ಶಿಥಿಲ ಕೊಠಡಿಗಳ ತೆರವಿಗೆ ಅನುಮತಿ -ಪರಿಶೀಲನೆ

ಕೋಲಾರ, ಜು.೨೬: ನಗರದಲ್ಲಿ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಗುರುಭವನ ಕಾಮಗಾರಿಗೆ ಅಡ್ಡಿಯಾಗಿದ್ದ ಶಿಥಿಲವಾದ ಐದು ಶಾಲಾ ಕೊಠಡಿಗಳು ಹಾಗೂ ಮರಗಳ ತೆರವಿಗೆ ಅನುಮತಿ ಸಿಕ್ಕಿರುವ ಹಿನ್ನಲೆಯಲ್ಲಿ ಸೋಮವಾರ ಜಿಲ್ಲಾ ಗುರುಭವನ ಸಮಿತಿ ಅಧ್ಯಕ್ಷರೂ ಹಾಗೂ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ಸ್ಥಳ ಪರಿಶೀಲನೆ ನಡೆಸಿದರು.
ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿನ ಗುರುಭವನ ನಿರ್ಮಾಣದ ಜಾಗ ಪರಿಶೀಲನೆ ನಡೆಸಿದ ಅವರು, ಈಗಾಗಲೇ ಲೋಕೋಪಯೋಗಿ ಇಲಾಖೆಯಿಂದ ಇಲ್ಲಿನ ಹಳೆಯ ಶಿಥಿಲಗೊಂಡ ೫ ಶಾಲಾ ಕೊಠಡಿಗಳ ನೆಲಸಮಕ್ಕೆ ಅನುಮತಿ ಸಿಕ್ಕಿದೆ ಎಂದು ತಿಳಿಸಿದರು.
ಹಾಗೆಯೇ ಗುರುಭವನ ನಿರ್ಮಿಸಲು ನಿರ್ಧರಿಸಿರುವ ಜಾಗದಲ್ಲಿನ ೯ ಮರಗಳ ತೆರವಿಗೂ ಅರಣ್ಯ ಇಲಾಖೆ ಅನುಮತಿ ನೀಡಿದೆ ಈ ಹಿನ್ನಲೆಯಲ್ಲಿ ೧೫ ದಿನಗಳೊಳಗೆ ಜಾಗವನ್ನು ಸಮಗೊಳಿಸಿಕೊಳ್ಳಲು ಸೂಚಿಸಿದರು.
ಗುರುಭವನ ಅತಿ ಶೀಘ್ರ ನಿರ್ಮಾಣಗೊಳ್ಳಬೇಕು ಎಂಬುದು ಎಲ್ಲರ ಆಶಯವಾಗಿದೆ, ಈಗಾಗಲೇ ಇಲಾಖೆ ಕ್ರಿಯಾಯೋಜನೆಯೂ ತಯಾರಿಸಿದೆ ಎಂದ ಅವರು, ಕಾಮಗಾರಿಗಾಗಿ ಈಗಾಗಲೇ ಗುರುಭವನ ಸಮಿತಿಯೂ ರಚಿಸಲಾಗಿದ್ದು, ಆದಷ್ಟು ಬೇಗ ಕಾಮಗಾರಿ ಆರಂಭಿಸಬೇಕಾಗಿದೆ ಎಂದು ತಿಳಿಸಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಪ್ಪೇಗೌಡ, ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜ್ ಮಾತನಾಡಿ, ಪ್ರತಿ ವರ್ಷದ ಶಿಕ್ಷಕರ ದಿನಾಚರಣೆಯಂದು ಮುಂದಿನ ವರ್ಷದೊಳಗೆ ಗುರುಭವನ ಕಾಮಗಾರಿ ಆರಂಭವಾಗಬೇಕು ಎಂದು ಹೇಳುತ್ತಲೇ ಬಂದಿದ್ದೇವೆ ಆದರೆ ಕಾರ್ಯ ಆರಂಭವಾಗಲಿಲ್ಲ ಎಂದು ತಿಳಿಸಿ, ಈ ಬಾರಿ ಇಲ್ಲೇ ಶಿಕ್ಷಕ ದಿನಾಚರಣೆಗೆ ವೇದಿಕೆ ಹಾಕಿ ಕಾರ್ಯಕ್ರಮ ನಡೆಸುವ ಮೂಲಕ ಅಂದೇ ಗುರುಭವನಕ್ಕೆ ಶಿಲಾನ್ಯಾಸ ಮಾಡಲು ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಿಕ್ಷಕರ ಸಂಘದ ಕಾರ್ಯಕಾರಿ ಸದಸ್ಯ ಸಿ.ನಾರಾಯಣಸ್ವಾಮಿ ಮತ್ತಿತರರಿದ್ದರು.