ಶಿವನಗೌಡ ನಾಯಕರಿಂದ ಸೇಡಿನ ರಾಜಕಾರಣ

??????

ದೇವದುರ್ಗ.ಏ.೦೩-ದೇವದುರ್ಗ ಕ್ಷೇತ್ರದಲ್ಲಿ ಶಾಸಕ ಕೆ.ಶಿವನಗೌಡ ನಾಯಕ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ.
ಅವರ ವಿರುದ್ಧ ಧ್ವನಿ ಎತ್ತುವವರ ಮೇಲೆ ಪೊಲೀಸರ ಬಲ ಪ್ರಯೋಗ, ಕೇಸ್ ದಾಖಲು ಮಾಡುತ್ತಿದ್ದಾರೆ ಎಂದು ಜೆಡಿಎಸ್ ನಾಯಕ ಕರೇಮ್ಮ ಗೋಪಾಲಕೃಷ್ಣ ನಾಯಕ ಆರೋಪಿಸಿದರು.
ಪಟ್ಟಣದ ತಮ್ಮ ಸ್ವಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದರು. ಗಬ್ಬೂರಿನ ಕಲ್ಲು ಕ್ವಾರಿಯಲ್ಲಿ ಈಜಲು ತೆರಳಿದ್ದ ಯುವಕ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಆದರೆ, ಶಾಸಕರು ಪೊಲೀಸರ ಮೇಲೆ ಪ್ರಭಾವ ಭೀರಿ, ಜೆಡಿಎಸ್ ತಾಲೂಕು ಅಧ್ಯಕ್ಷ ಬುಡ್ಡನಗೌಡ ಪಾಟೀಲ್ ಜಾಗಟಗಲ್ ವಿರುದ್ಧ ಗಬ್ಬೂರು ಠಾಣೆಯಲ್ಲಿ ಮಾನವ ಹತ್ಯೆ ಪ್ರಕರಣ ದಾಖಲಿಸಿ ರಾಜಕೀಯ ಸೇಡು ತೀರಿಸಿಕೊಳ್ಳುತ್ತಿದ್ದಾರೆ.
ಜೆಡಿಎಸ್ ತಾಲೂಕು ಅಧ್ಯಕ್ಷ ಬುಡ್ಡನಗೌಡ ಪಾಟೀಲ್‌ಗೂ ಆ ಕಲ್ಲು ಕ್ವಾರಿಗೂ ಯಾವುದೇ ಸಂಬಂಧವಿಲ್ಲ. ಆದರೂ ಅವರ ವಿರುದ್ಧ ಕೇಸ್ ಮೃತ ಯುವಕನ ತಾಯಿ ಕಡೆಯಿಂದ ಕೇಸ್ ದಾಖಲಿಸಿದ್ದಾರೆ. ಕ್ವಾರಿ ಪಕ್ಕದಲ್ಲಿ ಬುಡ್ಡನಗೌಡರ ಜಮೀನು ಇದೆ, ಎನ್ನುವ ಒಂದೇ ಕಾರಣಕ್ಕೆ ಕೇಸ್ ದಾಖಲಾಗಿದೆ ಎಂದು ದೂರಿದರು.
ಸರ್ವೇ ನಂಬರ್ ೮೯೪, ೮೯೫ರಲ್ಲಿ ಬುಡ್ಡನಗೌಡರ ಜಮೀನು ಇದೆ. ಆದರೆ, ಕಲ್ಲು ಕ್ವಾರಿ ಸರ್ವೇ ನಂಬರ್ ೮೯೬ರಲ್ಲಿ ಇದೆ. ಇದನ್ನು ತಿಂಥಣಿ-ಕಲ್ಮಲಾ ರಾಜ್ಯ ಹೆದ್ದಾರಿ ನಿರ್ಮಾಣಕ್ಕಾಗಿ ಮರಂ ಹಾಗೂ ಜಲ್ಲಿ ಕಲ್ಲುಗಾಗಿ ಈ ಕ್ವಾರಿ ಕೊರೆಯಲಾಗಿದೆ. ಇದಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪರವಾನಗಿಯೂ ಇದೆ. ಆದರೆ, ಬುಡ್ಡನಗೌಡ ಪಾಟೀಲ್ ವಿರುದ್ಧ ಯಾಕೆ ಕೇಸ್ ಮಾಡಿದ್ದಾರೆ ಎನ್ನುವುದು ಗೊತ್ತಾಗುತ್ತಿಲ್ಲ.
