ಸದಭಿರುಚಿ ಚಿತ್ರಗಳ ನಿರ್ಮಾಪಕರೆಂದೇ ಚಿತ್ರರಂಗದಲ್ಲಿ ಖ್ಯಾತಿ ಪಡೆದಿರುವ ರಮೇಶ್ ರೆಡ್ಡಿ ನಿರ್ಮಾಣದ ಹೊಸ ಚಿತ್ರವನ್ನು ಸಂಗೀತ ಮಾಂತ್ರಿಕ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿರುವುದು ತಿಳಿದ ಸಂಗತಿ.
“ನನ್ನರಸಿ ರಾಧೆ ” ಧಾರಾವಾಹಿ ಮೂಲಕ ನಾಡಿನ ಮನೆ ಮಾತಾದ ಪ್ರತಿಭಾನ್ವಿತ ನಟಿ ಕೌಸ್ತುಭ ಮಣಿ. ” 45″ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಈ ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ.
ಗಾಳಿಪಟ-2 ಚಿತ್ರದ ಯಶಸ್ಸಿನ ಬಳಿಕ ಇದೀಗ ಬಹು ತಾರಾಗಣದ ಅದ್ದೂರಿ ವೆಚ್ಚದ ಚಿತ್ರವನ್ನು ನಿರ್ಮಾಣಕ್ಕೆ ರಮೇಶ್ ರೆಡ್ಡಿ ಮುಂದಾಗಿದ್ದಾರೆ. ಚಿತ್ರಕ್ಕೆ ಆಯ್ಕೆಯಾಗಿರುವ ಕುರಿತು ಮಾಹಿತಿ ಹಂಚಿಕೊಂಡ ನಟಿ ಕೌಸ್ತುಭ ಮಣಿ, ಚಿತ್ರಕ್ಕೆ ಆಡಿಷನ್ ಕೊಟ್ಟಿದ್ದೆ. ಆಯ್ಕೆಯಾಗಿದ್ದೇನೆ. ಶಿವಣ್ಣ ,ಉಪೇಂದ್ರ ಸರ್ ಅವರ ಜೊತೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ.ಕಲಿಯಲು ಉತ್ತಮ ವೇದಿಕೆ. ನನ್ನ ಶಕ್ತಿ ಮೀರಿ ನಟಿಸುವೆ.ಘಟಾನುಘಟಿಗಳ ಜೊತೆ ನಟಿಸುವುದು ಒಂದೆಡೆ ಖುಷಿ ಆದರೆ ಮತ್ತೊಂದು ಭಯ,ನಡುಕ ಕೂಡ ಇದೆ.
ಚಿತ್ರದಲ್ಲಿ ನನ್ನದು ಬಬ್ಲಿ ಪಾತ್ರ. ರಾಜ್ ಬಿ ಶೆಟ್ಟಿ ಅವರಿಗೆ ನಾಯಕಿ. ಚಿತ್ರಕ್ಕೆ ಆಯ್ಕೆಯಾಗಿದ್ದೇನೆ ಎಂದಾಗ ಮೊದಲ ನಂಬಲು ಆಗಲಿಲ್ಲ ದೊಡ್ಡ ಬ್ಯಾನರ್ ನಲ್ಲಿ ಅವಕಾಶ ಸಿಕ್ಕಿರುವುದು ಮತ್ತಷ್ಟು ಖುಷಿಗೆ ಕಾರಣವಾಗಿದೆ. ಕಿರಿತೆರೆಯಲ್ಲಿ ಪಡೆದ ಅಭಿಮಾನಿ ಬಳಗವನ್ನು ಹಿರಿ ತೆರೆಯಲ್ಲಿ ಮತ್ತಷ್ಟು ಹೆಚ್ಚಿಸಿಕೊಳ್ಳುವ ತವಕವಿದೆ. ಹೊಸ ತನದ ಪಾತ್ರಗಳ ಮೂಲಕ ಗಮನ ಸೆಳೆಯುವ ಕನಸು ಇದೆ.ಯಾವುದೇ ರೀತಿಯ ಪಾತ್ರ ನೀಡಿದರೂ ಈ ಹುಡುಗಿ ಮಾಡಬಲ್ಲಳು ಎನ್ನುವ ಮೆಚ್ಚುಗೆ ಪಡೆಯುವ ಆಸೆ ಕೂಡ ಉದೆ ಎನ್ನುತ್ತಾರೆ ಕೌಸ್ತುಭ ಮಣಿ
ಸದ್ಯದಲ್ಲಿಯೇ ಚಿತ್ರೀಕರಣ
ಶಿವರಾಜ್ ಕುಮಾರ್ , ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಚಿತ್ರವನ್ನು ಸದ್ಯದಲ್ಲಿಯೇ ಚಿತ್ರೀಕರಣ ಆರಂಭಿಸುವುದಾಗಿ ನಿರ್ಮಾಪಕ ರಮೇಶ್ ರೆಡ್ಡಿ ತಿಳಿಸಿದ್ದಾರೆ.
