ಶಿಥಿಲಾವಸ್ತೆ ತಲುಪಿದ ಪಟ್ಟಣದ ಅಭಿಲೇಖಾಲಯ

ಕೆ.ಆರ್.ಪೇಟೆ.ಸೆ.13: ತಾಲೂಕಿನ ರೈತ ಸಮುದಾಯ ಮತ್ತು ಸಾರ್ವಜನಿಕರ ಆಸ್ತಿ ನೊಂದಣಿಯ ಸರ್ವ ದಾಖಲೆಗಳನ್ನು ಸಂರಕ್ಷಿಸಿಟ್ಟಿರುವ ಪಟ್ಟಣದ ಉಪನೊಂದಣಾಧಿಕಾರಿಗಳ ಕಛೇರಿಯ ಅಭಿಲೇಖಾಲಯ (ರೆಕಾರ್ಡ್ ರೂಂ) ಸಂಪೂರ್ಣ ಶಿಥಿಲಾವಸ್ತೆ ತಲುಪಿದ್ದು ಸಾರ್ವಜನಿಕ ಆಸ್ತಿ ದಾಖಲೆಗಳಿಗೆ ಕುತ್ತು ಎದುರಾಗಿದೆ ಎಂದು ಜೆಡಿಎಸ್ ಮುಖಂಡ ಹಾಗು ಪುರಸಭಾ ಸದಸ್ಯ ಕೆ.ಎಸ್.ಸಂತೋಷ್ ಕುಮಾರ್(ಬಸ್) ಆರೋಪಿಸಿದರು.
ಪಟ್ಟಣದ ತಾಲೂಕು ಆಡಳಿತ ಸೌಧದ (ಮಿನಿ ವಿಧಾನ ಸೌಧ) ಆವರಣದಲ್ಲಿ ಉಪ ನೊಂದಣಾಧಿಕಾರಿಗಳ ರೆಕಾರ್ಡ್ ರೂಂ ಕಟ್ಟಡವಿದೆ. 2015 ರ ವರೆಗೂ ಸದರಿ ಕಟ್ಟಡದಲ್ಲಿಯೇ ತಾಲೂಕು ಉಪ ನೊಂದಣಾಧಿಕಾರಿಗಳ ಕಚೇರಿ ಕೆಲಸ ಮಾಡುತಿತ್ತು. ಮಿನಿ ವಿಧಾನ ಸೌಧ ನಿರ್ಮಾಣದ ಅನಂತರ ಖಾಲಿಬಿದ್ದ ಶತಮಾನ ತುಂಬಿದ ಹಳೆಯ ತಾಲೂಕು ಕಚೇರಿಯ ಪಾರಂಪರಿಕ ಕಟ್ಟಡಕ್ಕೆ ಉಪ ನೊಂದಣಾಧಿಕಾರಿಗಳ ಕಚೇರಿಯನ್ನು ವರ್ಗಾಯಿಸಲಾಗಿದೆ. ಉಪ ನೊಂದಣಾಧಿಕಾರಿಗಳ ಕಚೇರಿಯನ್ನು ತಾಲೂಕು ಕಚೇರಿಯ ಹಳೆಯ ಕಟ್ಟಡಕ್ಕೆ ವರ್ಗಾಹಿಸಿದ್ದರೂ ಸ್ಥಳಾವಕಾಶದ ಕೊರತೆಯಿಂದ ರೆಕಾರ್ಡ್ ರೂಂ ಸ್ಥಳಾಂತರಗೊಳ್ಳದೆ ಹಳೆಯ ಕಟ್ಟಡದಲ್ಲಿಯೇ ಮುಂದುವರಿದಿದೆ. ರೆಕಾರ್ಡ್ ರೂಂ ಕಟ್ಟಡ ಅತ್ಯಂತ ಹಳೆಯದಾಗಿದ್ದು ಶಿಥಿಲಾವಸ್ತೆ ತಲುಪಿದೆ. ಕಟ್ಟಡದ ಮೇಲ್ಲೆಲ್ಲಾ ಗಿಡಗಂಟೆಗಳು ಬೆಳೆಯುತ್ತಿವೆ. ಕಟ್ಟಡದ ಹೆಂಚುಗಳು ಮಳೆಗಾಳಿಗೆ ಸಿಲುಕಿ ಹಾನಿಗೀಡಾಗಿದ್ದು ಮಳೆ ಬಿದ್ದರೆ ಸೋರುತ್ತಿದೆ. ಸಾರ್ವಜನಿಕರು ಯಾವುದಾದರೂ ನೊಂದಣಿ ದಾಖಲೆಗಳಿಗೆ ಅರ್ಜಿ ಸಲ್ಲಿಸಿದಾಗ ಅದನ್ನು ಹುಡುಕಿ ಕೊಡಲು ಮಾತ್ರ ರೆಕಾರ್ಡ್ ರೂಂ ಬಾಗಿಲು ತೆಗೆಯುವುದರಿಂದ ಕಟ್ಟಡದ ಸುತ್ತಲೂ ಕಳೆ ಸಸ್ಯಗಳು ಬೆಳೆದು ನಿಂತಿವೆ. ಕಟ್ಟಡದ ಒಂದು ಭಾಗದಲ್ಲಿ ಕೆಲವರು ಎಮ್ಮೆ ದನ ಕಟ್ಟುತ್ತಿದ್ದರೆ ಮತ್ತೊಂದು ಭಾಗ ಸಾರ್ವಜನಿಕ ಮೂತ್ರಾಲಯವಾಗಿ ಪರಿವರ್ತನೆಯಾಗಿದೆ. ಕಟ್ಟಡದ ಪಕ್ಕದಲ್ಲಿ ಬೃಹತ್ ಗಾತ್ರದ ಹಳೆಯ ಮರಗಳಿದ್ದು ಅವು ಯಾವಾಗ ಬೇಕಾದರೂ ಕಟ್ಟಡದ ಮೇಲೆ ಬೀಳುವ ಸಂಭವವಿದೆ.
