ಉತ್ಸವ ಬೇಡ : ಡಿಕೆಶಿ

ಬೆಂಗಳೂರು,ಜು.೧೩- ಯಾವುದೇ ಉತ್ಸವ, ವ್ಯಕ್ತಿ ಪೂಜೆಯಲ್ಲಿ ನಂಬಿಕೆ ಇಲ್ಲ, ನನ್ನ ಪೂಜೆ ಬೇಡ, ಪಕ್ಷದ ಪೂಜೆ ಮಾಡಿ ಎಂದು ಕಾರ್ಯಕರ್ತರಿಗೆ ಹೇಳಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.
ಸಿದ್ದರಾಮೋತ್ಸವ-೭೫ ಮಾದರಿಯಲ್ಲಿ ಶಿವಕುಮಾರೋತ್ಸವ-೬೦ ನಡೆಸಬೇಕು ಎಂಬ ಪಕ್ಷದ ಕಾರ್ಯಕರ್ತರೊಬ್ಬರ ಮನವಿಗೆ ಪ್ರತಿಕ್ರಿಯಿಸಿದ ಅವರು, ಕೆಪಿಸಿಸಿ ಅಧ್ಯಕ್ಷ ಆದ ದಿನವೇ ವ್ಯಕ್ತಿ ಪೂಜೆ ಬೇಡ ಎಂದು ಹೇಳಿದ್ದೇನೆ. ತಮಗೆ ಯಾವುದೇ ಉತ್ಸವ ಬೇಡ, ಪಕ್ಷವನ್ನು ವಿಧಾನಸೌಧದಲ್ಲಿ ಕೂರಿಸುವ ಉತ್ಸವವಷ್ಟೇ ತಮಗೆ ಮುಖ್ಯ ಎಂದರು.
ಯಾರೋ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಶಿವಕುಮಾರೋತ್ಸವದ ಬಗ್ಗೆ ಮಾತನಾಡಿದರೆ ಅದಕ್ಕೂ ನನಗೂ ಸಂಬಂಧವಿಲ್ಲ ಎಂದರು.
ಕಾಂಗ್ರೆಸ್ ಪಕ್ಷ ಚುನಾವಣೆ ನಂತರ ಇರಲ್ಲ ಎಂಬ ಸಚಿವ ಆರ್. ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ೧೦ ವರ್ಷದ ಕಾಲ ಬಿಜೆಪಿ ಅಧಿಕಾರದಲ್ಲಿ ಇದ್ದರೆ ಸಾಕು ಎಂದು ಅಶೋಕ್ ಹೇಳಿದ್ದಾರೆ. ಆಮೇಲಾದರೂ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಅವರು ಒಪ್ಪಿಕೊಂಡಿದ್ದಾರೆ. ಅವರ ಹೇಳಿಕೆಯನ್ನು ಸ್ವಾಗತಿಸುತ್ತೇನೆ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ಶಾಸಕಿ ಲಕ್ಷ್ಮಿಹೆಬ್ಬಾಳ್ಕರ್ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರನ್ನು ಭೇಟಿ ಮಾಡಿರುವುದರಲ್ಲಿ ವಿಶೇಷವೇನೂ ಇಲ್ಲ. ಸಮುದಾಯದ ಹಿರಿಯರಾಗಿರುವ ಯಡಿಯೂರಪ್ಪರವರನ್ನು ಭೇಟಿ ಮಾಡಿ ಸಮುದಾಯಕ್ಕೆ ಸಂಬಂಧಿಸಿದಂತೆ ಕೆಲ ವಿಚಾರಗಳನ್ನು ಚರ್ಚಿಸಿದ್ದಾರೆ ಅಷ್ಟೇ ಎಂದರು.
ಶಿವಕುಮಾರೋತ್ಸವ ಪತ್ರ
ಸಿದ್ದರಾಮೋತ್ಸವ ಮಾದರಿಯಲ್ಲೇ ಶಿವಕುಮಾರೋತ್ಸವ ಮಾಡಿ ಎಂದು ಡಿ.ಕೆ.ಶಿವಕುಮಾರ್ ಅವರ ಶಿಷ್ಯ ನಾಗಮಂಗಲ ತಾಲ್ಲೂಕಿನ ಹೊಣಕೆರೆ ಗ್ರಾಮಪಂಚಾಯ್ತಿ ಮಾಜಿ ಅಧ್ಯಕ್ಷ ಜೆ.ಸಿ ರಾಜು ಸಿದ್ದರಾಮಯ್ಯ ಅಮೃತೋತ್ಸವ ಸಮಿತಿಗೆ ಪತ್ರ ಬರೆದಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ೮೫ನೇ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಮಾದರಿಯಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ೬೦ನೇ ವರ್ಷದ ಹುಟ್ಟುಹಬ್ಬ ಆಚರಿಸುವಂತೆ ಅವರು ಪಕ್ಷದ ಹಿರಿಯ ನಾಯಕರುಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.