
ಕಲಬುರಗಿ,ಜು.24-ಜಿಲ್ಲೆಯ ಹಲವೆಡೆ ಸರ್ಕಾರಿ ಶಾಲಾ ಕಟ್ಟಡಗಳು ಶಿಥಿಲಾವಾಸ್ಥೆಗೆ ತಲುಪಿದ್ದು, ಶಿಥಿಲಗೊಂಡಿರುವ ಕಟ್ಟಡಗಳಿಂದ ಶಾಲೆಗಳನ್ನು ಸ್ಥಳಾಂತರಿಸಿ ವಿದ್ಯಾರ್ಥಿಗಳಿಗೆ ಪಾಠ ಕಲಿಯಲು ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‍ಓ) ಜಿಲ್ಲಾ ಕಾರ್ಯದರ್ಶಿ ತುಳಜರಾಮ ಎನ್.ಕೆ.ಒತ್ತಾಯಿಸಿದ್ದಾರೆ.
ಕಮಲಾಪುರ ತಾಲೂಕಿನ ನಾವದಗಿ (ಬಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 8ನೇ ವರೆಗೆ ಇಲ್ಲಿ ತರಗತಿಗಳು ನಡೆಯುತ್ತಿದ್ದು, ಈ ಶಾಲೆಯಲ್ಲಿ 6 ಕೊಠಡಿಗಳಿವೆ. ಅದರಲ್ಲಿ 2 ಕೊಠಡಿಗಳು ಸಂಪೂರ್ಣವಾಗಿ ಶಿಥಿಲಾವಸ್ಥೆ ತಲುಪಿವೆ. ಇನ್ನು ಉಳಿದ ಕೊಠಡಿಗಳ ಗುಣಮಟ್ಟವೂ ಕೂಡ ಹೇಳಿಕೊಳ್ಳುವಷ್ಟಿಲ್ಲ. ಈ ಸ್ಥಿತಿಯಲ್ಲೆ ಶಾಲೆ ನಡೆಯುತ್ತಿದೆ. ಅದೆರೀತಿ ಚಿತ್ತಾಪುರ ಪಟ್ಟಣದ ಬಸ್ ನಿಲ್ದಾಣದ ಎದುರು ಇರುವ ಸರಕಾರಿ ಬಾಲಕರ ಪ್ರೌಢಶಾಲೆ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದೆ. ಈ ಶಾಲೆಯಲ್ಲಿ ಕನ್ನಡ ಮತ್ತು ಉರ್ದು ಮಾಧ್ಯಮದ ವಿದ್ಯಾರ್ಥಿಗಳ ಜೊತೆಗೆ ಸರ್ಕಾರಿ ಕನ್ಯಾ ಪ್ರೌಢಶಾಲೆ ಮತ್ತು ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಒಟ್ಟು 1 ಸಾವಿರ ವಿದ್ಯಾರ್ಥಿಗಳು ಶಿಥಿಲಗೊಂಡಿರುವ ಕಟ್ಟಡದಲ್ಲಿ ಭಯದ ವಾತಾವರಣದಲ್ಲಿ ಅಭ್ಯಾಸ ಮಾಡುವಂತಾಗಿದೆ. ಇನ್ನೊಂದೆಡೆ ಜೇವರ್ಗಿ ತಾಲೂಕಿನ ಕುರುನಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡವು ಆಗಲೋ, ಈಗಲೋ ಬೀಳುವ ಸ್ಥಿತಿಯಲ್ಲಿದೆ. ನಿರಂತರ ಮಳೆಯಿಂದ ಮೇಲ್ಛಾವಣಿ ಹಂತ ಹಂತವಾಗಿ ಉದುರಿ ಬೀಳುತ್ತಿದೆ. ಈಗಾಗಲೇ ಮೇಲ್ಛಾವಣಿಯಲ್ಲಿನ ಸಿಮೆಂಟ್ ಪದರದ ಭಾಗ ಮಕ್ಕಳ ತಲೆಯ ಮೇಲೆ ಬಿದ್ದು ತಲೆಯಲ್ಲಿ ತೂತು ಬಿದ್ದಿರುವ ಘಟನೆಗಳು ನಡೆದಿವೆ.
ಈಗಾಗಲೇ ಕಲಬುರಗಿ ಜಿಲ್ಲೆಯಾದ್ಯಾಂತ ಸರಕಾರಿ ಶಾಲೆಗಳಲ್ಲಿ ದಾಖಲಾತಿಗಳ ಸಂಖ್ಯೆ ಕ್ರಮೇಣವಾಗಿ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ, ಕಟ್ಟಡಗಳು, ಶಿಕ್ಷಕರ ನೇಮಕಾತಿ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಹಾಗೂ ಮಳೆಗಾಲ ಪ್ರಾರಂಭವಾಗುವ ಮುನ್ನವೇ ಶಿಥಿಲಗೊಂಡಿರುವಂತಹ ಕಟ್ಟಡಗಳಿಂದ ಶಾಲೆಯನ್ನು ಸ್ಥಳಾಂತರಿಸಿ, ಅದಕ್ಕೆ ಪರ್ಯಾಯವಾಗಿ ಬೆರೆ ಕಟ್ಟಡದ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ.
ಜಿಲ್ಲೆಯಲ್ಲಿ ಇಂತಹ ಅಪಾಯಕಾರಿಯಾದ ಸ್ಥಿತಿಯಲ್ಲಿ ಇನ್ನೂ ಹಲವಾರು ಶಾಲೆಗಳಿವೆ. ಇಂತಹ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ತಂದೆ ತಾಯಿಗಳು, ಭಯ ಪಡುವಂತಾಗಿದ್ದು ಖಾಸಗಿ ಶಾಲೆಗಳತ್ತ ಪೆÇೀಷಕರು ಮುಖಮಾಡಿದ್ದು ಇದಕ್ಕೆ ನೇರ ಹೊಣೆ ಸರ್ಕಾರದ್ದಾಗಿದೆ. ಬಡ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡದೆ, ಸರ್ಕಾರವೇ ಸಂಪೂರ್ಣವಾಗಿ ಇದರ ಜವಾಬ್ದಾರಿಯನ್ನು ವಹಿಸಿಕೊಂಡು ಈ ಕೂಡಲೇ ಅಪಾಯಕಾರಿ ಕಟ್ಟಡಗಳನ್ನು ಧ್ವಂಸಗೊಳಿಸಿ ಹೊಸ ಕಟ್ಟಡಗಳನ್ನು ನಿರ್ಮಿಸಬೇಕು. ಅಲ್ಲಿವರೆಗೂ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.