ಶಿಥಿಲಗೊಂಡ ಕೋಣೆಗಳ ತೆರವುಗೊಳಿಸಲು ರೈತ ಸಂಘ ಒತ್ತಾಯ

ದೇವದುರ್ಗ.ಆ.೬-ಪಟ್ಟಣದಲ್ಲಿರುವ ಸರ್ಕಾರಿ ಶಾಲೆಗಳಲ್ಲಿಗುಣಮಟ್ಟದ ಶಿಕ್ಷಣ ಹಾಗೂ ಶಿಥಿಲಗೊಂಡ ಶಾಲಾ ಕೋಣೆಗಳನ್ನು ತೆರವುಗೊಳಿಸಬೇಕೆಂದು ಶುಕ್ರವಾರ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು ಗ್ರಾ.ಪಂ ಅಧ್ಯಕ್ಷರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿ ೫ ಪ್ರಾಥಮಿಕ ಶಾಲೆಗಳು ಇದ್ದು, ಬಹುತೇಕ ಶಾಲಾ ಕಟ್ಟಡಗಳು ಶಿಥಿಲಗೊಂಡಿವೆ. ತಕ್ಷಣವೇ ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಿಸಬೇಕು. ಅಲ್ಲದೇ ಶಿಕ್ಷಕರು ಸರಿಯಾಗಿ ಪಾಠ ಮಾಡದೇ ಇರುವುದರಿಂದ ಬಹುತೇಕ ಮಕ್ಕಳಿಗೆ ಕನ್ನಡ ಭಾಷೆ ಓದೂ, ಬರಹ ಕೂಡ ಬಾರದಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಎಲ್ಲಾ ಶಾಲೆಗಳಲ್ಲಿ ಶೇ೯೦ ರಷ್ಟು ಮಕ್ಕಳು ಎಸ್.ಸಿ ಹಾಗೂ ಎಸ್.ಟಿ ವರ್ಗಾವಕ್ಕೆ ಸೇರಿದ್ದಾರೆ.
ಇನ್ನೂ ಎರಡು ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಬಾಲಕರ ಪ್ರೌಢ ಶಾಲೆಯಲ್ಲಿ ಕೋಣೆಗಳು ಉತ್ತಮ ಸ್ಥಿತಿಯಲ್ಲಿ ಇದೆ. ಅದರೆ, ಅನೇಕ ವರ್ಷದಿಂದ ಮುಖ್ಯೋಪಾಧ್ಯಾಯ ಹುದ್ದೆ ಖಾಲಿಯೇ ಇದೆ.
ಅದರೆ, ಸರ್ಕಾರಿ ಕನ್ಯಾ ಪ್ರೌಢ ಶಾಲೆಯಲ್ಲಿ ೩೭೧ ವಿದ್ಯಾರ್ಥಿನಿಯರಿಗೆ ಮೂರು ಕೋಣೆಗಳು ಮಾತ್ರವೇ ಇವೆ. ಅಲ್ಲದೇ ಕೆಲವು ಶಿಕ್ಷಕರು ಶಾಲೆಗೆ ಸರಿಯಾಗಿ ಬಾರದೇ ಗೈರಾದರೂ ಅವರ ಮೇಲೆ ಯಾವುದೇ ಕ್ರಮ ಜರುಗಿಸಿಲ್ಲ. ಈಚೆಗೆ ತಾ.ಪಂ ಇ.ಓ ಶಾಲೆಗೆ ಭೇಟಿ ನೀಡಿದಾಗ ಮುಖ್ಯ ಗುರು ಸೇರಿ ಮೂರು ಜನ ಸಹ ಶಿಕ್ಷಕರು ಯಾವುದೇ ಮಾಹಿತಿ ನೀಡದೇ ಗೈರಾಗಿದ್ದರು. ಹೋಬಳಿ ಮಟ್ಟದ ಕ್ರೀಡಾ ಕೂಟ ಹಮ್ಮಿಕೊಂಡು ಗ್ರಾಮದ ಜನತೆಯಲ್ಲಿ ದೇಣಿಗೆ ಸಂಗ್ರಹಿಸಿ ಕ್ರೀಡಾ ಕೂಟ ಕೈಬಿಟ್ಟಿದ್ದಾರೆ.
ಇಂತಹ ಸಮಸ್ಯೆ ಗಳಿಂದ ಜಾಲಹಳ್ಳಿ ಗ್ರಾಮದಲ್ಲಿನ ಸರ್ಕಾರಿ ಶಾಲೆಗಳ ಸ್ಥಿತಿ ತುಂಬಾ ಹದಗೆಟ್ಟ ಹೋಗಿದೆ. ತಕ್ಷಣವೇ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಹಾಗೂ ಶಿಕ್ಷಣ ಇಲಾಖೆ ಪತ್ರ ಬರೆಯಬೇಕೆಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ನಿಂಗಪ್ಪ ಪೂಜಾರಿ, ಸಂಘದ ಅಧ್ಯಕ್ಷ ದುರಗಪ್ಪ ನಾಯಕ, ಕಾರ್ಯದರ್ಶಿ ಮೌನೇಶ ದಾಸರ್, ಮುಖಂಡರಾದ ಬಸವರಾಜ ತೇಕೂರ್, ರಂಗನಾಥ ನಾಯಕ,ಹನುಮಂತಪ್ಪ ಮಡಿವಾಳ ಇದ್ದರು.