ಎಲ್ಲೆಲ್ಲಿ ಚಿತ್ರೀಕರಣ ಮಾಡಬೇಕು ಎನ್ನುವುದೂ ಸೇರಿದಂತೆ ಎಷ್ಟು ದಿನ ಚಿತ್ರೀಕರಣ ಮಾಡಬೇಕು ಎನ್ನುವ ಕುರಿತು ಒಂದೆರಡು ದಿನಗಳಲ್ಲಿ ಅಂತಿಮ ಮಾಡಿ ಚಿತ್ರೀಕರಣ ಮಾಡಲಾಗುತ್ತಿದೆ. ಕನ್ನಡ ಚಿತ್ರರಂಗಕ್ಕೆ ಸದಭಿರುಚಿಯ ಚಿತ್ರ ನೀಡುವ ಉದ್ದೇಶವಿದೆ ಎನ್ನುತ್ತಾರೆ ಅವರು.
ಒಟಿಟಿಯಲ್ಲಿ 100
ರಮೇಶ್ ಅರವಿಂದ್ ನಿರ್ದೇಶನ ಮಾಡಿ ನಾಯಕನಾಗಿ ನಟಿಸಿದ್ದ ಚಿತ್ರವನ್ನು ಹಿಂದಿಯಲ್ಲಿ ವೀನೀತ್ ಕುಮಾರ್ ಸಿಂಗ್ ಮತ್ತು ಊರ್ವಶಿ ರೌಟೇಲಾ ನಾಯಕಿಯಾಗಿ ಕಾಣಿಸಿಕೊಂಡಿರುವ “100” ಚಿತ್ರವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲು ನಿರ್ಮಾಪಕ ರಮೇಶ್ ರೆಡ್ಡಿ ಅವರು ಸಿದ್ದತೆ ಮಾಡಿಕೊಂಡಿದ್ದಾರೆ. ಒಟಿಟಿಯಲ್ಲಿ ಬಿಡುಗಡೆ ಸಂಬಂದ ಮಾತುಕತೆ ನಡೆಯುತ್ತಿದೆ ಎಂದು ಖಚಿತ ಪಡಿಸಿದ್ದಾರೆ.
ಇನ್ನು ಕನ್ನಡದಲ್ಲಿ ಪ್ರಶಸ್ತಿ ಪಡೆದ ನಾತಿ ಚರಾಮಿ ಚಿತ್ರವನ್ನು ಮಲೆಯಾಳಂನಲ್ಲಿಯೂ ಕೂಡ ರಿಮೇಕ್ ಮಾಡಿದ್ದು ಆ ಚಿತ್ರವನ್ನು ಮುಂದಿನ ತಿಂಗಳು ಬಿಡುಗಡೆ ಮಾಡುವ ಉದ್ದೇಶ ಹೊಂದಿದ್ದಾರೆ ನಿರ್ಮಾಪಕರು.