ಶಿವಕುಮಾರ ಸ್ವಾಮೀಜಿ ಜಯಂತಿ ಮಹೋತ್ಸವಕ್ಕೆ ಚಾಲನೆ

ಬೀದರ್:ನ.17: ಇಲ್ಲಿಯ ಸಿದ್ಧಾರೂಢ ಮಠದ ಪೀಠಾಧಿಪತಿ ಡಾ. ಶಿವಕುಮಾರ ಸ್ವಾಮೀಜಿ ಅವರ 78ನೇ ಜಯಂತಿ ಮಹೋತ್ಸವ ಮಠದಲ್ಲಿ ಬುಧವಾರ ಆರಂಭಗೊಂಡಿತು.
ವಿಧಾನ ಪರಿಷತ್ ಸಭಾಪತಿ ರಘುನಾಥರಾವ್ ಮಲ್ಕಾಪುರೆ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.
ಬೀದರ್‍ನ ಸಿದ್ಧಾರೂಢ ಮಠ ಯಾವುದೇ ಒಂದು ಜಾತಿ, ಮತ ಅಥವಾ ಪಂಥಕ್ಕೆ ಸೀಮಿತವಾಗಿಲ್ಲ. ಸರ್ವ ಧರ್ಮ ಸಮನ್ವಯದ ಮಠ ಇದಾಗಿದೆ ಎಂದು ಅವರು ಹೇಳಿದರು.
ಡಾ. ಶಿವಕುಮಾರ ಸ್ವಾಮೀಜಿ ಅವರು ಬೀದರ್ ಅನ್ನು ಕೇಂದ್ರ ಸ್ಥಾನ ಮಾಡಿಕೊಂಡು ದೇಶದ ಅನೇಕ ರಾಜ್ಯಗಳಲ್ಲಿ ಮಠಗಳನ್ನು ಸ್ಥಾಪಿಸಿ, ವೇದಾಂತ ತತ್ವ, ಸಂದೇಶಗಳನ್ನು ಸಾರುತ್ತಿದ್ದಾರೆ ಎಂದು ಬಣ್ಣಿಸಿದರು.
ಸಾನಿಧ್ಯ ವಹಿಸಿದ್ದ ಡಾ. ಶಿವಕುಮಾರ ಸ್ವಾಮೀಜಿ ಮಾತನಾಡಿ, ಮನುಷ್ಯನ ಜೀವನ ನಾಲ್ಕು ರೀತಿಯಿಂದ ಕೂಡಿದೆ. ಅವು ಆಕೃತಿ, ವಿಕೃತಿ, ಪ್ರಕೃತಿ ಹಾಗೂ ಸಂಸ್ಕøತಿ ಎಂದು ಹೇಳಿದರು.
ಸಂಸ್ಕøತಿಯಿಂದ ಬದುಕುವವನಿಗೆ ಮನುಷ್ಯ ಎನ್ನುತ್ತಾರೆ. ಪ್ರಕೃತಿಗಿಂತ ಮೇಲೆ ಏರಿ ಉತ್ತಮ ಗತಿ ಪಡೆಯಲು ಪರಮಾತ್ಮ ಶರೀರ ಕರುಣಿಸಿದ್ದಾನೆ ಎಂದು ತಿಳಿಸಿದರು.
ಮನುಷ್ಯ ಜನ್ಮ ಸಿಗುವುದು ಬಹಳ ದುರ್ಲಭ. ಕಾರಣ, ಸುಸಂಸ್ಕøತರಾಗಿ ಬಾಳಬೇಕು ಎಂದು ಹೇಳಿದರು.
ಜಡಿಸಿದ್ದ ಸ್ವಾಮೀಜಿ ಮಾತನಾಡಿ, ಶೀಗಳ ಜಯಂತಿಯನ್ನು ಐದು ದಿನ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ನಾನು ಯಾರು, ಎಲ್ಲಿಂದ ಬಂದೆ, ಎಲ್ಲಿಗೆ ಹೋಗಬೇಕು ಎನ್ನುವ ಮೂರು ಪ್ರಶ್ನೆಗಳಿಗೆ ಉತ್ತರ ತಿಳಿಯುವುದೇ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ನುಡಿದರು.
ಕಲಬುರಗಿಯ ಮಾತೆ ಲಕ್ಷ್ಮೀದೇವಿ, ಅದ್ವೈತಾನಂದ ಸ್ವಾಮೀಜಿ, ಮಾತೆ ಅನ್ನಪೂರ್ಣ, ದಯಾನಂದ ಸ್ವಾಮೀಜಿ ಮಾತನಾಡಿದರು.
ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕøತಿಕ ಸಂಘದ ನಿರ್ದೇಶಕ ರೇವಣಸಿದ್ದಪ್ಪ ಜಲಾದೆ, ನಗರಸಭೆ ಸದಸ್ಯರಾದ ಶಶಿಧರ ಹೊಸಳ್ಳಿ, ರಾಜಾರಾಮ ಚಿಟ್ಟಾ, ಕ.ಸಾ.ಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಗೌರವ ಕಾರ್ಯದರ್ಶಿ ಟಿ.ಎಂ. ಮಚ್ಚೆ, ಚಿದಂಬರ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಬಿ.ಜಿ. ಶೆಟಕಾರ್, ಉದಯಬಾನು ಹಲವಾಯಿ, ಶಿವಶರಣಪ್ಪ ಸಾವಳಗಿ, ಶರಣಪ್ಪ ತಿರಲಾಪುರೆ, ಆಡಳಿತಾಧಿಕಾರಿ ಡಾ. ಹಾವಗಿರಾವ್ ಮೈಲಾರೆ, ಇದ್ದರು. ವಿನಾಯಕ ದೇವರು ನಿರೂಪಿಸಿದರು.
ಜಯಂತಿ ಮಹೋತ್ಸವ ಪ್ರಯುಕ್ತ ಮಠದಲ್ಲಿ ನ. 20 ರ ವರೆಗೆ ವಿವಿಧ ಕಾರ್ಯಕ್ರಮ ಜರುಗಲಿವೆ.