ಶಿವಕುಮಾರ ಶ್ರೀಗಳ 114ನೇ ಜಯಂತಿ ಸರಳ ಆಚರಣೆ

ತುಮಕೂರು, ಏ. ೧- ಬಡ ಮಕ್ಕಳಿಗೆ ಅನ್ನ, ಆಶ್ರಯ ನೀಡಿ ಬದುಕಿಗೆ ಬೆಳಕಾಗಿದ್ದ ತ್ರಿವಿಧ ದಾಸೋಹಿ, ನಡೆದಾಡುವ ದೇವರೆಂದೇ ನಾಡಿನ ಉದ್ದಗಲಕ್ಕೂ ಹೆಸರುವಾಸಿಯಾಗಿದ್ದ ಸಿದ್ದಗಂಗಾ ಮಠದ ಶಿವೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ೧೧೪ನೇ ಜನ್ಮ ಜಯಂತಿಯನ್ನು ಯಾವುದೇ ಅದ್ದೂರಿ, ಆಡಂಬರ ಇಲ್ಲದೆ ಅತ್ಯಂತ ಸರಳವಾಗಿ ಎಂದಿನಂತೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆಚರಿಸಲಾಯಿತು.
ಮಹಾಮಾರಿ ಕೊರೊನಾ ೨ನೇ ಅಲೆ ಹರಡದಂತೆ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕ ಸಭೆ, ಸಮಾರಂಭಗಳನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ಶ್ರೀಮಠದಲ್ಲಿ ಲಿಂಗೈಕ್ಯ ಶ್ರೀಗಳ ೧೧೪ನೇ ಜನ್ಮ ಜಯಂತಿ ಅದ್ದೂರಿ ಆಚರಣೆ ಇಲ್ಲದೆ ಎಂದಿನಂತೆ ಶ್ರೀಗಳ ಗದ್ದುಗೆಗೆ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ನೇತೃತ್ವದಲ್ಲಿ ಹರಗುರುಚರಮೂರ್ತಿಗಳ ಸಮ್ಮುಖದಲ್ಲಿ ರುದ್ರಾಭಿಷೇಕ ಹಾಗೂ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ಮುಂಜಾನೆಯೇ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಇಷ್ಟಲಿಂಗ ಪೂಜೆ ನೆರವೇರಿಸಿ ಶ್ರೀಗಳ ಗದ್ದುಗೆಗೆ ಪೂಜೆ ನೆರವೇರಿಸಿ ಆಶೀರ್ವಾದ ಪಡೆದರು.
ಶ್ರೀಮಠದ ರುದ್ರಾಕ್ಷಿ ಮಂಟಪದಲ್ಲಿದ್ದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಕಂಚಿನ ಪುತ್ಥಳಿ ಮೆರವಣಿಗೆಯು ಗದ್ದುಗೆ ಮಂದಿರದ ಮುಂಭಾಗದಿಂದ ಪ್ರಾರಂಭವಾಗಿ ವಸ್ತುಪ್ರದರ್ಶನದ ಆವರಣದವರೆಗೆ ನಡೆಯಿತು. ಮೆರವಣಿಗೆ ಸಾಗಿದುದ್ದಕ್ಕೂ ವೀರಗಾಸೆ, ನಂದಿಧ್ವಜ, ಜವಳಿ ಕುಣಿತ, ಡೊಳ್ಳು ಕುಣಿತ ಬ್ಯಾಂಡ್ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳ ಪ್ರದರ್ಶನ ನೋಡುಗರ ಗಮನ ಸೆಳೆದವು.
ಮೆರವಣಿಗೆಯಲ್ಲಿ ಶ್ರೀ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ ನಾಡಿನ ವಿವಿಧ ಮಠಾಧೀಶರು, ಹರಗುರುಚರಮೂರ್ತಿಗಳು ಪಾಲ್ಗೊಂಡು ಹಿರಿಯ ಶ್ರೀಗಳಿಗೆ ಭಕ್ತಿ ಸಮರ್ಪಿಸಿದರು.
