ಶಿಬಿರದಲ್ಲಿ ಅದ್ಭುತ ಕಲಾಕೃತಿಗಳು ಹೊರಹೊಮ್ಮಲಿ:ವೀರಣ್ಣಾ ಮಾ. ಅರ್ಕಸಾಲಿ

ಕಲಬುರಗಿ.ನ.18:ಹದಿನೈದು ದಿನಗಳ ಕಾಲ ಕಲಬುರಗಿ ರಂಗಾಯಣದಲ್ಲಿ ನಡೆಯಲಿರುವ ಶಿಲ್ಪಕಲಾ ಶಿಬಿರದಲ್ಲಿ ನಾಡಿನ ಹಿರಿಯ ಹಾಗೂ ಕಿರಿಯ ಶಿಲ್ಪ ಕಲಾವಿದರ ಮೇಳೈವದೊಂದಿಗೆ ಅದ್ಭುತ ಕಲಾಕೃತಿಗಳು ಹೊರಹೊಮ್ಮಲಿ ಎಂದು ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ವೀರಣ್ಣಾ ಮಾ. ಅರ್ಕಸಾಲಿ ಆಶಯ ವ್ಯಕ್ತಪಡಿಸಿದರು.
ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಮತ್ತು ಕಲಬುರಗಿ ರಂಗಾಯಣ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ಇಲ್ಲಿನ ರಂಗಾಯಣ ಕಚೇರಿಯಲ್ಲಿ ಆಯೋಜಿಸಲಾದ ಸಿಮೆಂಟ್ ಮತ್ತು ಫೈಬರ್ ಶಿಲ್ಪ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಲಬುರಗಿ ರಂಗಾಯಣದ ಕೋರಿಕೆಯಂತೆ ಅಕಾಡೆಮಿಯು ಈ ಬಾರಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ರಾಜ್ಯಮಟ್ಟದ ಶಿಲ್ಪಕಲಾ ಶಿಬಿರ ಆಯೋಜಿಸಿದೆ. ಹಿಂದೆಲ್ಲ ಪ್ರತಿ ಬಾರಿ ಆಯ್ಕೆ ಮಾಡಿದ ಕಲಾವಿದರನ್ನೆ ಆಯ್ಕೆ ಮಾಡಲಾಗುತ್ತದೆ ಎಂಬ ಆರೋಪವಿತ್ತು. ಆದರೆ ಈ ಬಾರಿ ಅಕಾಡೆಮಿಯೂ ಸಂಪೂರ್ಣವಾಗಿ ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಶಿಬಿರದಲ್ಲಿ ಭಾಗವಹಿಸಿರುವ ನಾಡಿನ ಕಲಾವಿದರು ಇಲ್ಲಿನ ಶಿಲ್ಪಕಲೆಯ ಸಂಸ್ಕøತಿ, ಪರಂಪರೆ, ಕಲಾ ವೈಭವವನ್ನು ಅರಿತು ಉತ್ತಮ ಕಲಾಕೃತಿಗಳನ್ನು ರಚಿಸಬೇಕು ಎಂದು ಕಲಾವಿದರಿಗೆ ಕರೆ ನೀಡಿದರು.
ಶಿಬಿರ ಉದ್ಘಾಟಿಸಿ ಮಾತನಾಡಿದ ಹಿರಿಯ ಕಲಾವಿದ ಡಾ. ಎ.ಎಸ್.ಪಾಟೀಲ ಕಲಬುರಗಿಯಲ್ಲಿ ಕೇವಲ ಚಿತ್ರಕಲಾ ಶಿಬಿರ ನಡೆಯುತ್ತಿದ್ದವು, ಇದೀಗ ರಂಗಾಯಣದ ಸಾರಥ್ಯದಲ್ಲಿ ಸಿಮೆಂಟ್ ಮತ್ತು ಫೈಬರ್ ಕುರಿತ ಶಿಲ್ಪ ಶಿಬಿರ ಆಯೋಜಿಸಿರುವುದು ತುಂಬಾ ಸಂತಸವಾಗಿದೆ. ಡಾ.ಸಿದ್ದಯ್ಯ ಪುರಾಣಿಕ ಅವರ ಕಲಾಕೃತಿಯೂ ಈ ಸಂದರ್ಬದಲ್ಲಿ ಮೂಡಿ ಬರಲಿ ಎಂದರು.
