ಶಿಥಿಲಗೊಂಡ ಮೇಲ್ಸೇತುವೆ


ಲಕ್ಷ್ಮೇಶ್ವರ,ಎ.29: ಲಕ್ಷ್ಮೇಶ್ವರ ಮಂಗಸೂಳಿ ರಾಜ್ಯ ಹೆದ್ದಾರಿಯ ಸಂಶಿ ಮತ್ತು ಕುಂದಗೋಳ ಮಧ್ಯದ ಶಿರೂರು ಸಮೀಪದ ಮೇಲ್ಸೇತುವೆಯ ಒಂದು ಭಾಗದ ಗೋಡೆಗೆ ನಿರ್ಮಿಸಿದ್ದ ಸಿಮೆಂಟ್ ಬ್ಲಾಕ್ ಗಳು ನಿನ್ನೆ ಮಧ್ಯಾಹ್ನ ಒಮ್ಮಿಂದೊಮ್ಮೆಲೆ ಕುಸಿದುಬಿದ್ದು ಮೇಲ್ಸೇತುವೆ ಶಿಥಿಲಗೊಂಡಿದೆ.
ಹತ್ತು ವರ್ಷಗಳ ಹಿಂದೆ ನಿರ್ಮಿಸಿದ ಸೇತುವೆ ಸೇರಿದಂತೆ ಲಕ್ಷ್ಮೇಶ್ವರ ಹುಬ್ಬಳ್ಳಿ ಮಧ್ಯದ 55ಕಿಮೀ ರಸ್ತೆಯುದ್ದಕ್ಕೂ ಬರುವ ಸಿಡಿಗಳು ಕುಸಿದ್ದಿದ್ದು ಪ್ರಯಾಣಿಕರು ಬಸ್ಸಿನಲ್ಲಿ ಸಂಚರಿಸುವಾಗ ಎಡಗೈ ಮುಷ್ಟಿಯಲ್ಲಿ ಜೀವ ಹಿಡಿದುಕೊಂಡು ಕುಳಿತುಕೊಳ್ಳುವ ಪರಿಸ್ಥಿತಿ ಇದೆ.
ಶಿರೂರು ಸೇತುವೆಯ ಮೇಲೆ ಬಿರುಕುಬಿಟ್ಟಿದ್ದು ಅದು ಕಾಣದಂತೆ ಸೇತುವೆ ಎರಡು ಬದಿ ಡಾಂಬರ್ ಹಾಕಿ ತೇಪೆ ಮಾಡಲಾಗಿದೆ.
ಸೇತುವೆ ಅಭದ್ರಗೊಂಡಿರುವುದರಿಂದ ನಿನ್ನೆ ಮಧ್ಯಾಹ್ನದಿಂದಲೇ ಎರಡೂ ಬದಿಗೆ ಬೃಹತ್ ಗಾತ್ರದ ಮಣ್ಣು ಹಾಕಿ ರಸ್ತೆ ಬಂದ್ ಮಾಡಲಾಗಿದೆ. ಒಟ್ಟಾರೆ ಹುಬ್ಬಳ್ಳಿ ಲಕ್ಷ್ಮೇಶ್ವರ ಮಧ್ಯದ 55 ಕಿಲೋಮೀಟರ್ ರಸ್ತೆಯುದ್ದಕ್ಕೂ ಬರುವ ಸಿಡಿಗಳು ಕುಸಿದಿದ್ದು ಅದು ನೂಲ್ವಿ ಕುಂದಗೋಳ ಪಶುಪತಿಹಾಳ ಮಧ್ಯದ ಸಿಡಿಗಳು ಕುಸಿ ಬೀಳುತ್ತಿದ್ದು ರಾಜ್ಯ ಹೆದ್ದಾರಿ ಲೋಕೋಪಯೋಗಿ ಇಲಾಖೆಯವರು ಮತ್ತು ಗುತ್ತಿಗೆದಾರರು ಎಚ್ಚೆತ್ತು ಸೂಕ್ತ ಕ್ರಮಕೈಗೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.