಯಾಪ್ತಿಯಲ್ಲಿ ಕಂದಾಯ ಭೂಮಿ ದುರ್ಬಳಕೆ

ಚಾಮರಾಜನಗರ, ಜೂ.11- ನಗರಕ್ಕೆ ಹೊಂದಿಕೊಂಡಂತೆ ಇರುವ ಶಿವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕಂದಾಯ ಜಮೀನುಗಳು ಕೃಷಿ ಭೂಮಿಯಾಗಿ ಉಳಿಯದೆ ಇತರೇ ಉದ್ದೇಶಕ್ಕೆ ಬಳಕೆಯಾಗುತ್ತಿದೆ. ಕಂದಾಯ ಹಾಗೂ ಗ್ರಾಮ ಪಂಚಾಯಿತಿಗೆ ಬರುವ ಅದಾಯ ಸೋರಿಕೆ ಹಾಗೂ ಅಕ್ರಮ ಕಟ್ಟಡಗಳು ತಲೆ ಎತ್ತುತ್ತಿವೆ ಈ ಬಗ್ಗೆ ಕ್ರಮಕ್ಕಾಗಿ ಕಂದಾಯ ಇಲಾಖೆಗೆ ಪತ್ರ ಬರೆಯಲು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ತಾಲೂಕಿನ ಶಿವಪುರ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಅಧ್ಯಕ್ಷೆ ಮಹದೇವಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆ ಆರಂಭವಾಗುತ್ತಿದ್ದಂತೆ ಸದಸ್ಯ ಶಿವಕುಮಾರ್ ಈ ವಿಚಾರವನ್ನು ಪ್ರಸ್ತಾಪ ಮಾಡಿ, ಶಿವಪುರ ಪಂಚಾಯಿತಿ ವ್ಯಾಪ್ತಿಗೆ ಬರುವ ಯಡಪುರ ಸರ್ವೆ ನಂ ಜಮೀನುಗಳಲ್ಲಿ ಅಕ್ರಮವಾಗಿ ವಾಣಿಜ್ಯ ಕಟ್ಟಡಗಳು ತಲೆ ಎತ್ತಿವೆ. ಅಲ್ಲದೇ ಈ ಪ್ರದೇಶದಲ್ಲಿ ಮೆಡಿಕಲ್ ಕಾಲೇಜು, ಅಸ್ಪತ್ರೆ, ವಿದ್ಯಾರ್ಥಿನಿಲಯ, ವೈದ್ಯರ ವಸತಿ ಗೃಹಗಳು, ಕೃಷಿ ಕಾಲೇಜು, ಬುದ್ದ ವಿಹಾರ, ಗಾಂಧಿ ಭವನ ಸೇರಿದಂತೆ ಅನೇಕ ಸರ್ಕಾರಿ ಕಚೇರಿಗಳು ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಈ ವ್ಯಾಪ್ತಿಯಲ್ಲಿರುವ ಕೃಷಿ ಭೂಮಿಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಸಭೆಯ ಗಮನ ಸೆಳೆದರು.
ದಲ್ಲಾಳಿಗಳು ಹಾಗು ಭೂಮಿ ಮಾಲೀಕ ರೈತರು ಈ ಜಮೀನುಗಳನ್ನು ಕೃಷಿ ಭೂಮಿಯಾಗಿ ಮಾರಾಟ ಮಾಡುವ ಜೊತೆಗೆ ಕಂದಾಯ ಇಲಾಖೆಗೆ ತೆರಿಗೆಯನ್ನು ವಂಚನೆ ಮಾಡುತ್ತಿದ್ದಾರೆ. ಈ ಪ್ರದೇಶದ ವ್ಯಾಪ್ತಿಯಲ್ಲಿ ಗುಂಟೆ ಮಾದರಿಯಲ್ಲಿ ಜಮೀನುಗಳು ಖರೀದಿ ಮಾಡಲಾಗುತ್ತದೆ.
