ಶಿಗ್ಗಾಂವ್‌ನಿಂದಲೇ ಸ್ಪರ್ಧೆ ಬೊಮ್ಮಾಯಿ

ಬೆಂಗಳೂರು,ಏ.೩-ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾಂವ್ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ. ಕ್ಷೇತ್ರ ಬದಲಾಯಿಸುತ್ತೇನೆ ಎಂಬುದು ಆಧಾರರಹಿತ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.ಬೆಂಗಳೂರಿನಲ್ಲಿಂದು ಬಿಜೆಪಿಯ ಮಾಧ್ಯಮ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಭಿವೃದ್ಧಿಯ ಮೇಲೆ ಮತ ಕೇಳುತ್ತದೆ. ಮತ್ತೆ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಎಂದರು.ಇಡೀ ದೇಶದಲ್ಲೇ ಬಿಜೆಪಿ ಅತೀ ದೊಡ್ಡ ಪಕ್ಷ, ಕರ್ನಾಟಕದಲ್ಲೂ ಆಳವಾಗಿ ಬೇರೂರಿರುವ ಪಕ್ಷವಾಗಿದೆ. ಯಡಿಯೂರಪ್ಪರವರು ಏಕಾಂಗಿಯಾಗಿ ಪಕ್ಷ ಬೆಳೆಸಿದರು. ಅನಂತ್‌ಕುಮಾರ್ ಸಹ ಪಕ್ಷ ಸಂಘಟನೆಗೆ ದುಡಿದವರು ಎಂದರು.ಪ್ರತಿ ಚುನಾವಣೆಯನ್ನು ಬಿಜೆಪಿ ಯಡಿಯೂರಪ್ಪರವರು ನೇತೃತ್ವದಲ್ಲೇ ಎದುರಿಸಿದೆ. ಅದರಂತೆ ಈ ಬಾರಿಯೂ ಯಡಿಯೂರಪ್ಪ ನಾಯಕತ್ವದಲ್ಲೇ ಚುನಾವಣೆ ಎದುರಿಸುತ್ತೇವೆ. ಪಕ್ಷವನ್ನು ಕಟ್ಟಿ ಬೆಳೆಸಿದವರು ಯಡಿಯೂರಪ್ಪ ಎಂದರು.ಬಿಜೆಪಿ ಸರ್ಕಾರ ರಾಜ್ಯದಲ್ಲಿ ಒಳ್ಳೆ ಕೆಲಸ ಮಾಡಿದೆ. ರೈತರಿಗೆ, ಮಹಿಳೆಯರಿಗೆ, ಯುವಕರಿಗೆ ಪರಿಶಿಷ್ಟ ಜಾತಿ ಪಂಗಡದವರಿಗೆ ಯೋಜನೆಗಳನ್ನು ಜಾರಿ ಮಾಡಿದೆ.ಕೇಂದ್ರದ ನರೇಂದ್ರಮೋದಿ ಸರ್ಕಾರ ಸಹ ದೊಡ್ಡ ಸಾಧನೆ ಮಾಡಿದೆ. ಈ ಡಬಲ್ ಇಂಜಿನ್ ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸುತ್ತೇವೆ. ಕೊರೊನಾ, ಪ್ರವಾಹಗಳ ಮಧ್ಯೆಯೂ ಮೂರು ವರ್ಷಗಳಲ್ಲಿ ಸರ್ವಾಂಗೀಣ ಅಭಿವೃದ್ಧಿ ಮಾಡಿದ್ದೇವೆ. ನೀವೇನು ಮಾಡಿತ್ತೀರಿ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ಸಿದ್ದರಾಮಯ್ಯರವರ ಅಧಿಕಾರಾವಧಿಯಲ್ಲೇ ಏನೂ ಆಗಿಲ್ಲ ಎಂದು ಸಿದ್ದರಾಮಯ್ಯ ಮಾತಿನ ಶೈಲಿಯಲ್ಲೇ ತಿರುಗೇಟು ನೀಡಿದರು.ಈ ಚುನಾವಣೆಂiiಲ್ಲಿ ನಾವು ಸಾಧನೆಯ ವರದಿಯ ಮೇಲೆ ಮತ ಕೇಳುತ್ತೇವೆ, ಕಾಂಗ್ರೆಸ್‌ನವರು ದುರಾಡಳಿತದ ಬಗ್ಗೆಯೂ ಜನರಲ್ಲಿ ಹೇಳುತ್ತೇವೆ. ಕಾಂಗ್ರೆಸ್‌ನವರು ಅಧಿಕಾರದಲ್ಲಿದ್ದಾಗ ಧರ್ಮ ಒಡೆಯುವ ಕೆಲಸ ಮಾಡಿದ್ದರು. ನಾವು ಜೋಡಣೆ ಮಾಡಿದ್ದೇವೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕೋಮುಗಲಭೆಯಾಗಿದೆ. ಕಾನೂನು ಸುವ್ಯವಸ್ಥೆ ಕುಸಿದಿತ್ತು. ಕಾಂಗ್ರೆಸ್ ಅವಧಿಯಲ್ಲೇ ೫೦ಕ್ಕೂ ಹೆಚ್ಚು ಹಗರಣಗಳು ಆಗಿದ್ದವು. ಹಗರಣ ಬಯಲಿಗೆ ಬರುತ್ತದೆ ಎಂದು ಲೋಕಾಯುಕ್ತವನ್ನು ನಿಷ್ಕ್ರೀಯಗೊಳಿಸಿ ಎಸಿಬಿಯನ್ನು ರಚನೆ ಮಾಡಿ ಜನರ ಕಣ್ಣಿಗೆ ಮಣ್ಣು ಎರಚಿದರು. ಇದನ್ನು ನೆನೆಸಿಕೊಂಡರೆ ಕರಾಳ ದಿನ ನೆನಪಿಗೆ ಬರುತ್ತದೆ ಎಂದರು.ಬಿಜೆಪಿ ಸರ್ಕಾರದ ವಿರುದ್ಧ ಶೇ. ೪೦ರಷ್ಟು ಕಮಿಷನ್ ಆರೋಪ ಮಾಡಿದರು.

ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಾಧ್ಯಮ ಕೇಂದ್ರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತಿತರರು ಇದ್ಧಾರೆ.

ರಾಜಕೀಯಕ್ಕಾಗಿ ಗುತ್ತಿಗೆದಾರರ ಸಂಘವನ್ನು ಬಳಸಿಕೊಂಡರು. ಈಗಲೂ ಹೇಳುತ್ತೇನೆ. ದಾಖಲೆ ಕೊಡಲು ತನಿಖೆ ಮಾಡಿಸುತ್ತೇನೆ. ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಕಾಂಗ್ರೆಸ್‌ಗೆ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.ಪರಿಶಿಷ್ಟ ಜಾತಿ ಪಟ್ಟಿಯಿಂದ ಬಂಜಾರ, ಭೋವಿ,ಕೊರಮ, ಕೊರಚ ಈ ನಾಲ್ವರನ್ನು ತೆಗೆಯುವ ಪ್ರಶ್ನೆಯೇ ಇಲ್ಲ, ಈ ಬಗ್ಗೆ ಅಪಪ್ರಚಾರ ನಡೆದಿದೆ. ಈ ಸಮುದಾಯಗಳಿಗೆ ಮೀಸಲಾತಿ ಪ್ರಮಾಣ ಹೆಚ್ಚಾಗಿದೆ. ಆದರೂ ಕಾಂಗ್ರೆಸ್‌ನವರು ಅಪಪ್ರಚಾರ ಮಾಡಿ ರಾಜಕೀಯವಾಗಿ ಬಳಸಿಕೊಳ್ಳಲು ಪ್ಲಾನ್ ಮಾಡಿದ್ದಾರೆ. ನಾವು ರಾಜಕೀಯವಾಗಿ ಇದನ್ನೆಲ್ಲ ಎದುರಿಸುತ್ತೇವೆ ಎಂದರು.ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್‌ಕುಮಾರ್‌ಕಟೀಲು, ಚುನಾವಣಾ ನಿರ್ವಹಣಾ ಸಮಿತಿ ಅಧ್ಯಕ್ಷೆ ಕೇಂದ್ರ ಸಚಿವೆ ಶೋಭಾಕರಂದ್ಲಾಜೆ, ಕೇಂದ್ರ ಸಚಿವರುಗಳಾದ ಭಗವಾನ್ ಕೂಬಾ, ರಾಜೀವ್ ಚಂದ್ರಶೇಖರ್‌ಸೇರಿದಂತೆ ಹಲವು ಶಾಸಕರು ಸಂಸದರು ಉಪಸ್ಥಿತರಿದ್ದರು.