ಶಿಲುಬೆ ಕಟ್ಟೆ ಧ್ವಂಸ: ಕ್ರಮಕ್ಕೆ ಜಾಗೀರದಾರ್ ಆಗ್ರಹ

ಬೀದರ್:ಎ.29: ತಾಲ್ಲೂಕಿನ ಸಿಂದೋಲ್ ಹೊರವಲಯದಲ್ಲಿನ ಕಲ್ವೇರಿ ಶಿಲುಬೆ ಕಟ್ಟೆ ಧ್ವಂಸಗೊಳಿಸಿದ ಕಿಡಿಗೇಡಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಂಜಯ್ ಜಾಗೀರದಾರ್ ಆಗ್ರಹಿಸಿದ್ದಾರೆ.

ಯಾರೋ ಕಿಡಿಗೇಡಿಗಳು ಕಬ್ಬಿಣದ ಸರಳು ಹಾಗೂ ಕಲ್ಲುಗಳಿಂದ ಹೊಡೆದು ಶಿಲುಬೆ ಕಟ್ಟೆ ಧ್ವಂಸಗೊಳಿಸಿದ್ದಾರೆ. ಕ್ರೈಸ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಹೇಳಿದ್ದಾರೆ.

ಆರೋಪಿಗಳನ್ನು ಕೂಡಲೇ ಬಂಧಿಸಿ, ಜಿಲ್ಲೆಯಿಂದ ಗಡಿಪಾರು ಮಾಡಬೇಕು. ವಿಳಂಬ ಮಾಡಿದ್ದಲ್ಲಿ ಜಿಲ್ಲೆಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಭೇಟಿ: ಶಿಲುಬೆ ಕಟ್ಟೆ ಧ್ವಂಸಗೊಳಿಸಿದ ಸುದ್ದಿ ತಿಳಿಯುತ್ತಿದ್ದಂತೆಯೇ ಜಾಗೀರದಾರ್ ಅವರು ಸ್ಥಳಕ್ಕೆ ಭೇಟಿ ನೀಡಿದರು. ಮನ್ನಳ್ಳಿ ಠಾಣೆ ಪೊಲೀಸರಿಗೆ ಸಂದೇಶ ರವಾನಿಸಿದರು.

ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಶನಿವಾರದ ಒಳಗೆ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪಿಎಸ್‍ಐ ಭರವಸೆ ನೀಡಿದ್ದಾರೆ ಎಂದು ಸಂಜಯ್ ಜಾಗೀರದಾರ್ ತಿಳಿಸಿದ್ದಾರೆ.

ಪ್ರಮುಖರಾದ ಜಾಕೋಬ್ ಮುಸ್ತಾಪುರಕರ್, ಜಯಕುಮಾರ, ಶಿವಕುಮಾರ, ಥಾಮ್ಸನ್, ಸಂಪತ್, ಸ್ವಾಮಿದಾಸ್, ಪರಿಶುದ್ಧ, ಪಾಸ್ಟರ್ ಪ್ರಕಾಶ, ಮನೋಹರ, ಯೇಶಪ್ಪ, ಸುಂದರ್, ರಾಮು, ಯೇಸುದಾಸ್, ಜೋಸೆಫ್ ಕೊಡ್ಡಿಕರ್, ರಾಜು ಕಡ್ಯಾಳ್, ಸನ್ನಿ ಕಾಡವಾದ್, ಪ್ರವೀಣ ಗುತ್ತೇದಾರ್, ವಿಲಿಯಂ ಮೊದಲಾದವರು ಇದ್ದರು.