ಶಿವಕುಮಾರ ಕಟ್ಟೆ ಅವರ `ನಾಲ್ದೇರಾ’ ಕೃತಿ ಬಿಡುಗಡೆ ನ.1ರಂದು

ಬೀದರ, ಅ.31: ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಕರ್ತವ್ಯಾಧಿಕಾರಿಗಳಾದ ಶಿವಕುಮಾರ ಕಟ್ಟೆ ಅವರ ಪ್ರವಾಸ ಕಥನ ‘ನಾಲ್ದೇರಾ’ ಕೃತಿಯ ಬಿಡುಗಡೆಯು ನ.1ರ ಬೆಳಗ್ಗೆ 11 ಗಂಟೆಗೆ ಬೀದರ ನಗರದ ಕೃಷಿ ಕಾಲೋನಿಯಲ್ಲಿರುವ ನಿವಾಸದಲ್ಲಿ ಜರುಗಲಿದೆ.

ಪಶು ಸಂಗೋಪನೆ, ವಕ್ಫ್, ಹಜ್ ಹಾಗೂ ಬೀದರ-ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಕೃತಿ ಲೋಕಾರ್ಪಣೆ ಮಾಡುವರು.

`ಸಾಹಿತಿ ಸಂಗಮ’ ಕಾರ್ಯಕ್ರಮದಡಿ ಜಿಲ್ಲೆಯ ವಿವಿಧ ಸಾಹಿತಿಗಳ ಮನೆಗೆ ಭೇಟಿ ನೀಡಿ, ಸಾಹಿತ್ಯ ಕೃತಿಗಳನ್ನು ವಿತರಿಸಿ ಸನ್ಮಾನಿಸುವ ಕಾರ್ಯಕ್ರಮದ ನಡುವೆ ಚಹಾ ವಿರಾಮಕ್ಕಾಗಿ ಶಿವಕುಮಾರ ಕಟ್ಟೆ ಅವರ ಮನೆಗೆ ತೆರಳುವ ಸಚಿವರು, ಸರಳವಾಗಿ ಮತ್ತು ಕೋವಿಡ್ ನಿಯಮಗಳನ್ನು ಅನುಸರಿಸಿ ಕೃತಿ ಬಿಡುಗಡೆ ಮಾಡಲಿದ್ದಾರೆ.

ಸಚಿವರೊಂದಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ ಚನ್ನಶೆಟ್ಟಿ ಮತ್ತು ಪದಾಧಿಕಾರಿಗಳು ಹಾಗೂ ಹಿರಿಯ ಸಾಹಿತಿಗಳು ಭಾಗವಹಿಸುವರು.

ಬೀದರ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಶಿವಕುಮಾರ ಕಟ್ಟೆಯವರು ತರಬೇತಿ ನಿಮಿತ್ತ ಉತ್ತರ ಹಾಗೂ ಪೂರ್ವ ಭಾರತದ ರಾಜ್ಯಗಳಲ್ಲಿ ಕೈಗೊಂಡಿದ್ದ ಪ್ರವಾಸದ ವೇಳೆ ತಾವು ಕಂಡ ರಮಣೀಯ ದೃಶ್ಯಗಳು, ನಿಬ್ಬೆರಗಾಗಿಸುವ ಐತಿಹಾಸಿಕ ತಾಣಗಳು, ವರ್ಣನೆಗೆ ನಿಲುಕದ ಪ್ರಕೃತಿ ಸೌಂದರ್ಯ, ತಾವು ಭೇಟಿ ನೀಡುವ ಸ್ಥಳಗಳ ಐತಿಹಾಸಿಕ ಮಹತ್ವವನ್ನು ಅತ್ಯಂತ ರಸವತ್ತಾಗಿ ಪ್ರವಾಸ ಕಥನದಲ್ಲಿ ದಾಖಲಿಸಿದ್ದಾರೆ. ಅಲ್ಲದೇ ಪ್ರವಾಸದ ಸಂದರ್ಭದಲ್ಲಿ ಮಿತ್ರರೊಂದಿಗಿನ ಒಡನಾಟ, ತರಬೇತಿಯ ಅದ್ಭುತ ಕ್ಷಣಗಳು, ಆಹಾರ ಪದ್ಧತಿ ಹಾಗೂ ಪ್ರವಾಸದ ರೋಮಾಂಚಕ ಕ್ಷಣಗಳನ್ನು`ನಾಲ್ದೇರಾ’ ಕೃತಿಯಲ್ಲಿ ಸುಂದರವಾಗಿ ಬಣ್ಣಿಸಿದ್ದಾರೆ.