
ಜಾಲಿಹಾಳ್ ರಾಜಸಾಬ್
ಸಿರುಗುಪ್ಪ, ಜು.24: ತಾಲೂಕಿನ ತೆಕ್ಕಲಕೋಟೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಎಸ್.ಡಬ್ಯ್ಲೂ.ಎಸ್) ಯಲ್ಲಿ ಒಂದರಿಂದ 6ನೇ ತರಗತಿ ವರೆಗೆ ಒಟ್ಟು 140 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ವಿದ್ಯಾರ್ಥಿಗಳು ಕುಳಿತು ಕೊಂಡು ಪಾಠ ಕೇಳಲು ಒಟ್ಟು 6 ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಇರುವ 6 ಕೊಠಡಿಗಳು ಶಿಥಿಲಾವಸ್ಥೆ ತಲುಪಿದ್ದು, ಇಲ್ಲಿಯೇ ವಿದ್ಯಾರ್ಥಿಗಳು ದಿನನಿತ್ಯ ಪಾಠ ಪ್ರವಚನ ಕೇಳುತ್ತಿದ್ದಾರೆ.
6 ಕೊಠಡಿಗಳಲ್ಲಿ ಒಂದು ಕೊಠಡಿಯನ್ನು ಕಛೇರಿ ಮತ್ತು ಬಿಸಿಯೂಟದ ಆಹಾರಧಾನ್ಯ ದಾಸ್ತಾನು ಮಾಡಲು ಉಪಯೋಗಿಸಲಾಗುತ್ತಿದೆ. ಇನ್ನುಳಿದ 5 ಕೊಠಡಿಗಳಲ್ಲಿ ಒಂದು ಕೊಠಡಿಗೆ ಸಿಮೆಂಟ್ ಸೀಟ್‌ನ್ನು ಅಳವಡಿಸಲಾಗಿದ್ದು, ಸಿಮೆಂಟ್ ಸೀಟ್ ಒಡೆದು ಹೋಗಿದ್ದು, ಮಳೆನೀರು ನೇರವಾಗಿ ಕೋಣೆಯೊಳಗೆ ಬೀಳುತ್ತವೆ. ಇದರ ಪಕ್ಕದಲ್ಲಿರುವ ಕೋಣೆಯು ತೀವ್ರ ಶಿಥಿಲಾವಸ್ಥೆ ತಲುಪಿದ್ದು, ಯಾವಾಗ ಬೀಳುತ್ತದೋ ಎನ್ನುವ ಆತಂಕದಿಂದ ಈ ಕೊಠಡಿಗೆ ಬೀಗ ಹಾಕಲಾಗಿದೆ.
ಇನ್ನುಳಿದ ಮೂರು ಕೊಠಡಿಗಳಲ್ಲಿ ಒಂದು ಕೊಠಡಿ ಶಿಥಿಲಾವಸ್ಥೆಯಲ್ಲಿದ್ದು, 2 ಕೊಠಡಿಗಳಲ್ಲಿ ಒಂದು ಕೊಠಡಿಯನ್ನು ಚುನಾವಣೆಯ ಸಂದರ್ಭದಲ್ಲಿ ಮೇಲ್ಛಾವಣಿಯ ಸಿಮೆಂಟ್ ಉದರದಂತೆ ರಿಪೇರಿ ಮಾಡಲಾಗಿದೆ. ಇನ್ನೊಂದು ಕೊಠಡಿಯ ಮೇಲ್ಛಾವಣಿಯು ಸಂಪೂರ್ಣವಾಗಿ ನೀರಿನ ತೇವಾಂಶ ಹಿಡಿದುಕೊಂಡಿದ್ದು, ಅಲ್ಲಲ್ಲಿ ಸಿಮೆಂಟ್ ಉದುರಿ ಬೀಳುತ್ತಿದೆ. ಒಂದರಿಂದ ಮೂರು, ಮೂರರಿಂದ ಆರನೆ ತರಗತಿಯ ವಿದ್ಯಾರ್ಥಿಗಳನ್ನು 2 ಕೊಠಡಿಗಳಲ್ಲಿ ಕೂಡಿಸಿ ಪಾಠ ಮಾಡಬೇಕಾದ ಅನಿವಾರ್ಯತೆ ಶಿಕ್ಷಕರಿಗಿದೆ. ಅಲ್ಲದೆ ಇಬ್ಬರು ಖಾಯಂ ಶಿಕ್ಷಕರು, ಒಬ್ಬರು ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.