ಕೊರೊನಾ ೨ನೇ ಅಲೆ ಭೀತಿ ಹಿನ್ನೆಲೆಯಲ್ಲಿ ಶ್ರೀಗಳ ೧೧೪ನೇ ಜಯಂತ್ಯೋತ್ಸವನ್ನು ಆಡಂಬರ ಇಲ್ಲದೆ ಸಾಂಪ್ರದಾಯಿಕವಾಗಿ ಆಚರಿಸಿದ್ದರಿಂದ ಭಕ್ತರ ಸಂಖ್ಯೆಯೂ ವಿರಳವಾಗಿತ್ತು. ಆದರೆ ಶ್ರೀಮಠಕ್ಕೆ ಆಗಮಿಸಿದ ಭಕ್ತರಿಗಾಗಿ ಪೂಜ್ಯರ ಬಯಕೆಯಂತೆ ಚಿತ್ರಾನ್ನ, ಪಾಯಸ, ಮೈಸೂರು ಪಾಕ್ ಸೇರಿದಂತೆ ವಿವಿಧ ಬಗೆಯ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಎಂದಿನಂತೆ ಶ್ರೀಮಠದ ಮಕ್ಕಳು ಪ್ರಸಾದ ಸ್ವೀಕರಿಸುವ ಸ್ಥಳದಲ್ಲಿಯೇ ಭಕ್ತರಿಗೂ ಪ್ರಸಾದ ವಿನಿಯೋಗಿಸಲಾಯಿತು.
ಕೊರೊನಾ ನಿಯಮ ಪಾಲಿಸಿ ಆಚರಣೆ
ಇದೇ ಸಂದರ್ಭದಲ್ಲಿ ಮಾತನಾಡಿದ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಕಳೆದ ೩ ವರ್ಷಗಳಿಂದ ಪೂಜ್ಯರ ಭೌತಿಕ ದರ್ಶನ ನಮಗೆ ಇಲ್ಲದಿದ್ದರೂ ಸಹ ಅವರ ಭಾವನಾತ್ಮಕವಾದ ಭಾವನೆಯ ಭಕ್ತಿಯೊಂದಿಗೆ ಸ್ಮರಣೆ ಮಾಡುವ ಮೂಲಕ ನಮ್ಮ ಬದುಕನ್ನು ಹಸನು ಮಾಡಿಕೊಳ್ಳೋಣ ಎಂದರು.
ಶ್ರೀಗಳು ಎಂದೂ ವೈಯಕ್ತಿಕವಾಗಿ ಅದ್ದೂರಿ ಆಡಂಬರದ ಆಚರಣೆ ಮಾಡಿಕೊಳ್ಳುವಂತರೂ ಅಲ್ಲ. ಭಕ್ತರ ಒತ್ತಾಯದ ಮೇರೆಗೆ ಶ್ರೀಗಳ ಹುಟ್ಟುಹಬ್ಬ ಆಚರಣೆಯನ್ನು ಗುರುವಂದನಾ ಮಹೋತ್ಸವವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿತ್ತು ಎಂದರು.
ಶ್ರೀಗಳು ೧೧೧ ವರ್ಷಗಳ ಕಾಲ ತಮ್ಮ ಇಡೀ ಬದುಕನ್ನು ತಪೋಮಯವಾಗಿಸುವ ಜತೆಗೆ ಜ್ಯೋತಿಮಯವಾಗಿ ಬೆಳಗಿ ಲಕ್ಷಾಂತರ ಜನರ ಮನೆಯ ನಂದಾದೀಪವಾಗಿ ಬೆಳಗುತ್ತಿದ್ದಾರೆ. ಲೋಕೋದ್ದಾರಕ್ಕಾಗಿ ಬದುಕು ಸೀಮಿತವಾಗಿಟ್ಟವರ ಬದುಕು ದೊಡ್ಡ ದಿಮ್ಮಿಯಾಗೆ ಇರುತ್ತದೆ. ಅದು ಎಲ್ಲೂ ಮುಳುಗುವುದಿಲ್ಲ. ಇದೇ ರೀತಿ ಶ್ರೀಗಳ ಬದುಕು ಸಹ ಇತ್ತು ಎಂದರು.
