
ಕಲಬುರಗಿ,ಮಾ.14-ಬಸವಾದಿ ಶರಣರ ಕಾಯಕ, ಸಮಾನತೆ ಹಾಗೂ ದಾಸೋಹ ತತ್ವಗಳಿಂದ ಪ್ರಭಾವಿತರಾಗಿದ್ದ ಶರಣಬಸವೇಶ್ವರರು ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು ಎಂದು ನಿವೃತ್ತ ಪ್ರಾಚಾರ್ಯೆ ಡಾ.ನೀಲಮ್ಮ ಕತ್ನಳ್ಳಿ ತಿಳಿಸಿದರು.
ಬಸವ ಸಮಿತಿ ಹಾಗೂ ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ವತಿಯಿಂದ ಜಯನಗರದ ನಗರದ ಅನುಭವ ಮಂಟಪದಲ್ಲಿ ಲಿಂ.ನಂದಮ್ಮ ವೀರಮ್ಮ ಇಂಗಳೇಶ್ವರ ಅವರ ಸ್ಮರಣಾರ್ಥ ಜರುಗಿದ 745ನೇ ಅರಿವಿನ ಮನೆ ಕಾರ್ಯಕ್ರಮದಲ್ಲಿ ಮಹಾದಾಸೋಹಿ ಶರಣಬಸವೇಶ್ವರರು ವಿಷಯ ಕುರಿತು ಅನುಭಾವ ನೀಡಿದ ಅವರು, ಶರಣಬಸವೇಶ್ವರರ ಪತ್ನಿ ಮಹಾದೇವಿ ಕೂಡ ಸಾತ್ವಿಕ ಸ್ವಭಾವದ ಗೃಹಿಣಿಯಾಗಿದ್ದರು. ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ ಎನ್ನುವಂತೆ ಬದುಕುವ ಮೂಲಕ ಇತರರಿಗೆ ಸ್ಫೂರ್ತಿಯಾಗಿದ್ದರು ಎಂದು ಹೇಳಿದರು.
ಕಳ್ಳರ ಮನಪರಿವತರ್Àನೆ ಮಾಡಿದ, ಹಲವರ ರೋಗ ರುಜಿನ ಗುಣಪಡಿಸಿದ ಪಕ್ಷಿಗಳಿಗೂ ದಾಸೋಹ ಮಾಡಿದ ಪವಾಡ ಸದೃಶ ಘಟನೆಗಳು ಸಹ ಇವರ ಬದುಕಿನಲ್ಲಿ ನಡೆದಿರುವ ಬಗ್ಗೆ ಜನಪದ ಹಾಡು ಹಾಗೂ ಪುರಾಣಗಳಿಂದ ತಿಳಿದು ಬರುತ್ತದೆ ಎಂದರು.
ಶರಣಬಸವೇಶ್ವರರು ತಮ್ಮ ಗುರು ಮರುಳಾಧ್ಯಾರ ಮೂಲಕ ಕಡಕೋಳ ಮಡಿವಾಳಪ್ಪನವರಿಗೆ ಲಿಂಗದೀಕ್ಷೆ ಕೊಡಿಸಿದ ಶರಣಬಸವೇಶ್ವರರನ್ನು ಕಲ್ಯಾಣ ನಾಡಿನ ಕೊನೆಯ ಶರಣರು ಎಂದು ಗುರುತಿಸಬಹುದಾಗಿದೆ ಎಂದು ಹೇಳಿದರು.
ಹುಟ್ಟಿದ ಊರು ಅರಳಗುಂಡಿಗಿ ತೊರೆದು ಬಸವಕಲ್ಯಾಣದ ಕಡೆಗೆ ಹೊರಡುವಾಗ ಕಲಬುರಗಿಯಲ್ಲೇ ನೆಲೆಸಿ ತಮ್ಮ ದಾಸೋಹ ಕಾರ್ಯದಿಂದಾಗಿ ಕಲಬುರಗಿಯನ್ನು ಕಲ್ಯಾಣದ ಹೆಬ್ಬಾಗಿಲು ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ಅವರು ವಿವರಿಸಿದರು.
ತಮ್ಮ ಕತೃತ್ವಶಕ್ತಿಯಿಂದ ಸೌಳಳ್ಳಿಯಲ್ಲಿ ಶಿವನ ಪರುಷ ಬಟ್ಟಲು ಪಡೆದ ಶರಣಬಸವೇಶ್ವರರು ತಮ್ಮ ಬಳಿಯೇ ಇಟ್ಟಿಕೊಂಡಿದ್ದರು. ಆ ಪರುಷ ಬಟ್ಟಲು ಇಂದಿಗೂ ಕಲಬುರಗಿಯ ಶರಣಬಸವೇಶ್ವರರ ದಾಸೋಹ ಮಹಾ ಮನೆಯಲ್ಲಿದ್ದು, ಪ್ರತಿ ವರ್ಷ ಜಾತ್ರೆಯ ದಿನದಂದು ಅದನ್ನು ಪ್ರದರ್ಶಿಸಲಾಗುತ್ತಿದೆ ಎಂದು ತಿಳಿಸಿದರು.
ಬಸವ ಸಮಿತಿ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ ಅಧ್ಯಕ್ಷತೆ ವಹಿಸಿದ್ದರು. ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ನಿರ್ದೇಶಕ ಡಾ. ವೀರಣ್ಣ ದಂಡೆ, ಡಾ. ಜಯಶ್ರೀ ದಂಡೆ, ಡಾ. ಕೆ.ಎಸ್.ವಾಲಿ, ದತ್ತಿ ದಾಸೋಹಿಗಳು ಇದ್ದರು. ಎಚ್.ಕೆ. ಉದ್ದಂಡಯ್ಯ ನಿರೂಪಿಸಿ ವಂದಿಸಿದರು.