ಶಿವಕುಮಾರ ವಿರುದ್ಧ ಜಾರಕಿಹೊಳಿ ಅವಾಚ್ಯವಾಗಿ ನಿಂದನೆ: ಗುತ್ತೇದಾರ ಖಂಡನೆ

ಕಲಬುರಗಿ.ಮಾ.28:ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂದಿಸಿದಂತೆ ಖುದ್ದಾಗಿ ಸಂತ್ರಸ್ಥೆ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿ ಪ್ರಕರಣ ದಾಖಲು ಮಾಡಿದರೂ ಕೂಡಾ ಜಾರಕಿಹೊಳಿಯವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮೇಲೆ ಆಪಾದನೆ ಮಾಡುತ್ತಾ ಏಕವಚನದಲ್ಲಿ ಕೀಳುಮಟ್ಟದ ಶಬ್ದಗಳನ್ನು ಉಪಯೋಗಿಸಿ ಮಾತನಾಡುತ್ತಿರುವದು ಒಬ್ಬ ಮಾಜಿ ಸಚಿವರಿಗೆ ಶೋಭೆ ತರುವಂತದ್ದಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜಗದೇವ್ ಗುತ್ತೇದಾರ್ ಅವರು ಖಂಡಿಸಿದ್ದಾರೆ.
ರಮೇಶ್ ಜಾರಕಿಹೊಳಿಯವರು ನಡೆಸಿದ ಕೃತ್ಯವನ್ನು ಕರ್ನಾಟಕ ರಾಜ್ಯವಲ್ಲದೇ ಇಡೀ ಭಾರತ ದೇಶದ ಜನತೆಯೇ ದೂರದರ್ಶನದಲ್ಲಿ ನೋಡಿದೆ. ಅದೇ ರೀತಿಯಾಗಿ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿಯೂ ಕೂಡಾ ವೈರಲ್ ಆಗಿದೆ. ಮತ್ತು ಎಲ್ಲ ಪತ್ರಿಕೆಗಳಲ್ಲಿಯೂ ಕೂಡಾ ಪ್ರಕಟಗೊಂಡಿದೆ. ಇದಕ್ಕೆ ರಮೇಶ್ ಜಾರಕಿಹೊಳಿಯವರು ಅಪರಾಧಿಯೋ ಅಥವಾ ನಿರಪರಾಧಿಯೋ ಎಂಬುವದು ಮುಂದೆ ನ್ಯಾಯಾಲಯದಲ್ಲಿ ತೀರ್ಮಾನಿಸಿ ನ್ಯಾಯಾಲಯ ತೀರ್ಮಾನ ನೀಡಲಿದೆ. ಅದೆಲ್ಲವನ್ನು ಬಿಟ್ಟು ರಮೇಶ ಜಾರಕಿಹೊಳಿಯವರು ಕೆಪಿಸಿಸಿ ಅಧ್ಯಕ್ಷರ ಬಗ್ಗೆ ಹಗುರವಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿರುವುದು ಖಂಡನೀಯ ಎಂದು ಅವರು ಹೇಳಿಕೆಯಲ್ಲಿ ಆಕ್ಷೇಪಿಸಿದ್ದಾರೆ.
ರಾಜಕೀಯದಲ್ಲಿ ಒಬ್ಬರಿಗೊಬ್ಬರು ಟೀಕೆ ಮಾಡುವ ಮೂಲಕ ಹೇಳಿಕೆ ನೀಡುವದು ಸಹಜ. ಆದರೆ ಕೀಳುಮಟ್ಟದ ಪದಗಳನ್ನು ಬಳಸಿ ಮಾತನಾಡುವುದು ರಾಜಕೀಯ ನಾಯಕರಿಗೆ ಶೋಭೆ ತರುವಂತದ್ದಲ್ಲ. ಅದಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮೇಲೆ ನಾಲಿಗೆ ಹರಿಬಿಟ್ಟು ಹೇಳಿಕೆ ನೀಡುತ್ತಿರುವ ರಮೇಶ್ ಜಾರಕಿಹೊಳಿಯವರ ಹೇಳಿಕೆಗಳನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ತೀವ್ರವಾಗಿ ಖಂಡಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.