ಶಿಥಿಲಗೊಂಡ ಶಾಲಾ ಕೊಠಡಿ ದುರಸ್ತಿಗೆ ರೂ.2 ಕೋಟಿ ಅನುದಾನ

ಚಿತ್ರದುರ್ಗ. ಜು.೯; ಇತ್ತೀಚೆಗೆ ಸುರಿದ ಮಳೆಗೆ ತೀವ್ರ ಹಾನಿಗೊಳಗೊಂಡು ಶಿಥಿಲವಾದ ಶಾಲಾ ಕೊಠಡಿಗಳ ದುರಸ್ತಿಯನ್ನು ರೂ.2 ಕೋಟಿ ವೆಚ್ಚದಲ್ಲಿ ಮಾಡಲಾಗುವುದು ಎಂದು  ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವರು ಹಾಗೂ ಲೋಕಸಭಾ ಸದಸ್ಯರಾದ ಎ.ನಾರಾಯಣಸ್ವಾಮಿ ಭರವಸೆ ನೀಡಿದರು.  
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ  ಕೇಂದ್ರ ಪುರಸ್ಕøತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೂ.1 ಕೋಟಿ ಸಂಸದರ ಅನುದಾನ ಹಾಗೂ ರೂ.1 ಕೋಟಿ ಜಿಲ್ಲಾ ಪಂಚಾಯಿತಿ ಅನುದಾನದಡಿಯಲ್ಲಿ ಶಾಲಾ ಕೊಠಡಿಗಳ ದುರಸ್ತಿ ಕಾರ್ಯ ಮಾಡಲಾಗುವುದು.  ಶಿಥಿಲಗೊಂಡ ಜಿಲ್ಲೆಯ ಎಲ್ಲಾ ಶಾಲೆಗಳ ದುರಸ್ತಿ ಕಾರ್ಯವನ್ನು 6 ತಿಂಗಳೊಳಗಾಗಿ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.
ದೇವಸ್ಥಾನಕ್ಕಿಂತ ಶಾಲೆ ನಿರ್ಮಾಣ ಬಹಳ ಮುಖ್ಯ, ಶಿಥಿಲಗೊಂಡ ಎಲ್ಲಾ ಶಾಲೆಗಳನ್ನು ಕೈಗೆತ್ತಿಕೊಂಡು ಕ್ರಿಯಾ ಯೋಜನೆ ತಯಾರಿಸಿ, ತ್ವರಿತಗತಿಯಲ್ಲಿ ನಿರ್ಮಾಣ ಮಾಡಬೇಕು. ಶಿಥಿಲಗೊಂಡ ಶಾಲೆಗಳ ಪಟ್ಟಿಯನ್ನು ನಿರ್ಮಾಣ ಏಜೆನ್ಸಿಗಳಿಗೆ ನೀಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದ ಅವರು, ಹಿರಿಯೂರು ಮತ್ತು ಚಳ್ಳಕೆರೆ ತಾಲ್ಲೂಕಿನ ಶಿಥಿಲಗೊಂಡ ಶಾಲೆಗಳ ದುರಸ್ತಿ ಕಾರ್ಯದ ಜವಾಬ್ದಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಯಿತು. ಹೊಳಲ್ಕೆರೆ ತಾಲ್ಲೂಕಿನ ಶಾಲೆಗಳನ್ನು ಲೋಕೋಪಯೋಗಿ ಇಲಾಖೆಗೆ ಹಾಗೂ ಮೊಳಕಾಲ್ಮುರು, ಹೊಸದುರ್ಗ ಹಾಗೂ ಚಿತ್ರದುರ್ಗ ತಾಲ್ಲೂಕಿನ ಶಿಥಿಲಗೊಂಡ ಶಾಲೆಗಳ ದುರಸ್ತಿ ಕಾರ್ಯ ಮಾಡುವಂತೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗಕ್ಕೆ  ಸೂಚನೆ ನೀಡಲಾಯಿತು. ಶಾಲೆಗಳನ್ನು ದುರಸ್ತಿ ಮಾಡಿದ ನಂತರ ಸವಿವರದೊಂದಿಗೆ ಸಂಪೂರ್ಣವಾದ ವರದಿ ನೀಡುವಂತೆ ನಿರ್ಮಾಣ ಏಜೆನ್ಸಿಗಳಿಗೆ ತಾಕೀತು ಮಾಡಿದರು.  