ಶ್ರೀಗಳು ಯಾವುದೇ ರೀತಿಯ ಗೌರವಾಧಾರಗಳನ್ನು ಅಪೇಕ್ಷೆ ಪಟ್ಟವರಲ್ಲ. ವೈಯಕ್ತಿವಾಗಿ ಏನನ್ನೂ ಬಯಸದೇ ಸಮಾಜಕ್ಕಾಗಿ ದುಡಿದು ಬದುಕನ್ನು ಮುಡುಪಾಗಿಟ್ಟವರು. ಶೈಕ್ಷಣಿಕವಾಗಿ ಕ್ರಾಂತಿ ಮಾಡಿದ ಪೂಜ್ಯರು ಲಕ್ಷಾಂತರ ಮಕ್ಕಳ ಬದುಕು ಹಸನು ಮಾಡಿದ್ದಾರೆ ಎಂದರು.
ಬದುಕಿನಲ್ಲಿ ಶಿಕ್ಷಣದ ಜತೆಗೆ ಸಂಸ್ಕಾರ ಕಲಿಸಿದ ಶ್ರೀಗಳು ಬದುಕು ಅವಿಸ್ಮರಣೀಯ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ, ಮಾಜಿ ಸಚಿವ ರಾಮಚಂದ್ರೇಗೌಡ, ಸಂಸದ ಜಿ.ಎಸ್. ಬಸವರಾಜು, ಶಾಸಕ ಜಿ.ಬಿ. ಜ್ಯೋತಿಗಣೇಶ್, ಮೈದಾಳ ಗ್ರಾ.ಪಂ. ಅಧ್ಯಕ್ಷೆ ಮಾಲಾ ಮಂಜುನಾಥ್, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ವಂಶಿಕೃಷ್ಣ, ಜಿ.ಪಂ. ಸಿಇಓ ಗಂಗಾಧರಸ್ವಾಮಿ, ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ, ಉಪವಿಭಾಗಾಧಿಕಾರಿ ಅಜಯ್, ತಹಶೀಲ್ದಾರ್ ಮೋಹನ್ ಸೇರಿದಂತೆ ಮತ್ತಿತರ ಗಣ್ಯರು ಶ್ರೀಗಳ ಗದ್ದುಗೆ ದರ್ಶನ ಪಡೆದು ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.

೧೧೪ ಮಕ್ಕಳಿಗೆ ನಾಮಕರಣ
ಡಾ. ಶ್ರೀ ಶಿವಕುಮಾರ ಮಹಾಸ್ವಾಮೀಜಿ ಅನ್ನದಾ ಸೇವಾ ಟ್ರಸ್ಟ್ ವತಿಯಿಂದ ನಡೆದಾಡುವ ದೇವರು, ತ್ರಿವಿಧ ದಾಸೋಹಮೂರ್ತಿ, ಪದ್ಮಭೂಷಣ್ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ೧೧೪ನೇ ಜಯಂತ್ಯೋತ್ಸವದ ಅಂಗವಾಗಿ ೧೧೪ ಮಕ್ಕಳಿಗೆ ಶಿ ಅಕ್ಷರದಿಂದ ಪ್ರಾರಂಭವಾಗುವ ಹೆಸರುಗಳನ್ನು ನಾಮಕರಣ ಮಾಡಲಾಯಿತು.
ಶ್ರೀಗಳ ೧೧೪ನೇ ಜನ್ಮ ಜಯಂತ್ಯೋತ್ಸವದ ಪ್ರಯುಕ್ತ ಶ್ರೀಮಠದಲ್ಲಿ ಹಮ್ಮಿಕೊಂಡಿದ್ದ ಈ ಉಚಿತ ನಾಮಕರಣ ಮಹೋತ್ಸವದಲ್ಲಿ ಪಾಲ್ಗೊಂಡಿದ್ದವರಿಗೆ ಹೊಸ ತೊಟ್ಟಿಲು, ತೊಟ್ಟಿಲ ಹಾಸಿಗೆ, ತೊಟ್ಟಿಲ ದಿಂಬು ಹಾಗೂ ಶ್ರೀಗಳ ಭಾವಚಿತ್ರವನ್ನು ಉಚಿತವಾಗಿ ನೀಡಲಾಯಿತು.