ಶಿವದಾಸ್ ಘೋಷ್ ಜನ್ಮ ಶತಮಾನೋತ್ಸವದ ವರ್ಷಾಚರಣೆ


(ಸಂಜೆವಾಣಿ ಪ್ರತಿನಿಧಿಯಿಂದ)                                                                         
ಬಳ್ಳಾರಿ, ಆ.05: ಮಹಾನ್ ಮಾಕ್ರ್ಸ್‍ವಾದಿ ಚಿಂತಕರು, ಕಾರ್ಮಿಕ ವರ್ಗದ ಮಹಾನ್ ನಾಯಕರಾದ ಕಾಮ್ರೇಡ್ ಶಿವದಾಸ್ ಘೋಷ್ ರವರ ಜನ್ಮ ಶತಮಾನೋತ್ಸವದ ಅಂಗವಾಗಿ ಇಂದು ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಬಳ್ಳಾರಿ ಜಿಲ್ಲಾ ಸಮಿತಿಯಿಂದ ಧ್ವಜಾರೋಹಣ ಹಾಗೂ ಭಾವಚಿತ್ರಕ್ಕೆ ಮಾಲಾರ್ಪಣೆ ಕಾರ್ಯಕ್ರಮ ಪಕ್ಷದ ಜಿಲ್ಲಾ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಶಿವದಾಸ್ ಘೋಷ್ ರವರ ಭಾವಚಿತ್ರಕ್ಕೆ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ರಾಜ್ಯ ಸೆಕ್ರೆಟರಿಯೇಟ್ ಸದಸ್ಯರಾದ  ಕೆ. ಸೋಮಶೇಖರ್‍ರವರು ಹಾಗೂ ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ ಉಪಾಧ್ಯರವರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೆ. ಸೋಮಶೇಖರ್‍ರವರು ಮಾತನಾಡುತ್ತಾ ಭಾರತದ ನೆಲದಲ್ಲಿ ನೈಜ ಕಮ್ಯುನಿಸ್ಟ್ ಪಕ್ಷ ಎಸ್.ಯು.ಸಿ.ಐ(ಸಿ) ಸ್ಥಾಪನೆ ಮಾಡಿದ ಘೋಷ್ ರವರ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಇಡೀ ದೇಶದಾದ್ಯಂತ ವರ್ಷಪೂರ್ತಿ ಅತ್ಯಂತ ಗೌರವದಿಂದ ಆಚರಿಸಲು ಸಜ್ಜುಗೊಳಿಸಲಾಗುತ್ತಿದೆ. ಇಂದು ಈ ಮುಖ್ಯ ಕಾರ್ಯಕ್ರಮದ ಉದ್ಘಾಟನೆ ದೆಹಲಿಯಲ್ಲಿ ನಡೆಯುತ್ತಿದೆ. ಜಿಲ್ಲಾ ಮಟ್ಟದಲ್ಲಿ ಕೂಡ ಮುಂದಿನ ದಿನಗಳಲ್ಲಿ ಕಾರ್ಯಕ್ರಮ ಮಾಡಲಾಗುತ್ತದೆ. ಈ ವರ್ಷ ಆಗಸ್ಟ್ 5 ರಿಂದ ಕಾಮ್ರೇಡ್ ಶಿವದಾಸ್ ಘೋಷ್ ರವರ ಜನ್ಮ ಶತಮಾನೋತ್ಸವ ಆರಂಭವಾಗುತ್ತಿರುವುದು ಅತ್ಯಂತ ಸ್ಫೂರ್ತಿದಾಯಕವಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ಎಂ.ಎನ್ ಮಂಜುಳಾ, ಡಾ.ಪ್ರಮೋದ್.ಎನ್, ಎ.ದೇವದಾಸ್, ಆರ್.ಸೋಮಶೇಖರ್ ಗೌಡ, ಡಿ.ನಾಗಲಕ್ಷ್ಮಿ, ಎ.ಶಾಂತ, ಗೋವಿಂದ್ ಮತ್ತು ಪಕ್ಷದ ಸದಸ್ಯರೆಲ್ಲರೂ ಉಪಸ್ಥಿತರಿದ್ದರು.