ಕ್ಷೇತ್ರದಲ್ಲಿ ನಿರಂಕುಶ ಆಡಲಿತ ಮುಂದುವರಿಸಿದ್ದು, ವಿರೋಧಿಗಳನ್ನು ರಾಜಕೀಯವಾಗಿ ಮುಗಿಸಲು ಶಾಸಕರು ನಾನಾ ತಂತ್ರ ಅನುಸರಿಸುತ್ತಿದ್ದಾರೆ. ಅರಕೇರಾ ತಾಲೂಕು ವಿರೋಧಿಸಿ ಹೋರಾಟ ಮಾಡಿದ ಮುಖಂಡರ ವಿರುದ್ಧ ಕೋವಿಡ್ ನಿಯಮ ಉಲ್ಲಂಘನೆ ನೆಪದಲ್ಲಿ ಕೇಸ್ ದಾಖಲಿಸಲಾಗಿದೆ. ತಾಲೂಕಿನ ಬಿಜೆಪಿಗೆ ಪರ್ಯಾಯವಾಗಿ ಜೆಡಿಎಸ್ ಪಕ್ಷ ಬೆಳೆಯುತ್ತಿದ್ದು, ಇದನ್ನು ಸಹಿಸದ ಶಾಸಕರು ಈ ರೀತಿಯ ತಂತ್ರ ಹೆಣೆಯುತ್ತಿದ್ದಾರೆ ಎಂದು ಟೀಕಿಸಿದರು.
ನಾರಾಯಣಪುರ ಬಲದಂಡೆ ನಾಲೆಗೆ ಏ.೨೦ರವರೆಗೆ ನೀರು ಹರಿಸುವಂತೆ ಒತ್ತಾಯಿಸಿ ಏ.೫ರಂದು ಸಿರವಾರ್ ಕ್ರಾಸ್‌ನಲ್ಲಿ ಜೆಡಿಎಸ್‌ನಿಂದ ಪ್ರತಿಭಟನೆ ಮಾಡಲು ಉದ್ದೇಶಿಸಲಾಗಿತ್ತು. ಎಲ್ಲೆಡೆ ಕೋವಿಡ್-೧೯ ಎರಡನೇ ಅಲೆ ಎದ್ದಿರುವ ಹಿನ್ನೆಲೆಯಲ್ಲಿ ಹೋರಾಟವನ್ನು ತಾತ್ಕಾಲಿಕವಾಗಿ ಕೈಬಿಡಲಾಗಿದೆ. ಮುಂಬರುವ ದಿನಗಳಲ್ಲಿ ರೈತರ ಪರವಾಗಿ ಜೆಡಿಎಸ್ ಪಕ್ಷ ನಿರಂತರ ಹೋರಾಟ ಮಾಡಲಿದೆ ಎಂದು ಹೇಳಿದರು.
ಜೆಡಿಎಸ್ ಮುಖಂಡ ಅಮರೇಶ ಪಾಟೀಲ್ ವಕೀಲ ಮಾತನಾಡಿ, ಶಾಸಕ ಕೆ.ಶಿವನಗೌಡ ನಾಯಕ ಸೇಡಿನ ರಾಜಕಾರಣ ಮಾಡುವುದನ್ನು ಬಿಡಬೇಕು. ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಹನುಮಗೌಡ ಶಂಕರಬಂಡಿ, ಮುಖಂಡರಾದ ಶರಣಪ್ಪ ಬಳೆ, ಮಲ್ಲಣ್ಣ ಸಾಹುಕಾರ ನಾಗರಾಳ, ಫೀರೋಜ್ ಖಾನ್, ಶಾಲಂ ಉದ್ಧಾರ್, ರಾಮಣ್ಣ ನಾಯಕ, ವೆಂಕನಗೌಡ ವಕೀಲ, ಇಸಾಕ್ ಮೇಸ್ತ್ರಿ ಸೇರಿದಂತೆ ಇತರರಿದ್ದರು.