ಶಿವನಗೌಡ ಅನ್ನದಾಸೋಹ ಉಳಿದ ಶಾಸಕರಿಗೆ ಮಾದರಿ

 • ತೆಲಂಗಾಣ ರಾಜ್ಯದ ಶಾಸಕ ಎಸ್.ಆರ್.ರೆಡ್ಡಿ ಅಭಿಪ್ರಾಯ
 • ದೇವದುರ್ಗ.ಜೂ.೧೦-ಲಾಕ್ ಡೌನ್ ಸಂಕಷ್ಟ ಸಂದರ್ಭದಲ್ಲಿ ಕ್ಷೇತ್ರದ ಶಾಸಕ ತನ್ನ ಜನರಿಗಾಗಿ ಆರಂಭಿಸಿದ ಅನ್ನದಾಸೋಹ ಕೇಂದ್ರ ಬಡವರ ಹಸಿವು ನೀಗಿಸುತ್ತಿದೆ.
  ಶಾಸಕರ ಈ ಕಾರ್ಯ ಇತರೆ ಶಾಸಕರಿಗೆ ಮಾದರಿಯಾಗಿದೆ ಎಂದು ತೆಲಂಗಾಣ ರಾಜ್ಯದ ನಾರಾಯಣಪೇಟೆ ಶಾಸಕ ಹಾಗೂ ರಾಯಚೂರಿನ ನವೋದಯ ಸಂಸ್ಥೆ ಮುಖ್ಯಸ್ಥ ಎಸ್. ಆರ್.ರೆಡ್ಡಿ ಹೇಳಿದರು.
  ಪಟ್ಟಣದ ಕೆಎಸ್.ಎನ್. ಅನ್ನದಾಸೋಹ ಕೇಂದ್ರಕ್ಕೆ ಭೇಟಿ ನೀಡಿ ಗುರುವಾರ ಮಾತನಾಡಿದರು. ಕೊರೊನಾದಂತ ಸಂಕಷ್ಟ ಸಮಯದಲ್ಲಿ ಜನರು ದುಡಿಮೆ ಇಲ್ಲದೆ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಇನ್ನೊಂದೆಡೆ ಆರೋಗ್ಯ ಸಮಸ್ಯೆ ಅವರನ್ನು ಬಾರಿಸುತ್ತದೆ. ಲಾಕ್‌ಡೌನ್ ಸಂದರ್ಭದಲ್ಲಿ ಬಹುತೇಕ ಜನಪ್ರತಿನಿಧಿಗಳು ಜನರ ನೋವಿಗೆ ಸ್ಪಂದಿಸದೆ ತಮ್ಮ ಕುಟುಂಬದ ಜೊತೆ ಇದ್ದು ಕಾಲಕಳೆಯುತ್ತಿದ್ದಾರೆ.
  ಆದರೆ ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಕ್ಷೇತ್ರದ ಜನರ ಹಸಿವು ನಿಗಿಸುತ್ತಿದ್ದಾರೆ. ಇದು ಭಗವಂತನ ಸೇವೆಗೆ ಸಮ. ಪ್ರತಿನಿತ್ಯ ೪೦ ಸಾವಿರ ಜನರಿಗೆ ಊಟ ನೀಡುವುದು ಸಾಮಾನ್ಯ ಕೆಲಸವಲ್ಲ. ದೇವದುರ್ಗ ತಾಲೂಕಿನ ಎಲ್ಲಾ ೩೩ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಿಗೆ ಅನ್ನ ನೀಡುತ್ತಿದ್ದಾರೆ. ಒಂದು ತಿಂಗಳಿನಿಂದ ಅನ್ನದಾಸೋಹ ಶಿಬಿರ ನಡೆಯುತ್ತಿರುವುದು ನಾನು ಪತ್ರಿಕೆ ಹಾಗೂ ಸುದ್ದಿ ಮಾದ್ಯಮದಲ್ಲಿ ನೋಡಿದ್ದೆ. ಸ್ವತಃ ನೋಡಲು ಶಿಬಿರಕ್ಕೆ ಭೇಟಿ ನೀಡಿದ್ದು, ಇಲ್ಲಿನ ಅಚ್ಚುಕಟ್ಟು ವ್ಯವಸ್ಥೆ ತುಂಬಾ ಉತ್ತಮವಾಗಿದೆ. ಬಡವರಿಗೆ ಅನ್ನ ನೀಡುವ ಜೊತೆಗೆ ಇಲ್ಲಿನ ನಿರುದ್ಯೋಗಿ ಮಹಿಳೆಯರು, ಯುವಕರು ಹಾಗೂ ಆಟೋ ಚಾಲಕರಿಗೆ ಉದ್ಯೋಗ ನೀಡಿದ್ದಾರೆ. ಇದು ಅತ್ಯಂತ ಶ್ಲಾಘನೀಯ ಕಾರ್ಯ ಎಂದು ಹೇಳಿದರು.
  ಕೋವಿಡ್ ೧೯ ತಡೆಗೆ ಕೇಂದ್ರ ಹಾಗೂ ರಾಜ್ಯದಲ್ಲಿ ಲಾಕ್‌ಡೌನ್ ಅನಿವಾರ್ಯವಾಗಿದೆ. ಲಾಕ್‌ಡೌನ್ ಸಮಯದಲ್ಲಿ ಸಂಕಷ್ಟ ಎದುರಿಸುತ್ತಿರುವ ಜನರಿಗೆ ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಿದೆ. ಜೊತೆಗೆ ಉಚಿತವಾಗಿ ಪಡಿತರ ನೀಡುತ್ತಿದೆ. ಮಹಾಮಾರಿ ತಡೆಗೆ ಸಾರ್ವಜನಿಕರು ಆರೋಗ್ಯ ಇಲಾಖೆ ಜೊತೆ ಕೈಜೋಡಿಸಬೇಕು. ಅವರು ನೀಡುವ ನಿಯಮ ಹಾಗೂ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು.
  ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ, ಅನಗತ್ಯ ಓಡಾಟಕ್ಕೆ ಕಡಿವಾಣ ಸೇರಿ ವಿವಿಧ ನಿಯಮಗಳನ್ನು ಪಾಲಿಸುವುದರಿಂದ ಕೊರೊನಾ ಹರಡುವುದನ್ನು ತಡೆಯಬಹುದು ಎಂದು ಹೇಳಿದರು.
  ಈ ಸಂದರ್ಭದಲ್ಲಿ ಶಾಸಕ ಕೆ.ಶಿವನಗೌಡ ನಾಯಕ್, ವಿಷ್ಣುಕಾಂತ್, ಬಸವರಾಜ್ ಕೊಪ್ಪರ, ಬಸವರಾಜ ಅಕ್ಕರಕಿ, ಅಮರೇಶ ಮಡಿವಾಳ ಸೇರಿ ದಂತೆ ಇದ್ದರು.