ಕಲಬುರಗಿ ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಮಾತನಾಡುತ್ತಾ ಕಲೆಗೆ ಜೀವಂತಿಕೆ ನೀಡುವ ಏಕಮಾತ್ರ ಕಲೆ ಎಂದರೆ ಅದು ಶಿಲ್ಪಕಲೆಯಾಗಿದೆ. 15 ದಿನಗಳ ಶಿಬಿರದಲ್ಲಿ ನಾಡು ಹಾಗೂ ರಾಷ್ಟ್ರ ಕಂಡ ಖ್ಯಾತ ಕಲಾವಿದ ಡಾ.ಎಸ್.ಎಂ. ಪಂಡಿತ್ ಅವರ ಎರಡು ಭಾವಚಿತ್ರಗಳು ಶಿಲ್ಪದಲ್ಲಿ ಅರಳಬೇಕು ಎಂದು ಕಲಾವಿದರಲ್ಲಿ ಮನವಿ ಮಾಡಿದರು. ಎರಡು ಶಿಲ್ಪಮೂರ್ತಿಗಳನ್ನು ರಂಗಮಂದಿರ ಮತ್ತು ರಂಗಾಯಣದಲ್ಲಿ ಪ್ರತಿಷ್ಠಾಪಿಸುವ ಇಚ್ಛೆ ಹೊಂದಿದ್ದು, ಇದರಿಂದ ಈ ಸಂಸ್ಥೆಗಳ ಮೆರಗು ಹೆಚ್ಚಲಿದೆ. ತಮ್ಮ ಅವಧಿಯಲ್ಲಿ ನಾಟಕೋತ್ಸವ, ವ್ಯಕ್ತಿ ಪರಿಚಯ ಸೇರಿದಂತೆ ಹಲವಾರು ಕ್ರಿಯಾತ್ಮಕ ರಂಗ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಒಟ್ಟಾರೆ ಕಲಾವಿದರನ್ನು ಆಕರ್ಷಿಸುವಲ್ಲಿ ರಂಗಾಯಣ ಯಶಸ್ಸು ಕಾಣುತ್ತಿದೆ ಎಂದರು.
15 ದಿನಗಳ ಶಿಬಿರ: ನವೆಂಬರ್ 18 ರಿಂದ ಡಿಸೆಂಬರ್ 2ರ ವರೆಗೆ 15 ದಿನಗಳ ಕಾಲ ನಡೆಯಲಿರುವ ಶಿಬಿರದಲ್ಲಿ ರಾಜ್ಯದ ವಿವಿಧ ಜಿಲ್ಲೆಯ ಒಟ್ಟು 30 ಹಿರಿಯ ಹಾಗೂ ಸಹಾಯಕ ಶಿಲ್ಪ ಕಲಾವಿದರು ಭಾಗವಹಿಸಿದ್ದು, ಶಿಬಿರದ ನಿರ್ದೇಶಕ ಬೆಂಗಳೂರಿನ ಆರ್. ವೇಣುಗೋಪಾಲ ಅವರು ಶಿಬಿರಾರ್ಥಿಗಳಿಗೆ ತರಬೇತಿ ನೀಡಲಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಸದಸ್ಯ ನವೀನ್ ಎಸ್. ಕಡ್ಲಾಕರ್, ಶಿಬಿರದ ನಿರ್ದೇಶಕ ಆರ್.ವೇಣುಗೋಪಾಲ ಸೇರಿದಂತೆ ಶಿಲ್ಪ ಕಲಾವಿದರು ಇದ್ದರು.
ರಂಗಾಯಣದ ಆಡಳಿತಾಧಿಕಾರಿ ಜಗದೀಶ್ವರಿ ಶಿವಕೇರಿ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರು ವಂದಿಸಿದರು.