ಸದರಿ ರೆಕಾರ್ಡ್ ರೂಂ ಕಟ್ಟಡದಲ್ಲಿ 1867 ರಿಂದ 2004 ರವರೆಗಿನ ಎಲ್ಲಾ ಕೈ ಬರಹದ ನೊಂದಣಿ ಕಡತ ದಾಖಲೆಗಳನ್ನು ಇಡಲಾಗಿದೆ. ಕೆ.ಆರ್.ಪೇಟೆ ಪಟ್ಟಣ ಈ ಹಿಂದೆ ಅತ್ತಿಗುಪ್ಪೆ ಎನ್ನುವ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಅತ್ತಿಗುಪ್ಪೆ ಕಾಲದ ಹಳೆಯ ದಾಖಲೆಗಳೂ ಇದೇ ರೆಕಾರ್ಡ್ ರೂಂ ನಲ್ಲಿವೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದಿಂದ ಸೂಕ್ತ ನಿರ್ವಹಣೆಯಿಲ್ಲದೆ ರೆಕಾರ್ಡ್ ರೂಂ ಕಟ್ಟಡ ಶೀಥಿಲಾವಸ್ತೆ ತಲುಪಿದ್ದು ಅದರಲ್ಲಿನ ದಾಖಲೆಗಳ ಸಂರಕ್ಷಣೆ ಸವಾಲಿನ ಸಂಗತಿಯಾಗಿದೆ. ಶಿಥಿಲ ಕಟ್ಟಡ ಮಳೆಗಾಳಿಗೆ ಕುಸಿದರೆ ಅದರಲ್ಲಿರುವ ತಾಲೂಕಿನ ಲಕ್ಷಾಂತರ ರೈತರ ಮತ್ತು ಸಾರ್ವಜನಿಕರ ಕೈ ಬರಹದ ನೊಂದಣಿ ದಾಖಲೆಗಳು ಸಂಪೂರ್ಣ ನಾಶವಾಗಲಿದ್ದು ಬಹುದೊಡ್ಡ ಅಪಾಯ ಎದುರಾಗಲಿದೆ.
ಸದರಿ ರೆಕಾರ್ಡ್ ರೂಂ ಕಟ್ಟಡ ಹಳೆಯದಾಗಿರುವುದರಿಂದ ಅದನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸಲು ಯೋಜಿಸಲಾಗಿತ್ತು. ಇದಕ್ಕಾಗಿ 1.27 ಕೋಟಿ ಅನುದಾನವೂ ರಾಜ್ಯ ಸರ್ಕಾರದಿಂದ ಮಂಜೂರಾಗಿತ್ತು. ಆದರೆ ಸದರಿ ಕಟ್ಟಡ ಮಿನಿ ವಿಧಾನ ಸೌಧದ ಆವರಣದಲ್ಲಿರುವುದರಿಂದ ಉಪ ನೊಂದಣಾಧಿಕಾರಿಗಳ ಕಚೇರಿ ಕಟ್ಟಡ ನಿರ್ಮಾಣಕ್ಕೆ ಈ ಹಿಂದಿನ ತಹಸೀಲ್ದಾರರು ಅಡ್ಡಿಪಡಿಸಿದ್ದರು. ಪರಿಣಾಮ ಆರ್ಥಿಕ ಇಲಾಖೆ ಸರ್ಕಾರದ ಯೋಜಿತ ಅನುದಾನವನ್ನು ಬಿಡುಗಡೆ ಮಾಡಲಿಲ್ಲ. ಜಾಗದ ಸಮಸ್ಯೆ ಬಗೆಹರಿಯದ ಕಾರಣ ಬಂದ ಅನುದಾನ ಬಳಕೆಯಾಗದೆ ಉಪ ನೊಂದಣಾಧಿಕಾರಿಗಳ ಕಚೇರಿಯ ಹೊಸ ಕಟ್ಟಡ ನಿರ್ಮಾಣಕ್ಕೆ ಗ್ರಹಣ ಹಿಡಿದಿದೆ.
ಕ್ಷೇತ್ರದ ಶಾಸಕರಾದ ಸಚಿವ ಕೆ.ಸಿ.ನಾರಾಯಣಗೌಡ ತಮ್ಮ ಅಧಿಕಾರ ಶಕ್ತಿ ಬಳಸಿ ನೂತನ ಉಪ ನೊಂದಣಾಧಿಕಾರಿಗಳ ಕಚೇರಿಯ ಕಟ್ಟಡಕ್ಕೆ ಹಿಡಿದಿರುವ ಗ್ರಹಣ ಬಿಡಿಸಬೇಕು. ತಾಲೂಕು ಕಚೇರಿಯ ಆವರಣದಲ್ಲಿ ಕಟ್ಟಡ ನಿರ್ಮಾಣಕ್ಕಿರುವ ಅಡೆತಡೆಗಳನ್ನು ತೆರವುಗೊಳಿಸಿ ಸುಸಜ್ಜಿತ ರೆಕಾರ್ಡ್ ರೂಂ ನಿರ್ಮಿಸಿ ಸಾರ್ವಜನಿಕರ ದಾಖಲೆಗಳನ್ನು ಸಂರಕ್ಷಿಸುವ ಕೆಲಸ ಮಾಡಬೇಕೆಂದು ಸಂತೋಷ್ ಕುಮಾರ್ ಒತ್ತಾಯಿಸಿದ್ದಾರೆ.