ಶಿವನಗೌಡರ ಅನ್ನದಾಸೋಹ : ಮಾದರಿ – ಪುಣ್ಯ ಕಾರ್ಯ

ದೇವದುರ್ಗ.ಜೂ.೧೦- ಕೊರೊನಾ ಎರಡನೇ ಮಹಾಮಾರಿ ಅಲೆಯಿಂದ ತತ್ತರಿಸಿದ ತಾಲೂಕಿನ ಜನರು ಸೇರಿದಂತೆ ಅಕ್ಕಪಕ್ಕದ ತಾಲೂಕುಗಳಲ್ಲೂ ಪ್ರತಿನಿತ್ಯ ಲಕ್ಷಾಂತರ ಪ್ಯಾಕೇಟ್ ಊಟ ವ್ಯವಸ್ಥೆ ಮಾಡುವ ಮೂಲಕ ಶಾಸಕ ಕೆ.ಶಿವನಗೌಡ ನಾಯಕ ಅವರು ಅತ್ಯಂತ ಪುಣ್ಯದ ಕಾರ್ಯ ಮಾಡುತ್ತಿದ್ದಾರೆಂದು ತೆಲಂಗಾಣ ರಾಜ್ಯದ ನಾರಾಯಣಪೇಟೆ ಶಾಸಕರು ಹಾಗೂ ನವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಸ್.ಆರ್.ರೆಡ್ಡಿ ಅವರು ಶ್ಲಾಘಿಸಿದರು.
ಅವರಿಂದು ದೇವದುರ್ಗ ಪಟ್ಟಣದ ಕೆ.ಶಿವನಗೌಡ ನಾಯಕ ಅವರ ಅನ್ನದಾಸೋಹ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕೊರೊನಾದಂತಹ ಮಹಾಮಾರಿಯ ಸಂದರ್ಭದಲ್ಲಿ ಜನರಿಗೆ ನೆರವಾಗುವುದು ಮಾನವೀಯ ಧರ್ಮವೆನಿಸಿಕೊಳ್ಳುತ್ತದೆ. ಕೆ.ಶಿವನಗೌಡ ನಾಯಕ ಅವರು ತಮ್ಮ ಜನಪರ ಕಾಳಜಿಯನ್ನು ಈ ಮೂಲಕ ತೋರಿಸಿದ್ದಾರೆ. ಯಾವ ಜನಪ್ರತಿನಿಧಿಯೂ ಮಾಡದಂತಹ ಮಹಾನ್ ಸಾಧನೆಯನ್ನು ಅನ್ನದಾಸೋಹದ ಮೂಲಕ ಅವರು ಕೈಗೊಂಡಿದ್ದಾರೆ.
ಶೈಕ್ಷಣಿಕ ಮತ್ತು ಆರ್ಥಿಕವಾಗಿ ಅತ್ಯಂತ ಹಿಂದುಳಿದ ತಾಲೂಕಿನಲ್ಲಿ ಸರ್ವಾಂಗೀಣ ಅಭಿವೃದ್ಧಿಗೆ ಕಂಕಣ ಬದ್ಧರಾಗಿ ನಿಂತಿರುವ ಅವರು, ಕೊರೊನಾ ಸಂದರ್ಭದಲ್ಲಿ ಜನರಿಗೆ ಅನ್ನ ನೀಡುವ ಮೂಲಕ ಜನ ಸೇವೆಯನ್ನು ಅತ್ಯಂತ ಪ್ರಾಮಾಣಿಕತ್ವದಿಂದ ನಿರ್ವಹಿಸಿದ್ದಾರೆ. ಅನ್ನದಾಸೋಹ ಕೇಂದ್ರದಿಂದ ಪ್ರತಿನಿತ್ಯ ೧.೩೦ ಲಕ್ಷ ಜನರಿಗೆ ಊಟ ಪೂರೈಸುವುದು ಸಾಧಾರಣ ಸಂಗತಿಯಲ್ಲ. ಇದನ್ನು ಅವರು ಮಾಡುವ ಮೂಲಕ ರಾಜ್ಯದಲ್ಲಿ ಮಾತ್ರವಲ್ಲ, ಇತರರ ರಾಜ್ಯಗಳಿಗೂ ಮಾದರಿಯಾಗಿದ್ದಾರೆ. ತೆಲಂಗಾಣದಲ್ಲೂ ಈ ರೀತಿಯ ದಾಸೋಹ ಕೇಂದ್ರಗಳನ್ನು ನಿರ್ವಹಿಸಲು ಸಲಹೆ ನೀಡುವುದಾಗಿ ಹೇಳಿದ ಅವರು, ಜನಪ್ರತಿನಿಧಿಗಳಿಗೆ ಇದೊಂದು ಮಾದರಿಯ ದಾಸೋಹವಾಗಿದೆಂದರು.
ಕ್ಷೇತ್ರದಲ್ಲಿ ನೀರಾವರಿ, ಶೈಕ್ಷಣಿಕ ಅಭಿವೃದ್ಧಿಯೊಂದಿಗೆ ಗ್ರಾಮೀಣ ಜನರ ಕುಡಿವ ನೀರಿಗೂ ಆದ್ಯತೆ ನೀಡಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಈ ಸೇವೆಗೆ ಜನ ಆಶೀರ್ವಾದ ನೀಡಲಿದ್ದಾರೆ. ಭವಿಷ್ಯತ್ತಿನಲ್ಲಿ ಇನ್ನೂ ಉನ್ನತ ಸ್ಥಾನ ದೊರೆಯಲೆಂದು ಹಾರೈಸಿದರು. ಈ ಸಂದರ್ಭದಲ್ಲಿ ಶಿಲ್ಪಾ ಮೆಡಿಕೇರ್‌ನ ವಿಷ್ಣುಕಾಂತ ಬುತಡಾ, ಶಾಸಕ ಕೆ.ಶಿವನಗೌಡ ನಾಯಕ ಅವರು ಉಪಸ್ಥಿತರಿದ್ದರು.