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‍ಕೆಬಿ ಪ್ರಸಾದ್ ಮಾತನಾಡಿ, ಜಿಲ್ಲೆಯ 313 ಶಾಲೆಗಳ ಪೈಕಿ ಶಿಥಿಲಗೊಂಡು, ಹನಿಗೊಳಗಾಗಿ ದುರಸ್ತಿಗೊಳಿಸಬೇಕಾದ  626 ಕೊಠಡಿಗಳಿದ್ದು, ಈ ಎಲ್ಲ ಶಾಲಾ ಕೊಠಡಿಗಳನ್ನು ದುರಸ್ತಿ ಮಾಡುವುದು ತುರ್ತು ಅವಶ್ಯಕವಾಗಿದೆ. ಒಂದು ಕೊಠಡಿಗೆ ರೂ.50 ಲಕ್ಷ ಅನುದಾನದ ಅವಶ್ಯಕತೆ ಇದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಪ್ರಸ್ತುತ 1.47 ಲಕ್ಷ ಕುಟುಂಬಗಳಿಗೆ ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಿಲಿಂಡರ್ ವಿತರಿಸಲಾಗಿದೆ.  ಈ ಯೋಜನೆಗೆ ಸರ್ಕಾರ ಫಲಾನುಭವಿಗಳ ಸಂಖ್ಯೆಗೆ ಯಾವುದೇ ಮಿತಿ ನಿಗದಿಪಡಿಸಿಲ್ಲ.  ಹೀಗಾಗಿ ಅಲ್ಲದೆ ಈ ಯೋಜನೆಯಡಿ ಸೌಲಭ್ಯ ಕೋರಿ ಅರ್ಜಿ ಸಲ್ಲಿಸುವ ಎಲ್ಲ ಅರ್ಹ ಫಲಾನುಭವಿಗಳಿಗೂ ಕೂಡ ಉಜ್ವಲ ಯೋಜನೆಯಡಿ ಸಿಲಿಂಡರ್ ವಿತರಿಸಲು ಕ್ರಮ ಕೈಗೊಳ್ಳಲಾಗುವುದು.  ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಜಿಲ್ಲೆಯಲ್ಲಿ ಉಚಿತ ಆಹಾರಧಾನ್ಯ ನೀಡಲಾಗುತ್ತಿದ್ದು, ಕಳೆದ ವರ್ಷ 19 ಸಾವಿರ ಅರ್ಜಿ ವಿಲೇವಾರಿ ಮಾಡಲಾಗಿದೆ,  ಇನ್ನೂ 4900 ಅರ್ಜಿಗಳು ಬಾಕಿ ಇವೆ.  ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಿರಂತರವಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿನಿರ್ದೇಶಕ ಮಧುಸೂಧನ್ ಅವರು ಸಭೆಗೆ ಮಾಹಿತಿ ನೀಡಿದರು.  ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು,  ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಯೋಜನೆಯ ಬಗ್ಗೆ ಅರಿವು ಇರುವುದಿಲ್ಲ.  ಹೀಗಾಗಿ ಜಿಲ್ಲೆಯಲ್ಲಿ  ಅಡುಗೆಗಾಗಿ ಇನ್ನೂ ಕೂಡ ಕಟ್ಟಿಗೆಯನ್ನು ಬಳಸುತ್ತಿರುವಂತಹ ಕುಟುಂಬಗಳ ಸಮೀಕ್ಷೆಯನ್ನು ಇಲಾಖೆಯೇ ಕೈಗೊಂಡು, ಅಂತಹ ಫಲಾನುಭವಿಗಳನ್ನು ಗುರುತಿಸಿ, ಅವರಿಗೆ ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಿಲಿಂಡರ್ ವಿತರಿಸುವ ಕಾರ್ಯ ಆಗಬೇಕು ಎಂದು ಸಚಿವರು ಸೂಚನೆ ನೀಡಿದರು.ಈ ವೇಳೆ ಜಿಲ್ಲಾಮಟ್ಟದ ಅಧಿಕಾರಿಗಳಿದ್ದರು.

Attachments area

ReplyForward