ಶಿಳ್ಳೇಕ್ಯಾತ ಸಮುದಾಯದವರಿಗೆ ನಿವೇಶನ ಕಲ್ಪಿಸಲು ಡಿಎಸ್ಎಸ್ ಆಗ್ರಹ

ದಾವಣಗೆರೆ,ಏ.4- ಹೊನ್ನಾಳಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ದೇವನಾಯಕಹಳ್ಳಿ ಬಳಿ ತೋಟಗಾರಿಕೆ ಇಲಾಖೆ ಹಿಂಭಾಗದಲ್ಲಿ 30 ವರ್ಷಗಳಿಂದ ಗುಡಿಸಲು ಹಾಗೂ ತಾತ್ಕಾಲಿಕ ಶೇಡ್ ನಿರ್ಮಿಸಿಕೊಂಡು ವಾಸ ಮಾಡುತ್ತಿರುವ ಪರಿಶಿಷ್ಟ (ಶಿಳ್ಳೇಕ್ಯಾತ) ಜನಾಂಗದ ವಸತಿ ಹೀನರಿಗೆ ನಿವೇಶನ ಮಂಜೂರು ಮಾಡುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ  ವತಿಯಿಂದ ಅಪರ ಜಿಲ್ಲಾಧಿಕಾರಿ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ಈ ವೇಳೆ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ್ ಮಾತನಾಡಿ, ದೇವನಾಯಕನಹಳ್ಳಿಯಲ್ಲಿ ಸುಮಾರು 30 ವರ್ಷಗಳಿಂದ ಪರಿಶಿಷ್ಟ ಜಾತಿಗೆ ಸೇರಿದ ಶಿಳ್ಳೇಕ್ಯಾತ ಸಮುದಾಯದ 80 ಕುಟುಂಬಗಳು ಗುಡಿಸಲು ಹಾಗೂ ತಾತ್ಕಾಲಿಕ ಶೆಡ್‌ಗಳಲ್ಲಿ ವಾಸ ಮಾಡುತ್ತಿದ್ದಾರೆ. ಈ ಶೆಡ್‌ಗಳಲ್ಲಿ ಮಹಿಳೆಯರು, ಮಕ್ಕಳು, ವಯೋವೃದ್ಧರು ವಾಸವಾಗಿದ್ದು, ಈ ಕುಟುಂಬದವರಿಗೆ ಯಾವುದೇ ಚರಾಸ್ತಿ-ಸ್ಥಿರಾಸ್ತಿ ಇಲ್ಲದ, ಕೂಲಿ ಮಾಡಿಕೊಂಡು ಜೀವನ ನಡೆಸುತ್ತಾ ಸುಮಾರು ವರ್ಷಗಳಿಂದ ಹೊನ್ನಾಳಿ ಪಟ್ಟಣದಲ್ಲಿ ವಾಸವಾಗಿದ್ದು, ವಿದ್ಯುತ್‌ ಸಂಪರ್ಕ, ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯ ಇಲ್ಲದೆ ಬದುಕುತ್ತಿದ್ದಾರೆ. ಜೊತೆಗೆ ಮಕ್ಕಳು ಶಾಲೆಗೆ ಸುಮಾರು ಒಂದು ಕಿ.ಮೀ. ದೂರದವರೆಗೆ ನಡೆದುಕೊಂಡು ಹೋಗಿ ಬರಬೇಕಾದ ದುಸ್ಥಿತಿ ಇದೆ ಎಂದರು.ಗುಡಿಸಲು ಹಾಗೂ ಶೆಡ್‌ಗಳನ್ನು ಹಾಕಿಕೊಂಡು ಜೀವನ ನಡೆಸುತ್ತಿರುವ ಕುಟುಂಬಗಳಿಗೆ ತಾಲ್ಲೂಕು ಹಾಗೂ ಜಿಲ್ಲಾಡಳಿತ ಹೊನ್ನಾಳಿ ಪಟ್ಟಣದಲ್ಲಿ ಸೂಕ್ತ ಸರ್ಕಾರಿ ಭೂಮಿ ಗುರುತಿಸಿ ನಿವೇಶನ ಮಂಜೂರು ಮಾಡಿ ಹಕ್ಕು ಪತ್ರ ನೀಡಬೇಕೆಂದು ಆಗ್ರಹಿಸಿದ ಅವರು, ನಿವೇಶನ ಮಂಜೂರು ಮಾಡದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಈ ವೇಳೆ ಡಿಎಸ್ಎಸ್ ಹೊನ್ನಾಳಿ ತಾಲೂಕು ಸಂಚಾಲಕ ಬೆನಕನಹಳ್ಳಿ ಪರಮೇಶಪ್ಪ, ಲಿಂಗರಾಜು ಎಂ.ಗಾಂಧಿನಗರ, ಮಂಜುನಾಥ್ ಎಲೆಕ್ಟ್ರಿಕಲ್, ಚಿತ್ತಾನಹಳ್ಳಿ ನಾಗರಾಜ, ದೇವನಾಯಕನಹಳ್ಳಿಯ  ಖುಷಿ, ಪ್ರೇಮ, ಶ್ರುತಿ ಮತ್ತಿತರರಿದ್ದರು.