ಶಿಥಿಲಾವಸ್ಥೆಯಲ್ಲಿ ಓವರ್‍ಹೆಡ್ ಟ್ಯಾಂಕ್

ಕೆ.ಆರ್.ಪೇಟೆ.ಅ.26: ತಾಲೂಕಿನ ಮುರುಕನಹಳ್ಳಿ ಗ್ರಾಮದಲ್ಲಿರುವ ಓವರ್ ಹೆಡ್ ಟ್ಯಾಂಕ್ ದುಸ್ಥಿತಿಯಲ್ಲಿದ್ದರು ಅದನ್ನು ತೆರವುಗೊಳಿಸದೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ರಾಮು ಆರೋಪಿಸಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಈ ಓವರ್‍ಹೆಡ್ ಟ್ಯಾಂಕ್‍ನಲ್ಲಿ ನೀರು ಶೇಖರಣೆಯಾಗುತ್ತಿದೆ. ಸದ್ಯ ಟ್ಯಾಂಕ್ ಹಲವು ಕಡೆ ಬಿರುಕು ಬಿಟ್ಟಿದ್ದು ಯಾವಾಗ ಬೇಕಾದರೂ ಬೀಳುವ ಹಂತ ತಲುಪಿದೆ ಇಂತಹ ದುಸ್ಥಿತಿಯಲ್ಲಿದ್ದರೂ ಸಹ ಸಂಬಂಧಿಸಿದ ಅಧಿಕಾರಿಗಳು ಟ್ಯಾಂಕ್ ತೆರವು ಗೊಳಿಸುವ ಬಗ್ಗೆ ಯಾವುದೆ ಕ್ರಮ ಕೈಗೊಳ್ಳದೆ ಇರುವುದರಿಂದ ಟ್ಯಾಂಕ್ ಪಕ್ಕದಲ್ಲಿ ವಾಸ ಮಾಡುತ್ತಿರುವ ಸುಮಾರು ಇಪ್ಪತ್ತು ಕುಟುಂಬಗಳು ಯಾವಾಗ ಈ ಟ್ಯಾಂಕ್ ಬೀಳುತ್ತದೆಯೋ ಏನು ಅನಾಹುತ ಕಾದಿದೆಯೋ ಎಂಬ ಭಯದಲ್ಲಿ ತಮ್ಮ ಬದುಕು ನಡೆಸುವಂತಾಗಿದೆ.
ಶಿಥಿಲಾವಸ್ಥೆಯಲ್ಲಿದ್ದರು ಇದೇ ಓವರ್‍ಹೆಡ್ ಟ್ಯಾಂಕ್‍ಗೆ ನೀರು ತುಂಬಿಸಲಾಗುತ್ತಿದೆ ಇಲ್ಲಿಂದಲೇ ಮನೆಗಳಿಗೆ ನೀರನ್ನು ಕೊಡಲಾಗುತ್ತಿದೆ. ಈ ಟ್ಯಾಂಕ್ ದುರಸ್ತಿಯಲ್ಲಿದ್ದರೂ ಸಹ ಇಲ್ಲಿಯೇ ನೀರು ಶೇಖರಣೆ ಮಾಡುತ್ತಿದ್ದಾರೆ. ಟ್ಯಾಂಕ್ ಶಿಥಿಲಾವಸ್ಥೆಯಲ್ಲಿದ್ದು, ರಿಪೇರಿ ಮಾಡಿಸುವ ಕೆಲಸವನ್ನು ಗ್ರಾಮ ಪಂಚಾಯಿತಿ ಸಿಬ್ಬಂದಿ ಮಾಡಿಸುತ್ತಿಲ್ಲ ಸಂಬಂದ ಪಟ್ಟ ಅಧಿಕಾರಿಗಳ ಗಮನಕ್ಕೂ ತರದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದ್ದಾರೆ.
ದುರಸ್ತಿಗೆ ಆಗ್ರಹ: ಇಲ್ಲಿನ ವಾಸಿಗಳು ಓವರ್ ಹೆಡ್ ಟ್ಯಾಂಕ್ ಅನ್ನು ದುರಸ್ತಿ ಪಡಿಸಿ ಎಂದು ತಾಲೂಕು ಪಂಚಾಯತಿ ಅಧಿಕಾರಗಳಿಗು ಮನವಿ ನೀಡಿದ್ದಾರೆ ಆದರೆ ಪಂಚಾಯಿತಿಯ ಅಧಿಕಾರಿಗಳು ಮಾತ್ರ ಕ್ರಮವಹಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮಳೆಗಾಲದಲ್ಲಂತೂ ಇಲ್ಲಿ ವಾಸ ಮಾಡುವ ಜನತೆ ರಾತ್ರಿ ವೇಳೆಯಲ್ಲಿ ಭಯದಿಂದಲೇ ಬದುಕು ಸಾಗಿಸುವ ಆತಂಕದಲ್ಲಿದ್ದಾರೆ. ಗಾಳಿ ಜೋರಾಗಿ ಬೀಸಿದರೆ ಎಲ್ಲಿ ಈ ಟ್ಯಾಂಕ್ ಕುಸಿದು ಬೀಳುತ್ತದೆಯೋ ಎಂಬ ಭಯದಲ್ಲಿಯೇ ಜೀವನ ನಡೆಸುತ್ತಿದ್ದಾರೆ. ಇಂತಹ ಸನ್ನಿವೇಶ ನಿರ್ಮಾಣ ಗೊಂಡಿದ್ದರೂ ಅಧಿಕಾರಿಗಳು ಕೈಚೆಲ್ಲಿ ಕುಳಿತಿದ್ದಾರೆ ಎಂದು ಅಕ್ಕಪಕ್ಕದ ಕುಟುಂಬದವರು ದೂರಿದ್ದಾರೆ. ಕೂಡಲೇ ಗ್ರಾಮ ಪಂಚಾಯಿತಿ ಅಧಿಕಾರಿಗಳು ಇತ್ತ ಗಮನ ಹರಿಸಿ ಈ ಓವರ್‍ಹೆಡ್ ಟ್ಯಾಂಕ್‍ನ್ನು ರಿಪೇರಿ ಮಾಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.