ಬ್ಯಾಡಗಿ,ಮೇ31 : ತುಂಬಿದ ಗೃಹಪಯೋಗಿ ಸಿಲೆಂಡರ್ ಒಂದು ಇದ್ದಕ್ಕಿದ್ದಂತೆ ಬ್ಲಾಸ್ಟ್ ಆಗಿದ್ದು ಮನೆಯಲ್ಲಿಟ್ಟಿದ್ದ ರೂ.10 ಸಾವಿರ ನಗದು ಸೇರಿದಂತೆ ರೂ.20 ಲಕ್ಷ ಮೌಲ್ಯದ ಆಸ್ತಿಪಾಸ್ತಿ ಹಾನಿಗೊಂಡು ಮನೆಯಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ತಾಲೂಕಿನ ಹೊಸ ಶಿಡೇನೂರ ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಮದ ಯಶೋಧರಗೌಡ ದೊಡ್ಡಗೌಡ್ರ ಎಂಬುವರ ಮನೆಯಲ್ಲಿ ಈ ಘಟನೆ ಜರುಗಿದ್ದು ಸಿಲಿಂಡರ್ ಬ್ಲಾಸ್ಟ್ ಆಗುತ್ತಿದ್ದಂತೆ ಕಾಣಿಸಿಕೊಂಡ ಬೆಂಕಿಯು ಕ್ಷಣಾರ್ಧದಲ್ಲೇ ಇಡೀ ಮನೆಯನ್ನು ಆವರಿಸಿದೆ, ಈ ವೇಳೆ ಗ್ರಾಮಸ್ಥರು ಬೆಂಕಿ ನಂದಿಸಲು ಹರಸಾಹಸ ಪಟ್ಟರೂ ಸಾಧ್ಯವಾಗಲಿಲ್ಲ. ಮಾಳಿಗೆ ಮನೆಯಾಗಿದ್ದರಿಂದ ಕಟ್ಟಿಗೆಯಿಂದ ಮಾಡಿದ್ದ ಅಡ್ಡ ತೊಲೆ ಕಂಬಗಳು ಕೂಡ ಬೆಂಕಿಗಾಹುತಿಯಾಗಿದ್ದು ಭಾಗಶಃ ಮನೆಯು ಸುಟ್ಟು ಕರುಕಲಾಗಿದೆ.
ಘಟನೆ ಹಿನ್ನೆಲೆ: ಸೋಮವಾರವಷ್ಟೇ ಪಟ್ಟಣದ ಅರವಿಂದ ಗ್ಯಾಸ್ ಏಜೆನ್ಸಿ ಅವರಿಂದ ಹೊಸ ಸಿಲೆಂಡರ್ ಖರೀದಿಸಿದ್ದ ಯಶೋಧರಗೌಡ ಮೊದಲಿದ್ದ ಸಿಲೆಂಡರ್ ಖಾಲಿಯಾಗುತ್ತಿದ್ದಂತೆ ಹೊಸದನ್ನು ಜೋಡಿಸಿದ್ದಾರೆ, ಮೊದಲು ಟೀ ಮಾಡಿ ಕೊಂಡು ಕುಡಿದಿದ್ದ ಕುಟುಂಬಸ್ಥರು ಬಳಿಕ ಅನ್ನ ಮಾಡಲೆಂದು ಹೋದ ವೇಳೆ ಈ ದುರ್ಘಟನೆ ನಡೆದಿದೆ.
ಮಧ್ಯದಲ್ಲೇ ಸೀಳಿದ ಸಿಲೆಂಡರ್:ಖರೀದಿಸಿದ್ದ ಹೊಸ ಸಿಲೆಂಡರ್ ಮಧ್ಯದಲ್ಲೇ ಸೀಳಿದ್ದು ಬ್ಲಾಸ್ಟ್ ಆಗಲು ಕಾರಣವೆಂದು ಪೋಲಿಸ್ ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ, ಬ್ಲಾಸ್ಟ್ ಆಗುತ್ತಿದ್ದಂತೆ ಮನೆಯಲ್ಲಿದ್ದ ಎಲ್ಲರೂ ಹೊರಗೋಡಿ ಬಂದು ಜೀವ ಉಳಿಸಿಕೊಂಡಿದ್ದಾರೆ, ಬಳಿಕ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ವಾಹನವು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದೆ.
ಘಟನಾ ಸ್ಥಳಕ್ಕೆ ಶಾಸಕ ಶಿವಣ್ಣನವರ ಭೇಟಿ:ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ತೆರಳಿದ ನೂತನ ಶಾಸಕ ಬಸವರಾಜ ಶಿವಣ್ಣನವರ ಯಶೋಧರಗೌಡ ದೊಡ್ಡಗೌಡ್ರ ಕುಟುಂಬದವರಿಗೆ ಸಾಂತ್ವನದ ಮಾತುಗಳನ್ನು ತಿಳಿಸಿದರು, ಅಲ್ಲದೇ ಪರಿಹಾರಾರ್ಥವಾಗಿ 10 ಸಾವಿರ ರೂ.ಸ್ಥಳದಲ್ಲೇ ನೀಡಿದ ಅವರು, ಘಟನೆಯ ಕುರಿತು ಆದಷ್ಟು ಬೇಗನೆ ವರದಿ ಸಲ್ಲಿಸಿ ಸಂತ್ರಸ್ಥ ಕುಟುಂಬಕ್ಕೆ ಪರಿಹಾರ ವಿತರಣೆಗೆ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.