ಶಿಲ್ಪಕಲೆಗೆ ಅಮರಶಿಲ್ಪಿ ಜಕಣಾಚಾರಿ ಕೊಡುಗೆ ಅಪಾರ:ನಾಗರಾಜ ಪತ್ತಾರ


ಸಂಜೆವಾಣಿ ವಾರ್ತೆ
ಹೊಸಪೇಟೆ ಜ.02: ಶಿಲ್ಪಕಲೆ ನಮ್ಮ ದೇಶದ ಸಂಸ್ಕೃತಿ ಹಾಗೂ ಹೆಮ್ಮೆಯಾಗಿದ್ದು, ಶಿಲ್ಪಕಲೆಗೆ ಅಮರಶಿಲ್ಪಿ ಜಕಣಾಚಾರಿ ಅವರ ಕೊಡುಗೆ ಅಪಾರವಾಗಿದೆ ಎಂದು ನಿವೃತ್ತ ಉಪನ್ಯಾಸಕ ನಾಗರಾಜ ಪತ್ತಾರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹೊಸಪೇಟೆ ನಗರಸಭೆ ಹಾಗೂ ವಿಶ್ವಕರ್ಮ ಸಮಾಜದ ಸಹಯೋಗದಲ್ಲಿ ಸೋಮವಾರ ನಗರದ ಬಳ್ಳಾರಿ ರಸ್ತೆಯ ಕಾಳಿಕಮ್ಮ ದೇವಸ್ಥಾನದಲ್ಲಿ ಆಯೋಜಿಸಲಾದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಶಿಲ್ಪಿಗಳು ದೇಶ ಹಾಗೂ ಈ ನಾಡಿನ ಸಾಂಸ್ಕೃತಿ, ರಾಜಕೀಯ, ಶೈಕ್ಷಣಿಕ ಮೂಲ ಪರಂಪರೆಗಳನ್ನು ಕಲೆ ಮತ್ತು ವಾಸ್ತುಶಿಲ್ಪದಲ್ಲಿ ಸೆರೆಹಿಡಿದಿಟ್ಟದ್ದಾರೆ. ಅಂತಹ ಶಿಲ್ಪಿಗಳಲ್ಲಿ ಅಮರಶಿಲ್ಪಿ ಜಕಣಾಚಾರಿ ಯವರು ಪ್ರಮುಖರಾಗಿದ್ದಾರೆ.ಜಕಣಾಚಾರಿ ಅವರು ಒಬ್ಬ ಐತಿಹಾಸಿಕ ವ್ಯಕ್ತಿಯಾಗಿದ್ದಾರೆ. ಹಲವಾರು ರಾಜಮನೆತನಗಳು ಆಳ್ವಿಕೆಯ ಪ್ರತಿಫಲವಾಗಿ ಶಿಲ್ಪ ಪರಂಪರೆಯಲ್ಲಿ ಕರ್ನಾಟಕವು ವಿಶ್ವವಿಖ್ಯಾತಿಯಾಗಿದೆ. ಹಳೇಬೀಡಿನಲ್ಲಿರು ಹೊಯ್ಸಳೇಶ್ವರ ಹಾಗೂ ಬೇಲೂರಿನಚನ್ನಕೇಶ್ವರದೇವಾಲಯಗಳು, ವಿಜಯನಗರ ಸಾಮ್ರಾಜ್ಯದ ಹಂಪಿ ಹಾಗೂ ರಾಜ್ಯದ ಇತರ ಐತಿಹಾಸಿಕ ಸ್ಥಳಗಳು ಜಗತ್ ಪ್ರಸಿದ್ಧವಾಗಿದ್ದು, ಕರುನಾಡಿನ ಶಿಲ್ಪಗಳ ವೈಭವವನ್ನು ನೋಡಲು ವಿಶ್ವದಾದ್ಯಂತ ಎಲ್ಲಾ ಪ್ರವಾಸಿಗರು ಭೇಟಿ ನೀಡಿ, ನಮ್ಮ ಸಂಸ್ಕೃತಿಯನ್ನು ಕೊಂಡಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ವಿಶ್ವಜಿತ್ ಮೆಹ್ತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣವರ, ಜಿಲ್ಲಾಧಿಕಾರಿಗಳ ಕಾರ್ಯಲಯದ ತಹಶೀಲ್ದಾರ್ ಷನ್ಮುಖ ಹಾಗೂ ಸಮಾಜದ ಅಧ್ಯಕ್ಷ ಸಿ. ರಾಜಣ್ಣ, ಪ್ರಧಾನ ಕಾರ್ಯದರ್ಶಿ ಸುರೇಶ ಮುಖಂಡರಾದ ಗೋವಿಂದರಾಜು, ವಿ.ಶಂಕರಾಚಾರಿ, ಸಿದ್ದೇಶ, ನಾಗೇಶ, ಎಂ.ಎಸ್.ರಾಜಶೇಖರ. ರಾಮಲಿಂಗ ಹಾಗೂ ಇತರರು ಪಾಲ್ಗೊಂಡಿದ್ದರು.