ಶಿವನ ಪಾಣಿಪೀಠವ ಹತ್ತಿ ಪೂಜೆ ಮಾಡುವ ಹಂಪಿಯ ಶಿವಭಕ್ತ ಕೃಷ್ಣಭಟ್ ಇನ್ನಿಲ್ಲ

ಹೊಸಪೇಟೆ ಏ26: ಕುಗ್ಗಿದ ದೇಹ, ಬಾಗಿದ ಸೊಂಟವನ್ನೂ ಲೆಕ್ಕಿಸದೇ ಮೈಗೊಂದು ಬಿಳಿ ಪಂಚೆ ಧರಿಸಿ, ಬೃಹತ್ ಶಿವಲಿಂಗದ ಪಾಣಿಪೀಠವ ಏರಿ ನಿತ್ಯ ಶಿವನಿಗೆ ಪೂಜೆ ಸಲ್ಲಿಸುತ್ತಿದ್ದ ಹಂಪಿಯ ಶಿವಭಕ್ತ ಕೃಷ್ಣಭಟ್ (89) ಭಾನುವಾರ ಶಿವೈಕ್ಯರಾದರು.
ಹಂಪಿ ಪ್ರಮುಖ ಸ್ಮಾರಕಗಳಲ್ಲಿ ಒಂದಾದ ಬೃಹದಾಕಾರದ ಬಡವಿಲಿಂಗಕ್ಕೆ ನಿತ್ಯ ಪೂಜಾ ಕೈಂಕರ್ಯಗಳನ್ನು ಗೈಯುತ್ತಿದ್ದ ಆರ್ಚಕ ಕಾಸರವಳ್ಳಿ ಕೃಷ್ಣಭಟ್ ವಯೋಸಹಜ ಕಾಯಿಲೆಯಿಂದ ಇನ್ನಿಲ್ಲವಾದರು. ಮೂರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿರುವ ಮೃತರ ಅಂತ್ಯಕ್ರಿಯೆ ಹಂಪಿ ತುಂಗಭದ್ರಾ ನದಿ ತೀರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ವಿಧಿವತ್ತಾಗಿ ಜರುಗಿದವು.
ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಸಮೀಪದ ಕಾಸರವಳ್ಳಿಯವರಾದ ಕೃಷ್ಣಭಟ್ಟರ್, 1979ರಲ್ಲಿ ಹಂಪಿಗೆ ಬಂದು ನೆಲಸಿದ್ದರು. ಕಳೆದ 80ರ ದಶಕದಿಂದಲೂ ಬಡವಲಿಂಗ ಪೂಜೆ ಸಲ್ಲಿಸುತ್ತಿದ್ದರು. ಅಂದಿನವರಗೂ ಪ್ರವಾಸಿಗರ ಕಣ್ಣಿಗೆ ಕೇವಲ ಸ್ಮಾರಕವಾಗಿ ಬಡವಿಲಿಂಗ ಭಕ್ತಿ ಮೂಡತೊಡಗಿತು.
ವಿಜಯನಗರ ಅರಸರ ವಂಶಸ್ಥರಾದ ಆನೆಗುಂದಿಯ ದಿವಂಗತ ಅಚ್ಯುತ ದೇವರಾಯರ ಸೂಚನೆಯಂತೆ ಕಳೆದ ನಾಲ್ಕು ದಶಕಗಳಿಗೂ ಆಧಿಕ ಕಾಲ ಬಡವಿಲಿಂಗ ಪೂಜೆ ನೆರವೇರಿಸಿದ ಕೃಷ್ಣಭಟ್ಟರ್, ಶಕ್ತಿ ಹೀನರಾಗಿ ಸೊಂಟ ಭಾಗಿದರೂ ಎಂದಿಗೂ ಶಿವನ ಪೂಜೆಯನ್ನು ಮಾಡುವುದನ್ನು ನಿಲ್ಲಿಸಲ್ಲಿಲ್ಲ. ಅನಾರೋಗ್ಯದ ನಿಮಿತ್ತ ಕಳೆದ ಆರು ತಿಂಗಳಿಂದ ಶಿವಪೂಜೆ ನಿಲ್ಲಿಸಿದ ಅವರು ಇದೀಗ ಶಿವನಲ್ಲಿ ಲೀನರಾದರು.
ಹಂಪಿ ಪ್ರಕಾಶ ನಗರದ ತಮ್ಮ ನಿವಾಸದಿಂದ ಬೆಳಿಗ್ಗೆ ಹೊತ್ತಿನಲ್ಲಿ ಸುಮಾರು ಎರಡು ಕಿಮೀನಷ್ಟು ದಾರಿಯನ್ನು ಕಾಲ್ನಡಿಗೆಯಲ್ಲಿ ಸಾಗಿ ಬಂದು ಶಿವಲಿಂಗ ಪೂಜೆ ಸಲ್ಲಿಸಿ ಮಧ್ಯಾನ್ಹದ ಹೊತ್ತಿನಲ್ಲಿ ಪುನಃ ಮನೆಗೆ ತೆರಳುವುದು ಅವರ ನಿತ್ಯ ಕಾಯಕವಾಗಿತ್ತು. ಕೃಷ್ಣಭಟ್ಟರಿಲ್ಲದೇ ಶಿವಲಿಂಗ ಬಡವಾಯಿತು ಎಂಬ ಭಾವ ಇದೀಗ ಶಿವ ಭಕ್ತರಲ್ಲಿ ಮೂಡ ತೊಡಗಿದೆ. ಇವರಷ್ಟು ನಿಷ್ಠೆಯಿಂದ ಶಿವಪೂಜೆ ಮಾಡುವ ಮತ್ತೊಬ್ಬ ಭಕ್ತ ಸಿಗುವುದು ವಿರಳವೇ ಎನ್ನಲಾಗುತ್ತಿದೆ.
15 ಶತಮಾನದಲ್ಲಿ ನಿರ್ಮಾಣವಾದ 3 ಮೀಟರ್ ಎತ್ತರದ ಏಕಶಿಲಾ ಬೃಹತ್ ಶಿವಲಿಂಗ ನೀರಿನಲ್ಲಿದೆ.
ಈ ಶಿವಲಿಂಗವನ್ನು ಓರ್ವ ಬಡ ಮಹಿಳೆಯೊಬ್ಬಳು ನಿರ್ಮಾಣ ಮಾಡಿ ಶಿವಪೂಜೆ ಮಾಡುತ್ತಿದ್ದಳು ಎಂಬ ಐತಿಹ್ಯವಿದ್ದ ಈ ಬಡವಿಲಿಂಗವನ್ನು ಕೃಷ್ಣಭಟ್ಟರು ಕಳೆದ 33 ವರ್ಷಗಳಿಂದ ಪೂಜೆ ಮಾಡುತ್ತಿದ್ದರು.