ಕೋಣೆಗಳ ಕೊರತೆಯಿಂದಾಗಿ 1-3ನೇ ತರಗತಿ ವಿದ್ಯಾರ್ಥಿಗಳನ್ನು ಒಂದು ಕೋಣೆಯಲ್ಲಿ, 4-6ನೇ ತರಗತಿ ವಿದ್ಯಾರ್ಥಿಗಳನ್ನು ಒಂದು ಕೋಣೆಯಲ್ಲಿ ಕೂಡಿಸಿ ಪಾಠ ಮಾಡಲಾಗುತ್ತಿದ್ದು, ವಿದ್ಯಾರ್ಥಿಗಳ ಪಾಠ ಪ್ರವಚನಕ್ಕೆ ಅಡ್ಡಿಯಾಗುತ್ತಿದೆ. ಹಾಗೂ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳಲೇ ಇಲ್ಲದಂತಾಗಿದೆ, ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಕುಡಿಯುವ ನೀರಿನ ಸೌಲಭ್ಯ ಇಲ್ಲದಿರುವುದರಿಂದ ಶಾಲೆಯ ಅಕ್ಕ ಪಕ್ಕದಲ್ಲಿರುವ ಮನೆಗಳಲ್ಲಿ ಕೇಳಿ ನೀರು ಕುಡಿಯುವ ಪರಿಸ್ಥತಿ ಇರುತ್ತದೆ.
ನಮ್ಮ ಶಾಲೆಯ ಎಲ್ಲಾ ಕೊಠಡಿಗಳು ಶಿಥಿಲಗೊಂಡಿದ್ದು, ಹೊಸ ಕೊಠಡಿಗಳನ್ನು ನಿರ್ಮಿಸಿ ಕೊಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ 26 ಜೂನ್ 2023 ರಂದು ಪತ್ರ ಬರೆದು ತಿಳಿಸಲಾಗಿದೆ. ಇಂಜೀನಿಯರ್ ಒಬ್ಬರು ಬಂದು ಶಿಥಿಲ ಕಟ್ಟಡಗಳ ಪರಿಶೀಲನೆ ನಡೆಸಿ ಭಾವಚಿತ್ರವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಮುಖ್ಯಗುರು ತ್ರಿವೇಣಿ ತಿಳಿಸಿದ್ದಾರೆ.
ಶಿಥಿಲ ಕಟ್ಟದಲ್ಲಿಯೇ ವಿದ್ಯಾರ್ಥಿಗಳು ಓದುತ್ತಿದ್ದು, ಹೆಚ್ಚಿನ ಮಳೆಯಾದರೆ ಮೇಲ್ಛಾವಣಿಯ ನೀರು ತೊಟ್ಟಿಕ್ಕುತ್ತದೆ, ಇದರಿಂದ ಮಳೆಗಾಲದಲ್ಲಿ ವಿದ್ಯಾರ್ಥಿಗಳು ಶಿಥಿಲ ಕೊಠಡಿಗಳಲ್ಲಿ ಪಾಠ ಕೇಳುವಾಗ ಯಾವುದೇ ರೀತಿಯಲ್ಲಿ ಅಪಾಯವಾಗಬಹುದು, ವಿದ್ಯಾರ್ಥಿಗಳ ಸುರಕ್ಷತೆಯ ಹಿತದೃಷ್ಟಿಯಿಂದ ಹೊಸ ಕೊಠಡಿಗಳ ನಿರ್ಮಾಣಕ್ಕೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕೆಂದು ಪಟ್ಟಣ ನಿವಾಸಿ ಎಚ್.ಕಾಡಸಿದ್ದ ಒತ್ತಾಯಿಸಿದ್ದಾರೆ.
ಶಿಥಿಲ ಕೊಠಡಿಗಳ ಬಗ್ಗೆ ನಮ್ಮ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ತಿಳಿಸಲಾಗಿದೆ. ಆದಷ್ಟು ಶೀಘ್ರವಾಗಿ ಹೊಸ ಕಟ್ಟಡ ನಿರ್ಮಾಣವಾಗುವ ಭರವಸೆ ಇದೆ ಎಂದು ಬಿ.ಇ.ಒ. ಹೆಚ್.ಗರ‍್ರಪ್ಪ ತಿಳಿಸಿದ್ದಾರೆ.