ಈ ಜಾಗದಲ್ಲಿ ಯಾವುದೇ ಪರವಾನಗಿಯನ್ನು ಪಡೆಯದೇ ರಾಜರೋಷವಾಗಿ ಅಕ್ರಮ ಕಟ್ಟಡಗಳು ನಿರ್ಮಾಣವಾಗಿವೆ. ಈ ಜಮೀನುಗಳು ಇನ್ನು ಸಹ ಕೃಷಿ ಉದ್ದೇಶಕ್ಕೆ ಬಳಕೆಯಾಗುತ್ತಿದೆ ಎಂದು ಕಂದಾಯ ಇಲಾಖೆಯ ದಾಖಲಾತಿಗಳಲ್ಲಿ ಇದೆ. ಆದರೆ, ಈ ಪ್ರದೇಶವು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಹಳದಿ ವಲಯವಾಗಿದ್ದು, ಚುಡಾದಿಂದ ಅನುಮೋದನೆ ಪಡೆದು, ಅನ್ಯಕ್ರಾಂತ ಮಾಡಿಸಿ, ಪಂಚಾಯಿತಿಯಿಂದ ಅನುಮತಿ ಪಡೆದು ಕಟ್ಟಡಗಳನ್ನು ನಿರ್ಮಾಣವಾಗಬೇಕು. ಆದರೆ, ಇದ್ಯಾವುದೇ ನಿಯಮಗಳು ಇಲ್ಲಿ ಪಾಲನೆಯಾಗುತ್ತಿಲ್ಲ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಈ ಬಗ್ಗೆ ಅಧ್ಯಕ್ಷರು ತಕ್ಷಣದಲ್ಲಿಯೇ ಕಂದಾಯ ಇಲಾಖೆಯ ಹಾಗೂ ಚಾ.ನಗರ ಅಭಿವೃದ್ದಿ ಪ್ರಾಧಿಕಾರಕ್ಕೆ ಪತ್ರ ಬರೆಯುವ ಮೂಲಕ ಅಕ್ರಮ ಕಟ್ಟಡಗಳ ತೆರವು ಮಾಡುವುದಾಗಿ ತಿಳಿಸಿದರು.
ಶಿವಪುರ ಗ್ರಾಮ ಪಂಚಾಯಿತಿ ಯಡಬೆಟ್ಟ ಬಳಿಯ ಗೋಮಾಳದಲ್ಲಿ ರೆಡ್ ಕ್ರಾಸ್ ಸಂಸ್ಥೆಗೆ ಸರ್ವೆ ನಂ. 124ರಲ್ಲಿ 30 ಗುಂಟೆ ಜಮೀನು ಮಂಜೂರು ಮಾಡಿರುವುದು ಸರಿಯಲ್ಲ. ಇಲ್ಲಿನ ನಿವಾಸಿಗಳಿಗೆ ಸ್ಮಶಾನ ಹಾಗೂ ನಿವೇಶನ ಇಲ್ಲದೇ ಬಹಳ ತೊಂದರೆ ಪಡುತ್ತಿದ್ದಾರೆ.
ವಸತಿ ರಹಿತರಿಗೆ ನಿವೇಶನ ಹಾಗೂ ಗ್ರಾಮಕ್ಕೊಂದು ಸ್ಮಶಾನ ಅತ್ಯವಶ್ಯಕವಾಗಿದೆ. ಹೀಗಾಗಿ ಜಿಲ್ಲಾಧಿಕಾರಿಗಳು ನಿರಾಪಕ್ಷೇಣಾ ಪತ್ರಕ್ಕೆ ಸೂಕ್ತ ಉತ್ತರ ನೀಡಿ, ಈ ಮಂಜೂರಾತಿಯನ್ನು ರದ್ದುಪಡಿಸಬೇಕು ಎಂದು ಸಭೆಯಲ್ಲಿ ತಿಳಿಸಿದರು.
ಗ್ರಾಮ ಠಾಣೆಗೆ ಸೇರಿದ ನಿವೇಶಗಳಿಗೆ ಇ ಸ್ವತ್ತು ಮಾಡಿಸಲು ಸೂಕ್ತವಾದ ದಾಖಲಾತಿಗಳನ್ನು ನೀಡಿ, ಅರ್ಹ ಫಲಾನುಭವಿಗಳು ನೇರವಾಗಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ, ಪಡೆದುಕೊಳ್ಳಬೇಕು ಎಂದು ಪಿಡಿಓ ರವಿ ತಿಳಿಸಿದರು.
ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಮಹೇಶ್, ಸದಸ್ಯರಾದ ಶಿವಣ್ಣ, ಅಜಯ್, ಶಿವಕುಮಾರ್, ಕುಮಾರಸ್ವಾಮಿ, ಮಹದೇವಸ್ವಾಮಿ, ಪಿಡಿಓ ರವಿ, ಕಾರ್ಯದರ್ಶಿ ಮಲ್ಲಿಕಾರ್ಜುನಸ್ವಾಮಿ, ಇತರರು ಇದ್ದರು.